Saturday, 14th December 2024

Green Hydrogen: ಸೆ.11ಕ್ಕೆ ʼಹಸಿರು ಹೈಡ್ರೋಜನ್ʼ 2ನೇ ಅಂತಾರಾಷ್ಟ್ರೀಯ ಸಮ್ಮೇಳನ; ಯುವ ಸಮೂಹ ಆಕರ್ಷಿಸಲು ಆದ್ಯತೆ

Green Hydrogen

ನವದೆಹಲಿ: ಕೇಂದ್ರ ಸರ್ಕಾರ ನವದೆಹಲಿಯಲ್ಲಿ ಸೆ.11ರಿಂದ 13ರವರೆಗೆ ಹಸಿರು ಹೈಡ್ರೋಜನ್ ಕುರಿತು 2ನೇ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ನವದೆಹಲಿಯಲ್ಲಿ ಬುಧವಾರ ನಡೆದ ಕರ್ಟನ್ ರೈಸರ್ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಭಾರತ್ ಮಂಟಪದಲ್ಲಿ 3 ದಿನಗಳ ಕಾಲ ಗ್ರೀನ್ ಹೈಡ್ರೋಜನ್ ಕುರಿತ ಸಮ್ಮೇಳನ ಆಯೋಜಿಸಲು ಸರ್ಕಾರ ಸಿದ್ಧತೆ ಕೈಗೊಂಡಿದೆ ಎಂದು ಹೇಳಿದರು.

ಈ ಬಾರಿ “ಯೂತ್ ಫಾರ್ ಗ್ರೀನ್ ಹೈಡ್ರೋಜನ್” ಕುರಿತು ವಿಶೇಷ ಅಧಿವೇಶನ ಸಹ ಹಮ್ಮಿಕೊಳ್ಳುತ್ತಿದ್ದು, ಯುವ ಸಮುದಾಯದ ಜಾಗೃತಿ ಮತ್ತು ಅವರನ್ನು ತೊಡಗಿಸಿಕೊಳ್ಳಲು ಆದ್ಯತೆ ನೀಡಲಾಗಿದೆ ಎಂದರು.

ಈ ವಿಶೇಷ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳಿಂದ 6,000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲೆಂದು ಹ್ಯಾಕಥಾನ್, ರಸಪ್ರಶ್ನೆ ಮತ್ತು ಸ್ಪಾಟ್‌ಲೈಟ್, ನೆಕ್ಸ್ಟ್-ಜೆನ್ ಹೈಡ್ರೋಜನ್ ಇನ್ನೋವೇಟರ್‌ಗಳಿಗೆ ಪೋಸ್ಟರ್ ಸ್ಪರ್ಧೆ ಇರಲಿದೆ ಎಂದರು.

“ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನೆಗೆ ಭಾರತವನ್ನು ಒಂದು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಮ್ಮ ಪ್ರಯತ್ನದಲ್ಲಿ ಈ ಅಂತಾರಾಷ್ಟ್ರೀಯ 2ನೇ ಸಮ್ಮೇಳನ ಮಹತ್ವದ ಮೈಲಿಗಲ್ಲಾಗಲಿದೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ತಂತ್ರಜ್ಞಾನ, ಪ್ರಗತಿ, ಹೊಸ ಹೊಸ ಆವಿಷ್ಕಾರ ಅನ್ವೇಷಣೆ ಬಗ್ಗೆ ಚರ್ಚಿಸಲು ವಿಶ್ವದಾದ್ಯಂತದ ನೀತಿ ನಿರೂಪಕರು, ಉದ್ಯಮ ತಜ್ಞರು ಮತ್ತು ನಾವೀನ್ಯಕಾರರು ಆಗಮಿಸಲಿದ್ದು, ಗ್ರೀನ್ ಫೈನಾನ್ಸಿಂಗ್, ಮಾನವ ಸಂಪನ್ಮೂಲದ ಉನ್ನತೀಕರಣ ಮತ್ತು ಉಪಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಕಳೆದ ವರ್ಷಕ್ಕಿಂತ ದೊಡ್ಡ ಮಟ್ಟದಲ್ಲಿ ಸಮ್ಮೇಳನ ಆಯೋಜಿಸಿದ್ದು, ಈಗಾಗಲೇ ಮಹತ್ವಾಕಾಂಕ್ಷೆಯ 2000 ನೋಂದಣಿ ಆಗಿದ್ದು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಜ್ಞಾನಿಗಳು ಹಾಗೂ 120ಕ್ಕೂ ಅಧಿಕ ಪ್ರದರ್ಶಕರಿಂದ 6000 ನೋಂದಣಿಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಗಮನಾರ್ಹ ಪ್ರಗತಿ
ಭಾರತೀಯ ಗ್ರೀನ್ ಹೈಡ್ರೋಜನ್ ಮಿಷನ್ ಗಮನಾರ್ಹ ಪ್ರಗತಿ ಸಾಧಿಸಿದೆ. ಉಕ್ಕು, ಶಿಪ್ಪಿಂಗ್ ಮತ್ತು ಮೊಬಿಲಿಟಿ ವಲಯದಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಗ್ರೀನ್ ಹೈಡ್ರೋಜನ್‌ನ ಈ ಎರಡನೇ ಸಮ್ಮೇಳನದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ 1.5 ಲಕ್ಷ ರೂ., ಮೊದಲ ರನ್ನರ್ ಅಪ್ ಗೆ 75,000 ಮತ್ತು ರೂ. ಎರಡನೇ ರನ್ನರ್ ಅಪ್ ಗೆ 50,000 ರೂ. ಬಹುಮಾನ ನೀಡಲಾಗುವುದು. ಸೆ.12 ರಂದು ಹೈಡ್ರೋಜನ್ ಮತ್ತು ಇಂಧನ ಕೋಶಗಳ ಸಂಶೋಧನೆಯ ವೈಜ್ಞಾನಿಕ ಪೋಸ್ಟರ್ ಸ್ಪರ್ಧೆ ವಿಜೇತರಿಗೆ ಪ್ರಥಮ ಸ್ಥಾನಕ್ಕೆ ₹ 50,000, ದ್ವಿತೀಯ ₹ 30,000 ಮತ್ತು ತೃತೀಯ ₹ 20,000 ಬಹುಮಾನವಿದೆ.

2ನೇ ದಿನ ವಿಶೇಷ ಅಧಿವೇಶನ
“ಯುವಕರಿಗಾಗಿ ಹಸಿರು ಹೈಡ್ರೋಜನ್” ಎಂಬ ವಿಶೇಷ ಅಧಿವೇಶನ ಸಮ್ಮೇಳನದ 2ನೇ ದಿನ ನಿಗದಿಪಡಿಸಿದೆ. ಸೆ.11ರಂದು ಅಶೋಕ್‌ನಲ್ಲಿ ಸಿಇಒಗಳ ರೌಂಡ್‌ಟೇಬಲ್ ಈವೆಂಟ್‌ ನಡೆಯಲಿದ್ದು, ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಇದನ್ನೂ ಓದಿ | Haryana Election : ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

ಸಭೆಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಭೂಪಿಂದರ್ ಎಸ್. ಭಲ್ಲಾ ಮಾತನಾಡಿ, ICGH-2024 ಗಾಗಿ US ಪಾಲುದಾರ ರಾಷ್ಟ್ರವಾಗಿರುತ್ತದೆ ಎಂದರು.

ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಯ್ ಯಾದವ್ ಮತ್ತಿತರ ಅಧಿಕಾರಿಗಳು ಇದ್ದರು.