Sunday, 15th December 2024

Government Jobs: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; 34,863 ಖಾಲಿ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ

Government Jobs

ಬೆಂಗಳೂರು: ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್‌ಸಿ ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ವಿವಿಧ ಇಲಾಖೆಗಳಲ್ಲಿನ 34,863 ಖಾಲಿ ಹುದ್ದೆಗಳನ್ನು (Government Jobs) ಕಾಲಮಿತಿಯೊಳಗೆ ಭರ್ತಿ ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಯುಪಿಎಸ್‌ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿ ಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.

371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಇದನ್ನೂ ಓದಿ | DK Shivakumar: ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಡಿ.ಕೆ. ಶಿವಕುಮಾರ್ ಭೇಟಿ, ಪೂಜೆ ಸಲ್ಲಿಕೆ

ಖಾಲಿ ಹುದ್ದೆ ನೇಮಕಾತಿಗೆ ಕಾಲಮಿತಿ

ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆಗಳನ್ನು ತುಂಬಲು ಕಾಲ ಮಿತಿಯನ್ನು ನಿಗದಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

ನೇಮಕಾತಿ ಕ್ಯಾಲೆಂಡರ್

ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಇಲಾಖೆಗಳು ನೇಮಕಾತಿಗೆ ಖಾಲಿಯಿರುವ ಹುದ್ದೆಗಳ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಬೇಕು. ಕಾಲಮಿತಿಯೊಳಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಾಗಿ ಏಕರೀತಿಯ ಕ್ಯಾಲೆಂಡರ್‌ ಸಿದ್ಧಪಡಿಸಬೇಕು. ಇನ್ನು ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಿಎಂ ಸೂಚನೆ ನೀಡಿದರು.

ಪಿಎಸ್‌ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್‌ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಿದರು.

ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗದ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ ಆ್ಯಂಡ್‌ ಆರ್‌ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ಸಿ ಆ್ಯಂಡ್‌ ಆರ್‌ ಸಿದ್ಧಪಡಿಸಲು ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | Mysuru Dasara 2024: ಮೈಸೂರು ದಸರಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಯೋಗ ಸರಪಳಿ; 4000ಕ್ಕೂ ಹೆಚ್ಚು ಜನ ಭಾಗಿ

ಸಚಿವರಾದ‌ ಜಿ.ಪರಮೇಶ್ವರ, ಹೆಚ್.ಕೆ.ಪಾಟೀಲ್‌, ಪ್ರಿಯಾಂಕ ಖರ್ಗೆ, ದಿನೇಶ ಗುಂಡೂರಾವ್‌, ಡಾ.ಶರಣ ಪ್ರಕಾಶ ಪಾಟೀಲ್‌, ಮಧು ಬಂಗಾರಪ್ಪ, ಭೈರತಿ ಸುರೇಶ್, ಡಾ.ಎಂ.ಸಿ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕಾನೂನು ಸಲಹೆಗಾರ ಎ.ಎಸ್.‌ ಪೊನ್ನಣ್ಣ, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.