ಬೆಂಗಳೂರು: ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್ ನೀಡಲಾಗುವ ‘ಗೆಟ್-ಸೆಟ್ ಗೋ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಈವರೆಗೆ ಸಿಇಟಿ ಮತ್ತು ನೀಟ್ಗೆ ಮಾತ್ರ ತರಬೇತಿ ನೀಡಲಾ ಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್ಲೈನ್ ತರಬೇತಿ ಕೊಡಲಾಗುವುದು ಎಂದರು.
ಈ ಕ್ರಮದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಮಗ್ರ ಕಲಿಕಾ ವ್ಯವಸ್ಥೆ (ಎಲ್ಎಂಎಸ್) ಕೂಡ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಕೈಗೊಂಡ ಕ್ರಮಗಳು ಮೆಚ್ಚುವಂತಹದ್ದು ಎಂದು ಹೇಳಿದರು.
‘ಗೆಟ್ ಸೆಟ್ ಗೋʼ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ‘ಗೆಟ್ ಸೆಟ್ ಗೋʼ ಮೂಲಕ ಕೋಚಿಂಗ್ ವ್ಯವಸ್ಥೆ ಇರುತ್ತದೆ. ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಗೆಟ್ ಸೆಟ್ ಗೋ ಮೂಲಕ ಅಧ್ಯಯನ ಮಾಡಬಹುದು ಎಂದು ಡಿಸಿಎಂ ಹೇಳಿದರು.
ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ‘ಗೆಟ್ ಸೆಟ್ ಗೋʼ ಕೋಚಿಂಗ್ ವ್ಯವಸ್ಥೆ ರೂಪಿಸಲಾಗಿದೆ.
ದೇಶದ ಯಾವ ವಿದ್ಯಾರ್ಥಿ ಬೇಕಾದರೂ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್ ಮಾಡಬಹುದು. ವೆಬ್ಸೈಟ್, ಯುಟ್ಯೂಬ್ ಅಥವಾ ಗೆಟ್ ಸೆಟ್ ಗೋ ಆಯಪ್ ಮೂಲಕ ಕೋಚಿಂಗ್ ಪಡೆಯಬಹುದು.