ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿದ್ದ ಗೋಪಾಲ್ ಜೋಶಿ (Gopal Joshi) ಅವರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಬಿಡುಗಡೆಗೆ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ಗೋಪಾಲ ಜೋಶಿ ಮತ್ತು ಅಜಯ್ ಜೋಶಿ ಹಾಗೂ ಬೆಂಗಳೂರಿನ ವಿಜಯಲಕ್ಷ್ಮಿ ಜೋಶಿ ಎಸ್.ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ, ಆದೇಶ ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಲು ಗೋಪಾಲ್ ಜೋಶಿ 25 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದು ಚುನಾವಣೆಗೂ ಮುನ್ನ ನಡೆದಿರುವ ಘಟನೆ. ಟಿಕೆಟ್ ಸಿಗದೇ ಇದ್ದುದು ಗೊತ್ತಾದ ನಂತರ ಸುನೀತಾ ಚವ್ಹಾಣ್ ದೂರು ದಾಖಲಿಸಬಹುದಿತ್ತು. ಆದರೆ, ಆರು ತಿಂಗಳ ಬಳಿಕ ಅ.17ರಂದು ದೂರು ದಾಖಲಿಸಲಾಗಿದೆ. ಈ ನಡುವೆ, ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಇದು ಹಣದ ವಿವಾದವಾಗಿದೆ. ಇದಕ್ಕೆ ಈಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯ್ದೆ ಬಣ್ಣ ನೀಡಲಾಗಿದೆ. ಅರ್ಜಿದಾರರ ಮನೆಯಲ್ಲಿ ಜಾತಿ ನಿಂದನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದು ನಾಲ್ಕು ಗೋಡೆಗಳ ನಡುವೆ ನಡೆದಿರುವ ಘಟನೆ. ಅದು ಸಾರ್ವಜನಿಕ ಸ್ಥಳವಲ್ಲ. ಹೀಗಾಗಿ, ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್ 3(1) ಆರ್ ಮತ್ತು ಎಸ್ ಅಡಿ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ದೇವಾನಂದ ಚವ್ಹಾಣ್ ಹಾಗೂ ಪತ್ನಿ ಸುನೀತಾ ಚವ್ಹಾಣ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. 5 ಕೋಟಿಗೆ ಗೋಪಾಲ್ ಜೋಶಿ ಬೇಡಿಕೆ ಇಟ್ಟಿದ್ದರು. ಆದರೆ ದೇವಾನಂದ ದಂಪತಿ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾಗ 2 ಕೋಟಿ ರೂಪಾಯಿ ಹಣ ಪಡೆದಿದ್ದರು. 2 ಕೋಟಿ ಹಣಪಡೆದು ಟಿಕೆಟ್ ನೀಡದೇ ವಂಚಿಸಿದ್ದೂ ಅಲ್ಲದೇ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸುನೀತಾ ಚವ್ಹಾಣ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಗೋಪಾಲ್ ಜೋಶಿ, ಅವರ ಮಗ ಹಾಗೂ ಸಹೋದರಿ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.