Friday, 18th October 2024

World Handwashing Day : ಕೈ ತೊಳೆಯುವುದೆಂದರೆ ಅನಾರೋಗ್ಯವನ್ನು ಓಡಿಸಿದಂತೆ!

Global Handwashing Day

ಕೈ ತೊಳೆಯುವುದಕ್ಕೆ ಎಷ್ಟೊಂದು ಅರ್ಥಗಳಿವೆ ಗೊತ್ತೇ? ಸುಮ್ಮನೆ ಕೈಗೊಂದಿಷ್ಟು ನೀರು ಹಾಕಿಕೊಳ್ಳುವುದಲ್ಲ, ಬೇಡದ್ದನ್ನು ನಿವಾಳಿಸಿ ಕೈತೊಳೆದುಕೊಳ್ಳುವುದು, ಸೇಡಿಗಾಗಿ ಕೈತೊಳೆದು ಬೆನ್ನು ಹತ್ತುವುದು, ಮಡಿ-ಮುಸುರೆಗಳಿಗಾಗಿ ಕೈ ತೊಳೆಯುತ್ತಲೇ ಇರುವುದು… ಇಷ್ಟೆಲ್ಲ ಅರ್ಥಗಳಿರುವಾಗ ಸುಮ್ಮನೆ ಕೈ ತೊಳೆದುಕೊಳ್ಳುವಂತಿಲ್ಲ. ಅದರಲ್ಲೂ ಕೈ ತೊಳೆಯುವುದಕ್ಕೆ (Global Handwashing Day) ಕೋವಿಡ್‌ ಹಾಗೂ ನಂತರದ ದಿನಗಳಲ್ಲಿ ದೊರೆತಷ್ಟು ಮಹತ್ವ, ಮನುಷ್ಯನ ಈವರೆಗಿನ ಚರಿತ್ರೆಯಲ್ಲಿ ದೊರೆತಿರಲಿಕ್ಕಿಲ್ಲ.

ಅಕ್ಟೋಬರ್‌ ತಿಂಗಳ 15ನೇ ದಿನವನ್ನು ಜಾಗತಿಕ ಕೈ ತೊಳೆಯುವುದಕ್ಕೆ ಇರುವ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಉದ್ದೇಶದಿಂದ ದಿನ ಎಂದು ಗುರುತಿಸಲಾಗಿದೆ. ಈ ಬಾರಿಯ ಘೋಷವಾಕ್ಯ- ಸ್ವಚ್ಛ ಕರಗಳು ಇನ್ನೂ ಏಕೆ ಮುಖ್ಯ?

ಈ ಸುದ್ದಿಯನ್ನೂ ಓದಿ | Job News: KPTCLನಿಂದ 2,975 ಹುದ್ದೆಗಳಿಗೆ ಅರ್ಜಿ ಆಹ್ವಾನ, ನ.20 ಕೊನೆಯ ದಿನ

ಆರೋಗ್ಯ ರಕ್ಷಣೆಯಲ್ಲಿ ಕೈಗಳ ಸ್ವಚ್ಛತೆಯ ಪಾತ್ರವೇನು ಎಂಬುದನ್ನು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಜಗತ್ತು ಅರಿತಿದೆ. ಆದರೆ ಕೈ ತೊಳೆದುಕೊಳ್ಳಿ ಎನ್ನುವ ಈ ಸಂದೇಶ ಹೊರಟಿದ್ದು 2008ರಲ್ಲಿ, ಅಂದರೆ ಕೋವಿಡ್‌ಗಿಂತ ಮೊದಲೆ. ಆರೋಗ್ಯ ರಕ್ಷಣೆಗೆ ಅತ್ಯಂತ ಸರಳ ಮಾರ್ಗವಿದು ಎಂಬುದನ್ನು ವೈದ್ಯಲೋಕವೂ ಒಪ್ಪಿಕೊಂಡಿದೆ. ಅದರಲ್ಲೂ ಶೀತ, ಜ್ವರ, ಶ್ವಾಸಕೋಶದ ಸೋಂಕುಗಳು, ಡಯರಿಯಾ ಮುಂತಾದ ಹೊಟ್ಟೆಯ ಸೋಂಕುಗಳನ್ನು ತಡೆಯುವಲ್ಲಿ ಕೈಗಳ ಸ್ವಚ್ಛತೆ ಬಹಳಷ್ಟು ಉಪಕಾರ ಮಾಡಬಲ್ಲದು. ಉತ್ತಮವಾದ ಕೈ ತೊಳೆಯುವ ಸೋಪು ಮತ್ತು ಸ್ವಚ್ಛ ನೀರು- ಇವಿಷ್ಟೇ ಸಾಕು ಈ ಪರಿಣಾಮವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು. ಅಂಕಿ-ಅಂಶಗಳ ಪ್ರಕಾರ-

