Friday, 29th November 2024

ಬಿಸಿಲಿನ ತಾಪಕ್ಕೆ ಜನ ಹೈರಾಣ, ಹಣ್ಣಿನ ವ್ಯಾಪಾರ ಜೋರು

ಕಳೆದೆರೆಡು ದಿನಗಳಿಂದ ತಾಪಮಾನ ಹೆಚ್ಚಳ

ಬಿರುಬಿಸಿಲಿಗೆ ತಂಪು ಪಾನೀಯಕ್ಕೆ ಮೊರಹೋದ ಜನ

ಬಳ್ಳಾರಿಯಲ್ಲಿ 37 ಡಿಗ್ರಿ, ಹೊಸಪೇಟೆ 36 ಡಿಗ್ರಿ ಉಷ್ಣಾಂಶ

ವಿಶೇಷ ವರದಿ: ಅನಂತ ಪದ್ಮನಾಭ ರಾವ್

ಹೊಸಪೇಟೆ: ಹೊರಗಡೆ ಕಾಲಿಟ್ಟರೆ ಕಾದ ಹಚ್ಚಿನ ಮೇಲಿಟ್ಟ ಅನುಭವ, ಚುರುಗುಟ್ಟುವ ಸೂರ್ಯನ ಪ್ರಕರತೆಗೆ ನೆರಳು
ಬಯಸುವ ಜನ.!

ಕಳೆದ ಎರಡ್ಮೂರು ದಿನಗಳಿಂದ ಬಳ್ಳಾರಿ, ಹೊಸಪೇಟೆ ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಸೇರಿದಂತೆ ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ನಾನಾ ಕೆಲಸ ಕಾರ್ಯಗಳಿಗೆ ಹೊರಗಡೆ ಬರುವವರು ಬಿಸಿಲಿನ ಪ್ರಕರತೆಗೆ ಬೇವರಿಳಿಸುತ್ತಿದ್ದಾರೆ.

ತಾಪ ಹೆಚ್ಚಳ: ಕಳೆದ ಎರಡ್ಮೂರು ದಿನಗಳಿಂದ ಬಳ್ಳಾರಿ ಹಾಗೂ ಹೊಸಪೇಟೆ ನಗರದಲ್ಲಿ ತಾಪಮಾನ ಹೆಚ್ಚಾಗಿದೆ. ಬಳ್ಳಾರಿ ಯಲ್ಲಿ ಫೆ. 27 ರಂದು 36 ಹಾಗೂ 28ರಂದು 37 ಡಿಗ್ರಿ ಉಷ್ಣಾಂಶ ಮತ್ತು ಮಾರ್ಚ್ 1ಕ್ಕೆ 37 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು ಹೊಸಪೇಟೆ ನಗರದಲ್ಲಿಯೂ ಕ್ರಮವಾಗಿ 35, 36 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು ಇನ್ನೂ ಎರಡ್ಮೂರು ದಿನಗಳಲ್ಲಿ ತಾಪಮಾನ 36 ಹಾಗೂ 37 ಡಿಗ್ರಿ ಉಷ್ಣಾಂಶದಲ್ಲಿಯೇ ಮುಂದುವರೆಯಲಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.

ಮಾರುಕಟ್ಟೆಗೆ ಹಣ್ಣುಗಳು ಲಗ್ಗೆ: ಬಳ್ಳಾರಿ ನಗರದ ಗಡಿಗಿಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಡಿಸಿ ಕಚೇರಿ ಸುತ್ತಮುತ್ತ, ತಾಲೂಕು ಕಚೇರಿ, ವಿಮ್ಸ್‌ ವೃತ್ತ ಸುತ್ತಮುತ್ತ ಪ್ರದೇಶಗಳಲ್ಲಿ ಕಲ್ಲಂಗಡಿ, ಕರಬೂಜ, ಪಪ್ಪಾಯಿ ಹಣ್ಣಿಗೆ ಭರ್ಜರಿ ಬೇಡಿಕೆ
ಕುದುರಿದರೆ ಇತ್ತ ಹೊಸಪೇಟೆ ನಗರದಲ್ಲಿ ದ್ರಾಕ್ಷಿ, ಮೂಸಂಬಿ, ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಹೆಚ್ಚಿದ ತಂಪು ಪಾನೀಯಕ್ಕೂ ಬೇಡಿಕೆ: ದಿನದಿಂದ ದಿನಕ್ಕೆ ಬಿಸಿಲಿನ ಪ್ರಕರತೆಯಿಂದ ಬಚಾವ್ ಆಗಲು ನಾನಾ ಭಾಗಗಳಿಂದ ನಗರಕ್ಕೆ ಆಗಮಿಸುವ ಜನರು ಮಜ್ಜಿಗೆ, ಕಬ್ಬಿಣ ಜ್ಯೂಸ್, ಎಳೆನೀರು, ಪುದೀನ್ ಜ್ಯೂಸ್‌ಗೆ ಜನಸಾಮಾನ್ಯರು ಮೊರೆಹೋಗಿದ್ದಾರೆ.
ಬಿಸಿಲಿನ ಪ್ರಕರತೆ ಕೆಲವರಿಗೆ ಹೈರಾಣವನ್ನಾಗಿಸಿದ್ದರೆ, ಚಿಕ್ಕಪುಟ್ಟ ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಜೇಬು ಭರ್ತಿ ಯಾಗುತ್ತಿದೆ.