ಬೆಂಗಳೂರು: ರಾಜಧಾನಿಯ (Bengaluru news) ರಸ್ತೆ ಗುಂಡಿಗಳು (potholes) ಸ್ಥಳೀಯಾಡಳಿತ, ವಾಹನ ಸವಾರರು, ಗುತ್ತಿಗೆದಾರರು ಎಲ್ಲರಿಗೂ ತಲೆನೋವಾಗಿದ್ದು, ಇದರ ನಿವಾರಣೆಗೆ (Good news) ಒಂದು ಮಾಸ್ಟರ್ ಪ್ಲಾನ್ ರಚನೆಗೆ ಬಿಬಿಎಂಪಿ (BBMP) ಸಿದ್ಧವಾಗಿದೆ. ಇದನ್ನು ಸಿದ್ಧಪಡಿಸುವಲ್ಲಿ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ, IISC) ತಜ್ಞರು ಪ್ರಮುಖ ಯೋಗದಾನ ನೀಡಲಿದ್ದಾರೆ.
ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನು ಇದುವರೆಗೆ ಪಾಲಿಕೆಯೇ ಮುಚ್ಚುತ್ತಿತ್ತು. ಆದರೆ ಇದೀಗ ಬೆಂಗಳೂರಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊನೆಗೂ ಪಾಲಿಕೆ ಮುಂದಾಗಿದೆ. ಬೆಂಗಳೂರಲ್ಲಿ ರಸ್ತೆಗಳ ನಿರ್ಮಾಣ, ಮೇಲ್ದರ್ಜೆಗೇರಿಸುವುದು, ನಿರ್ವಹಣೆ ಹಾಗೂ ಎಸ್ಒಪಿ ಕೈಪಿಡಿಯ ರಚಿಸುವ ಉದ್ದೇಶದಿಂದ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದಾಗಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಬೆಂಗಳೂರಲ್ಲಿ (ಪಾಲಿಕೆ ವ್ಯಾಪ್ತಿಯಲ್ಲಿ) ಹೈಡೆನ್ಸಿಟಿ ಕಾರಿಡಾರ್, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಲಯ ಮಟ್ಟದ ರಸ್ತೆಗಳು ಸೇರಿದಂತೆ ಒಟ್ಟು 12878.78 ಕಿ.ಮೀ ಉದ್ದ ರಸ್ತೆ ಜಾಲವಿದೆ. ಬೆಂಗಳೂರಿನ ಪ್ರತಿ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ದೃಢ ಹಾಗೂ ದೀರ್ಘ ಬಾಳಿಕೆ ಬರುವಂತೆ ಮಾಡುವುದು, ಅದನ್ನು ವಿನ್ಯಾಸಗೊಳಿಸುವುದು, ನಿರ್ಮಾಣ ಮಾಡುವುದು ಹಾಗೂ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಹೀಗಾಗಿ, ಕೆಲವು ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಪಾಲಿಕೆ ಹೇಳಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರದ ರಸ್ತೆಗಳನ್ನು ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿವಿಧ ರಸ್ತೆಗಳನ್ನು ಒಂದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ನಿರ್ದೇಶನ ನೀಡಿದ್ದರು.
ಬಿಬಿಎಂಪಿಯ ಮುಖ್ಯ ಎಂಜಿನಿಯರ್ ನೇತೃತ್ವದಲ್ಲಿ ಪಾಲಿಕೆಯ ಮುಖ್ಯ ಎಂಜಿನಿಯರ್ಗಳನ್ನು ಒಳಗೊಂಡಂತೆ ಐಐಎಸ್ಸಿ ಸಂಸ್ಥೆಯ ಪ್ರೊಫೆಸರ್, ಬಿಬಿಎಂಪಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಬ್ಲ್ಯೂ.ಆರ್.ಐ(ಇಂಡಿಯಾ) ನುರಿತ ತಜ್ಞರ ಸಮಿತಿಯನ್ನು ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಮಿತಿಯು ತಿಂಗಳ 1ನೇ ಹಾಗೂ 3ನೇ ಬುಧವಾರ ಸಭೆಯನ್ನು ಸೇರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದೆ. ಡಿಸೆಂಬರ್ 15ರ ಒಳಗೆ ಕೈಪಿಡಿ ರಚನೆಯಾಗಲಿದೆ. ಕೈಪಿಡಿಯಂತೆ ಕಾಮಗಾರಿಯ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಮಾಡಿದ್ದಾರೆ.