·ಕೈಗಳ ಸ್ವಚ್ಛತೆಯಿಂದ ಡಯರಿಯಾದಿಂದ ನರಳುವ ಪ್ರಮಾಣವನ್ನು ಶೇ. 40 ರವರೆಗೆ ಕಡಿಮೆ ಮಾಡಬಹುದು.
·ಹೊಟ್ಟೆಯ ಸೋಂಕಿನಿಂದಾಗಿ ಮಕ್ಕಳು ಶಾಲೆಗೆ ಗೈರುಹಾಜರಾಗುವುದನ್ನು ಶೇ. 57ರವರೆಗೂ ತಗ್ಗಿಸಬಹುದು.
·ಪ್ರತಿರೋಧಕ ಶಕ್ತಿ ಕುಂಠಿತವಾಗಿ ಇರುವವರಲ್ಲಿ, ಸೋಂಕುಗಳ ಪ್ರಮಾಣವನ್ನು ಶೇ. 58ರವರೆಗೆ ಕಡಿಮೆ ಮಾಡಬಹುದು.
·ಶ್ವಾಸಕೋಶದ ಸೋಂಕಿನ ಪ್ರಮಾಣವನ್ನು 16%- 21% ವರೆಗೆ ಕಡಿಮೆ ಮಾಡಬಹುದು.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ತುರ್ತು ಸನ್ನಿವೇಶಗಳು ಉಂಟಾದರೆ, ಅದರ ಪರಿಣಾಮವನ್ನು ಆಯಾ ಸಮಾಜ ಅಥವಾ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಭರಿಸಬೇಕಾಗುತ್ತದೆ. ಹಾಗಾಗಿ ಸೋಂಕುಗಳ ಪ್ರಸರಣ ಮತ್ತು ರೋಗ ತಡೆಗಟ್ಟುವಿಕೆಗೆ ಮಹತ್ವ ನೀಡಬೇಕಾಗುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ, ಹೆಚ್ಚಿನ ಗೋಜಲಿಲ್ಲದೆ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಮುನ್ನೆಚ್ಚರಿಕೆಯ ವಿಧಾನವಿದು. ಅದರಲ್ಲೂ ಆರೋಗ್ಯ ಸವಲತ್ತುಗಳು ಕಡಿಮೆ ಇರುವಂಥ ಸ್ಥಳಗಳಲ್ಲಂತೂ ಸ್ವಚ್ಛತೆಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾದ ಸಂಗತಿ.

ಇವು ಬೇಡ

ಕೈ ತೊಳೆಯುವಾಗ ಕೇವಲ ನೀರಾಟವಾಡಿದರೆ ಪ್ರಯೋಜನವಾಗದು. ಸೋಪು ಹಾಕಿ ಕೈ ತೊಳೆದರೆ ಮಾತ್ರವೇ ಪರಿಣಾಮಕಾರಿ. ಸೋಪು ಕೈಗೆ ತಾಗಿಸುತ್ತಿದ್ದಂತೆ ನೀರಿನಲ್ಲಿ ಕೈ ತೊಳೆಯಬೇಡಿ. ಬದಲಿಗೆ ಕನಿಷ್ಟ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಒಂದಕ್ಕೊಂದು ಉಜ್ಜಿ, ನಂತರ ತೊಳೆಯಿರಿ. ತೊಳೆದ ಕೈಗಳನ್ನು ಒರೆಸಿಕೊಳ್ಳಬೇಕೆಂದರೆ ಸ್ವಚ್ಛ ಬಟ್ಟೆಯನ್ನೇ ಉಪಯೋಗಿಸಿ. ಎಲ್ಲರೂ ಕೈ ಒರೆಸಿದ ಬಟ್ಟೆಯಲ್ಲಿ ಕೈಗಳನ್ನು ಒರೆಸಿಕೊಳ್ಳುವುದು ಸ್ವಚ್ಛತೆಯ ದೃಷ್ಟಿಯಿಂದ ಸರಿಯಲ್ಲ.

ಈ ಸುದ್ದಿಯನ್ನೂ ಓದಿ | Hostel Admission: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜಿಡ್ಡಿನ ಕೈಗಳನ್ನು ಬಿಸಿ ನೀರಲ್ಲಿ ತೊಳೆಯುವ ವಾಡಿಕೆ ಇರಬಹುದು. ಇದರಿಂದ ಸ್ವಚ್ಛತೆಗೆ ಹೆಚ್ಚಿನ ಅನುಕೂಲ ದೊರೆಯುತ್ತದೆ. ಬಿಸಿನೀರಲ್ಲಿ ಹೆಚ್ಚು ರೋಗಾಣುಗಳು ಸಾಯುವುದು ಹೌದಾದರೂ, ಕೈ ತೊಳೆಯುವಾಗ ಬಿಸಿನೀರಲ್ಲಿ ತೊಳೆಯಬೇಕೆಂದಿಲ್ಲ. ಇದರಿಂದ ಚರ್ಮದ ಶುಷ್ಕತೆ ಹೆಚ್ಚಬಹುದು. ಚರ್ಮಕ್ಕೆ ಸೋಂಕು ತಗುಲುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಬದಲಿಗೆ, ತಣ್ಣೀರಲ್ಲೇ ಕೈ ತೊಳೆದರೆ ಉತ್ತಮ. ನೀರು ಮಲಿನವಾಗಿಲ್ಲದಂತೆ ಎಚ್ಚರ ವಹಿಸಿದರೆ ಸಾಕಾಗುತ್ತದೆ.