Friday, 22nd November 2024

Govt Employees: ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ ಸರ್ಕಾರ

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಸಾಲಿನವರೆಗಿನ ಆಡಳಿತ ಮಂಡಳಿ ಚುನಾವಣೆಯು ಬಾಕಿ ಇರುವ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಪಾರದರ್ಶಕ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಸಂಘಕ್ಕೆ (Govt Employees) ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-3 ರಂಗನಾಥ ಜಿ.ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Karnataka State Govt Employees Association) ರಾಜ್ಯ ಪರಿಷತ್ ಸದಸ್ಯ ಬಿ. ಗಂಗಾಧರ್, ಮಾಜಿ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರವು ತೀರ್ಮಾನಿಸಿದೆ.

ರಾಜ್ಯ ಸರ್ಕಾರಿ ನೌಕರರ ಸಂಘವು ಬೃಹತ್ ಸಂಘವಾಗಿದ್ದು, ಸಂಘದ ಆಡಳಿತ ಮಂಡಳಿ ಅವಧಿ ಮುಗಿದಿರುವುದರಿಂದ ಸಂಘದ ಸದಸ್ಯರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ವ್ಯವಸ್ಥಾಪಕ ಸಿ.ಎನ್. ಮಂಜುನಾಥ್ (ಕೆ.ಎ.ಎಸ್ ಆಯ್ಕೆ ಶ್ರೇಣಿ) ಅವರನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಘದ ಎಲ್ಲಾ ಹಂತದ ಶಾಖೆಗಳಿಗೂ ಸಹಾಯಕ ಆಯುಕ್ತರು, ತಹಸೀಲ್ದಾರರ ನೇಮಕಕ್ಕೆ ಆಗ್ರಹ

ಸರ್ಕಾರಿ ನೌಕರರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮವನ್ನು ರಾಜ್ಯ ಸರ್ಕಾರಿ ನೌಕರ ಸಂಘದ ಮುಖಂಡರು ಸ್ವಾಗತಿಸಿದ್ದಾರೆ. ಇದೇ ವೇಳೆ ಸಂಘದ ಎಲ್ಲಾ ಹಂತದ ಶಾಖೆಗಳಲ್ಲಿಯೂ ತಾಟಸ್ಥ್ಯ ಆಡಳಿತ ವ್ಯವಸ್ಥೆಗಾಗಿ ಕೂಡಲೇ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ನೇಮಕಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತುತ ಆಡಳಿತ ಮಂಡಳಿಯ 2019-2024 ರ 5 ವರುಷದ ಅವಧಿಯು 2024ರ ಆ.07ರಂದೇ ಪೂರ್ಣ ಗೊಂಡಿದ್ದು, ಅವಧಿ ಪೂರ್ಣಗೊಳಿಸಿದ ಮರು ದಿನದಂದೇ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳುವಂತೆ ಚುನಾವಣೆ ಜರುಗಿಸದೇ ಕಾನೂನು ಬಾಹಿರ ಹಾಗೂ ಪ್ರಜಾಸತ್ತಾತ್ಮಕ ತತ್ವಗಳಿಗೆ ವಿರೋಧ ಆಗಿ ಇದು ಮುಂದುವರಿದಿತ್ತು. ಈ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಸಿಎಸ್ ಷಡಾಕ್ಷರಿ ಅವರು ತಮ್ಮ ಸದಸ್ಯತ್ವ ಹೊಂದಿದ್ದ ಶಿವಮೊಗ್ಗ ಜಿಲ್ಲೆಯಿಂದ ಕೋಲಾರಕ್ಕೆ ವರ್ಗಾವಣೆ ಹೊಂದಿ ಪದಮುಕ್ತಗೊಂಡಿದ್ದರಿಂದ ಸಂಘದ ಬೈಲಾ ನಿಯಮಗಳನ್ವಯ ಆರು ತಿಂಗಳುಗಳಿಗಿಂತಲೂ ಹೆಚ್ಚು ಅವಧಿಯಿಂದ ಸದಸ್ಯತ್ವ ಅಮಾನತ್ತಿಗೆ ಒಳಪಟ್ಟಿದ್ದಲ್ಲದೇ, ಸದಸ್ಯತ್ವ ಹೊಂದಲಾಗದ ಬೆಂಗಳೂರಿನ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಹೊಂದಿ, ಸಂಘದ ಸದಸ್ಯರಲ್ಲದಿದ್ದರೂ ಈ ಆಡಳಿತ ಮಂಡಳಿಯು ಕಾನೂನು ಬಾಹಿರವಾಗಿ ಅವರನ್ನು ಮುಂದುವರೆಸಿ ವ್ಯಾಪಕ ಆರ್ಥಿಕ ವಹಿವಾಟನ್ನೂ ಕೈಗೊಂಡಿತ್ತು. ಅಲ್ಲದೇ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೋಲ್ಮಲ್‌ ನಡೆದಿತ್ತು.

ಈ ಸುದ್ದಿಯನ್ನೂ ಓದಿ | Farooq Abdullah: ಕಾಶ್ಮೀರದಲ್ಲಿ ಮುಫ್ತಿಯೇ ಕಿಂಗ್‌ ಮೇಕರ್‌? PDP ಜತೆ ಮೈತ್ರಿಗೆ ಮುಂದಾದ ನ್ಯಾಷನಲ್ ಕಾನ್ಫರೆನ್ಸ್

ಅವಧಿ ಪೂರ್ಣಗೊಳಿಸಿರುವ ಪ್ರಸ್ತುತ ಆಡಳಿತ ಮಂಡಳಿಯ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಕೋರ್ಟ್‌ಗೆ ದೂರು ಸಲ್ಲಿಸಲಾಗಿತ್ತು. ಈ ನಡುವೆ ಸಕಾಲದಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯೋಚಿತ ಚುನಾವಣೆ ನಡೆಸಲು ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಮುಕ್ತ, ಪಾರದರ್ಶಕ, ನ್ಯಾಯೋಚಿತ ಚುನಾವಣೆ ನಡೆಸಲು ತಾಟಸ್ಥ್ಯ ವ್ಯವಸ್ಥೆ ರೂಪಿಸಬೇಕಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಸಂಘದ ಎಲ್ಲಾ ಜಿಲ್ಲಾ ಹಂತದ ಶಾಖೆಗಳಿಗೆ ಸಹಾಯಕ ಆಯುಕ್ತರನ್ನು, ತಾಲೂಕು ಮತ್ತು ಯೋಜನಾ ಶಾಖೆಗಳಿಗೆ ತಹಸೀಲ್ದಾರರನ್ನು ಸಹಾಯಕ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಅರ್ಹ ಮತದಾರ ಯಾದಿ ಪ್ರಕಟಣೆಯೊಂದಿಗೆ ಚುನಾವಣಾ ಪ್ರಕ್ರಿಯೆ ಕೈಗೊಳ್ಳುವ ಮೂಲಕ ಸಂಘದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿದ್ದಾರೆ.