Sunday, 17th November 2024

Govt Employees: ನೆಲಮಂಗಲ ಸರ್ಕಾರಿ ನೌಕರರ ಸಂಘಕ್ಕೆ ಕೆ.ಎನ್.ನಾಗೇಶ್ ನೂತನ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯರಾಗಿ ಮೃತ್ಯುಂಜಯ ಆಯ್ಕೆ

Govt Employees

ನೆಲಮಂಗಲ: ಸರ್ಕಾರಿ ನೌಕರರ ಸಂಘದ (Govt Employees) ರಾಜ್ಯ ಪರಿಷತ್ ಸದಸ್ಯರಾಗಿ ಸಾರ್ವಜನಿಕ ಆಸ್ಪತ್ರೆ ಪ್ರಯೋಗ ಶಾಲೆ ಹಿರಿಯ ತಾಂತ್ರಿಕ ಅಧಿಕಾರಿ ಎಂ,ಎಸ್. ಮೃತ್ಯುಂಜಯ ಅವರು ಎಂಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ದೇವಕಿ ಘೋಷಿಸಿದರು.

ನಗರದ ವಿನಾಯಕ ನಗರದಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನ.16ರಂದು ನಡೆದ ಚುನಾವಣೆಯಲ್ಲಿ ಸಂಘದ ರಾಜ್ಯಪರಿಷತ್ ಸದಸ್ಯ ಸ್ಥಾನಕ್ಕೆ ಮೃತ್ಯುಂಜಯ ಹಾಗೂ ಶಿಕ್ಷಕರಾದ ಬಿ.ಜಿ.ರಮೇಶ್ ಅವರು ನಾಮಪತ್ರಸಲ್ಲಿಸಿ ಸ್ಪರ್ಧಿಸಿದ್ದರು. ತಾಲೂಕು ಘಟಕದ 25 ನಿರ್ದೇಶಕರ ಮತಗಳಲ್ಲಿ ಎಂ.ಎಸ್. ಮೃತ್ಯುಂಜಯ 16 ಮತಗಳು ಬಿ.ಜಿ.ರಮೇಶ್ 08 ಮತಗಳನ್ನು ಪಡೆದುಕೊಂಡರು. ಒಬ್ಬರು ಮತದಾರರು ಮತದಾನದಿಂದ ಹಿಂದುಳಿದಿದ್ದರಿಂದ 24 ಮತಗಳು ಮಾತ್ರ ಚಲಾವಣೆಗೊಂಡಿದ್ದವು.

ರಾಜ್ಯ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ಎಂ.ಎಸ್. ಮೃತ್ಯುಂಜಯ ಮಾತನಾಡಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಹೆಚ್ಚುಮತಗಳ ಅಂತರದಿಂದ ಆಯ್ಕೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳು ಮತ್ತು ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಕಾಲಕಾಲಕ್ಕೆ ಕೊಡಿಸಿಕೊಡಲು ಸಂಘದ ಎಲ್ಲಾ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಪ್ರಯತ್ನಮಾಡುವುದರೊಂದಿಗೆ ನೌಕರರ ಹಿತಕ್ಕಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.

ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಕೆ.ಎನ್.ನಾಗೇಶ್ ಮಾತನಾಡಿ, ಶಿಕ್ಷಕನಾಗಿರುವ ನನ್ನ ಮೇಲೆ ಭರವಸೆಯಿಟ್ಟು ತಾಲೂಕು ನೌಕರರ ಸಂಘದ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ನೌಕರರ ಶ್ರೇಯೋಭೀವೃದ್ದಿ ಹಾಗೂ ಸಂಘದ ಬಲವರ್ಧನೆ ನನ್ನ ಗುರಿಯಾಗಿದೆ , ಸಂಘ ಮತ್ತು ಸಂಘದ ಸರ್ವಸದಸ್ಯರ ಸೇವೆಗಾಗಿ ಸದಾ ಶ್ರಮಿಸಿತ್ತೇನೆಂದು ತಿಳಿಸಿದರು.

ಅವಿರೋಧ ಆಯ್ಕೆ
ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕರಾದ ಕೆ.ಎನ್.ನಾಗೇಶ್, ಖಜಾಂಚಿಯಾಗಿ ಪಿಡಿಒ ಉಮಾಶಂಕರ್, ಪ್ರದಾನ ಕಾರ್ಯದರ್ಶಿಯಾಗಿ ಕಾರ್ಮಿಕ ನಿರೀಕ್ಷಕರಾದ ನಾಗರತ್ನ.ಸಿ.ಡಿ. ಅವರು ತಾಲೂಕು ಘಟಕದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.

ಅಭಿನಂದನೆ
ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸ್. ಎನ್.ಪಿ.ಎ. ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್‌ ಕುಮಾರ್, ನಗರಸಭೆ ಸದಸ್ಯ ಸಿ.ಪ್ರದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ್ರು, ನೌಕರರ ಮುಖಂಡರಾದ ಗುರುಮೂರ್ತಿ, ರಾಮಾಂಜುನಪ್ಪ. ಹೊನ್ನಶಾಮಯ್ಯ. ಪ್ರಕಾಶ್, ರುದ್ರಮೂರ್ತಿ, ಡಿ.ದೇವರಾಜು, ನಾರಾಯಣ್, ಚೈತ್ರ ಮತ್ತಿತರರು ಅಭಿನಂದಿಸಿದರು.

ಈ ಸುದ್ದಿಯನ್ನೂ ಓದಿ | R Ashok: ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪ ಸುಳ್ಳು ಎಂದು ತನಿಖೆಯಿಂದ ಸಾಬೀತಾಗಿದೆ: ಅಶೋಕ್‌

ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ಗುರುಮೂರ್ತಿ, ಪುಷ್ಪ, ಸಿ.ಗೀತಾಮಣಿ. ಎಚ್.ವಿ. ನಾಗರಾಜು. ಶಾಂತಾಬಾಯಿ ಎಚ್. ಕಿರಣಗಿ. ರೇಣುಕಾಸ್ವಾಮಿ, ಚಂದ್ರಶೇಖರ್.ಎಲ್. ಮಂಜುನಾಥ್.ವಿ ಮತ್ತಿತರರು ಉಪಸ್ಥಿತರಿದ್ದರು.