Thursday, 19th September 2024

Global Investors Conference: ಜಾಗತಿಕ ಹೂಡಿಕೆದಾರರ ಸಮಾವೇಶ; ದೆಹಲಿಯಲ್ಲಿ ರೋಡ್‌ ಶೋಗೆ ಎಂ.ಬಿ. ಪಾಟೀಲ್‌ ಚಾಲನೆ

Global Investors Conference

ನವದೆಹಲಿ: ಮುಂದಿನ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Global Investors Conference) ಭಾಗವಹಿಸುವುದಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ಕರ್ನಾಟಕ ಸರ್ಕಾರವು ಮಂಗಳವಾರ ದೆಹಲಿಯಲ್ಲಿ ಯಶಸ್ವಿಯಾಗಿ ರೋಡ್‌ ಶೋ ನಡೆಸಿತು.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಅವರು ರೋಡ್‌ ಷೋ ಉದ್ಘಾಟಿಸಿ, ʼಇನ್ವೆಸ್ಟ್ ಕರ್ನಾಟಕ ಶೃಂಗಸಭೆ 2025ʼ ಗೆ (ಜಾಗತಿಕ ಹೂಡಿಕೆದಾರರ ಸಭೆ) ಹೂಡಿಕೆದಾರರು ಮತ್ತು ಉದ್ಯಮಗಳನ್ನು ಆಕರ್ಷಿಸಲು ರಾಷ್ಟ್ರ ರಾಜಧಾನಿಯಲ್ಲಿ ವೇದಿಕೆ ಸಿದ್ಧಗೊಳಿಸಿದರು.

ಈ ಸುದ್ದಿಯನ್ನೂ ಓದಿ | BESCOM EV Mitra App: ಇವಿ ಚಾರ್ಜಿಂಗ್‌ ಸ್ಟೇಷನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಬೆಸ್ಕಾಂ ʼಇವಿ ಮಿತ್ರʼ ಆ್ಯಪ್‌ಗೆ ಹೊಸ ರೂಪ

ʼ2025 ರ ಫೆಬ್ರವರಿ 12 ರಿಂದ 14 ರವರೆಗೆ ನಡೆಯಲಿರುವ ಈ ಸಮಾವೇಶದ ಮುಖ್ಯ ಧ್ಯೇಯವು ʼಬೆಳವಣಿಗೆಯ ಹೊಸಪರಿಕಲ್ಪನೆʼ ಆಗಿದೆ. ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಸುಸ್ಥಿರ ಹಾಗೂ ಸಮತೋಲನದ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಈ ಧ್ಯೇಯವು ಸಮರ್ಥವಾಗಿ ಪ್ರತಿಬಿಂಬಿಸುತ್ತದೆʼ ಎಂದು ಸಚಿವ ಪಾಟೀಲ ಅವರು ಈ ಸಂದರ್ಭದಲ್ಲಿ ಹೇಳಿದರು.

ʼಇನ್ವೆಸ್ಟ್ ಕರ್ನಾಟಕ ಶೃಂಗಸಭೆ 2025ʼ ಯಲ್ಲಿ 100 ಕ್ಕೂ ಹೆಚ್ಚು ಪರಿಣತರು ವಿಷಯ ಮಂಡಿಸಲಿದ್ದಾರೆ. 30ಕ್ಕೂ ಹೆಚ್ಚು ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 5,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆʼ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಉದ್ಯಮಗಳ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ | HC Mahadevappa: ಸರ್ಕಾರದ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ; ಅಧಿಕಾರಿಗಳಿಗೆ ಮಹದೇವಪ್ಪ ಸೂಚನೆ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದೆಹಲಿಯಲ್ಲಿನ ವಿವಿಧ ದೇಶಗಳ ರಾಯಭಾರಿಗಳು, ಹೈಕಮಿಷನರ್ ಗಳು ಸೇರಿದಂತೆ ಅನೇಕ ಉದ್ಯಮಿಗಳು ಹಾಜರಿದ್ದರು.