ಈ ಸಮಿತಿಯ ಉದ್ದೇಶವೇನು?
ಸಮಿತಿಯ ಮುಖ್ಯ ಉದ್ದೇಶ ಹಾಗೂ ಕೆಲಸ ಬೆಂಗಳೂರಿನ ರಸ್ತೆಯ ವಿನ್ಯಾಸ, ರಸ್ತೆಗಳ ನಿರ್ಮಾಣ/ನಿರ್ವಹಣೆಗೆ ಬೇಕಾಗುವ ವೆಚ್ಚ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಮರುಡಾಂಬರೀಕರಣ (ಟಾರ್) ಪುನರಾವರ್ತನ ಅವಧಿ, ರಸ್ತೆ ಚರಂಡಿ ವ್ಯವಸ್ಥೆ ಮತ್ತು ವಿನ್ಯಾಸ, ರಸ್ತೆ ಉಬ್ಬರ ನಿರ್ಮಾಣ (ಹಂಪ್ಸ್) ಮಾಡುವುದು. ಅಲ್ಲದೇ ಥರ್ಮೋಪ್ಲಾಸ್ಟಿಕ್ ಬಣ್ಣ ಬಳೆಯುವುದು ಮತ್ತು ಪುನರಾವರ್ತನ ಅವಧಿ ನೋಡಿಕೊಳ್ಳುವುದು ಸೇರಿದಂತೆ ಹಲವು ಅಂಶಗಳು ಸೇರಿವೆ.
ಸಮಿತಿಯ ಅಧ್ಯಕ್ಷರು: ಬಿಬಿಎಂಪಿ ಮುಖ್ಯ ಎಂಜಿನಿಯರ್
ಸದಸ್ಯರು: (1) ಮುಖ್ಯ ಎಂಜಿನಿಯರ್ (ಯೋಜನೆ-ಕೇಂದ್ರ)
(2) ಮುಖ್ಯ ಪ್ರಧಾನ ನಿರ್ವಾಹಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)
(3) ಅಧೀಕ್ಷಕ ಎಂಜಿನಿಯರ್ (ವಿದ್ಯುತ್) Advertisement
(4) ಪ್ರೋ. ಆಶಿಷ್ ವರ್ಮ,ಪ್ರಾಚಾರ್ಯ , ಐ.ಐ.ಎಸ್.ಸಿ.
(5) ಪ್ರೋ. ವಿ.ಶ್ರೀನಿವಾಸ್, ಪ್ರಾಚಾರ್ಯ, ಐ.ಐ.ಎಸ್.ಸಿ.
(6) ಪ್ರೋ. ಅಂಜ್ಗನ್, ಪ್ರಾಚಾರ್ಯ, ಐ.ಐ.ಎಸ್.ಸಿ
(7) ಡಾ.ಸತ್ಯವತಿ, ಐ.ಐ.ಎಸ್.ಸಿ.
(8) ಶ್ರೀನಿವಾಸ್ ಅರವಳ್ಳಿ, ಮೆ.ಡಬ್ಲ್ಯೂ.ಆರ್.ಐ(ಇಂಡಿಯಾ).
(9) ಚೇತನ್, ಮೆ.ಡಬ್ಲ್ಯೂ.ಆರ್.ಐ(ಇಂಡಿಯಾ).
ಸದಸ್ಯ ಕಾರ್ಯದರ್ಶಿ: ಉಪ ಮುಖ್ಯ ಎಂಜಿನಿಯರ್(ರ.ಮೂ.ಸೌ).