Friday, 22nd November 2024

Govt Employees: ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ತಡೆ

Govt Employees

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ (Govt Employees) ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದಕ್ಕೆ ಕೆಲ ನೌಕರರಿಂದ ಆಕ್ಷೇಪ ಕೇಳಿಬಂದಿತ್ತು. ಚುನಾವಣೆ ಪ್ರಕ್ರಿಯೆ ನಡುವೆ ಆಡಳಿತಾಧಿಕಾರಿ ನೇಮಿಸಿರುವುದು ಸರಿಯಲ್ಲ ಎಂದು ನೌಕರರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಆಡಳಿತಾಧಿಕಾರಿ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಸಾಲಿನವರೆಗಿನ ಆಡಳಿತ ಮಂಡಳಿ ಚುನಾವಣೆಯು ಬಾಕಿ ಇರುವ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಪಾರದರ್ಶಕ ಚುನಾವಣೆ ನಡೆಸಿ, ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಸಂಘಕ್ಕೆ (Govt Employees) ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಇತ್ತೀಚೆಗೆಗೆ ಆದೇಶ ಹೊರಡಿಸಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘವು ಬೃಹತ್ ಸಂಘವಾಗಿದ್ದು, ಸಂಘದ ಆಡಳಿತ ಮಂಡಳಿ ಅವಧಿ ಮುಗಿದಿರುವುದರಿಂದ ಸಂಘದ ಸದಸ್ಯರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ವ್ಯವಸ್ಥಾಪಕ ಸಿ.ಎನ್. ಮಂಜುನಾಥ್ (ಕೆ.ಎ.ಎಸ್ ಆಯ್ಕೆ ಶ್ರೇಣಿ) ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | Job News: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬರೋಬ್ಬರಿ 5,267 ಶಿಕ್ಷಕರ ನೇಮಕಾತಿಗೆ ಆದೇಶ

ಈಗಾಗಲೇ ಚುನಾವಣೆ ಘೋಷಣೆ ಆಗಿದ್ದು, ಚುನಾವಣಾಧಿಕಾರಿಯನ್ನು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಇಲಾಖೆಗಳ ರಾಜ್ಯ ಪರಿಷತ್‌ನ 102 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 42 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಚುನಾವಣಾ ಪ್ರಕ್ರಿಯೆ ನಡುವೆ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಇತಿಹಾಸದಲ್ಲೇ ಇದೇ ಮೊದಲು. ಸಹಕಾರ ಇಲಾಖೆ ನಡೆ ಸರಿಯಿಲ್ಲ ಎಂದು ಕೆಲ ನೌಕರರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ತಡೆ ಬಿದ್ದಿದೆ.