Thursday, 12th December 2024

ದ್ವಾರಕೀಶ್ ಪಂಚಭೂತಗಳಲ್ಲಿ ಲೀನ

ಬೆಂಗಳೂರು: ಬದುಕಿನ ಯಾತ್ರೆಯನ್ನಮುಗಿಸಿದ ದ್ವಾರಕೀಶ್ ಇಂದು ಪಂಚಭೂತಗಳಲ್ಲಿ ಲೀನರಾದರು. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ದ್ವಾರಕೀಶ್‌ ಅವರ ಹಿರಿಯ ಪುತ್ರ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದರು.

ಈ ವೇಳೆ ಕುಟುಂಬದವರು ಹಾಗೂ ಆಪ್ತರು ಹಾಜರಿದ್ದರು. ಬ್ರಾಹ್ಮಣ ಪದ್ಧತಿಯಂತೆ, ಅಂತಿಮ ವಿಧಿ ವಿಧಾನ ನೆರವೇರಿಸ ಲಾಯಿತು.

 

ಅಂತಿಮ ಸಂಸ್ಕಾರಕ್ಕೂ ಮೊದಲು ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವವಂದನೆ ನೀಡಿದರು. ಇನ್ನೂ ಇದಕ್ಕೂ ಮುನ್ನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿನ ಗುಳಿಮಂಗಳದಲ್ಲಿನ ಮನೆಯಲ್ಲಿದ್ದ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಸುದೀಪ್, ಯಶ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿ ಕನ್ನಡ ಚಿತ್ರರಂಗದ ಅನೇಕ ತಾರೆಯರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು. ಭಾವುಕರಾದರು.

ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‘ನಾನು ದ್ವಾರಕೀಶ್​​ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್​​​ನಲ್ಲಿ ಹೋಗಿದ್ವಿ, ಆ ಸಮಯದಲ್ಲಿ ಅನೇಕ ವಿಚಾರಗಳನ್ನ ಚರ್ಚೆ ಮಾಡಿದ್ವಿ ಎಂದು ಸಿಎಂ ಸಿದ್ದರಾಮಯ್ಯ ದ್ವಾರಕೀಶ್​ ನೆನೆದು ಭಾವುಕರಾದರು.

ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಹಾಸ್ಯನಟನಾಗಿ ಮಾತ್ರವಲ್ಲ, ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದ್ದರು. ಡಾ. ರಾಜ್ ಕುಮಾರ್ ಮತ್ತು ದ್ವಾರಕೀಶ್ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು ಎಂದು ದ್ವಾರಕೀಶ್ ಅವರ ಕಲಾಸೇವೆ ಮೆಚ್ಚಿಕೊಂಡು ಮನದ ಮಾತನ್ನ ಹಂಚಿಕೊಂಡಿದ್ದಾರೆ.

ದ್ವಾರಕೀಶ್ ಅವರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣುಗಳನ್ನು ದಾನಮಾಡಿ ಸಮಾಜಕ್ಕೆ ಮಾದರಿಯಾಗಿ ದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಕರುನಾಡು ಬಡವಾಗಿದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ.