Sunday, 15th December 2024

Gruha Lakshmi Scheme: ಗೃಹ ಲಕ್ಷ್ಮಿ ಹಣದಿಂದ B.Ed ಶುಲ್ಕ ಕಟ್ಟಿದ ವಿದ್ಯಾರ್ಥಿ; ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ ಸಿಎಂ

Gruha Lakshmi Scheme

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಹಣದಿಂದ ಮಹಿಳೆಯೊಬ್ಬರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಇತ್ತೀಚೆಗೆ ಗ್ರಂಥಾಲಯ ನಿರ್ಮಾಣ ಮಾಡಿ ಗಮನ ಸೆಳೆದ ಬೆನ್ನಲ್ಲೇ ಇದೀಗ, ಯೋಜನೆಯ ಹಣವು ತನ್ನ ಬಿ.ಇಡಿ 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕ ಕಟ್ಟಲು ನೆರವಾಗಿದೆ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ಇಂದಿಗೂ ನಮ್ಮ ನಡುವೆ ಅಂತಹ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ. ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ.

ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ. ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ – ಕಾಳಜಿಗೆ ಧನ್ಯವಾದ.

ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ.

ತಾಯಿ ಉಳಿಸಿಟ್ಟಿದ್ದ ಗೃಹ ಲಕ್ಷ್ಮಿ ಹಣ ಸಹಾಯಕ್ಕೆ ಬಂದಿದೆ

ತನಗೆ ಗೃಹ ಲಕ್ಷ್ಮಿ ಯೋಜನೆ ಹಣ ಹೇಗೆ ಉಪಯೋಗಿದೆ ಎಂಬುದರ ಬಗ್ಗೆ ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿ, ಗೃಹಲಕ್ಷ್ಮಿ ಹಣದಿಂದ B.Ed 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನು ಕಟ್ಟಿದೆ. ಕುಟುಂಬ ಸಾಲದ ಸುಳಿಯಲ್ಲಿದೆ ತಂದೆ ಬಳಿ ಹಣ ಕೇಳೋಕೆ ಆಗದೆ ತಾಯಿ ಉಳಿಸಿಟ್ಟಿದ್ದ ಯೋಜನೆಯ ಹಣ ಸಹಾಯಕ್ಕೆ ಬಂದಿದೆ. ಸಂಕಷ್ಟದ ಸಮಯದಲ್ಲಿ ನನ್ನನ್ನ ಕಾಪಾಡಿದೆ. ಸಿದ್ದರಾಮಯ್ಯ ಅವ್ರಿಗೆ ಎಷ್ಟ್ ಧನ್ಯವಾದ ಹೇಳಿದರೂ ಸಾಲಲ್ಲ ಎಂದು ತಿಳಿಸಿದ್ದ.

ಶಿಕ್ಷಣಕ್ಕೆ ಗೃಹಲಕ್ಷ್ಮಿ ಯೋಜನೆಯ ಆಸರೆ: ಹೆಬ್ಬಾಳ್ಕರ್

ಗೃಹಲಕ್ಷ್ಮಿ ಹಣದಿಂದ ಬಿ.ಇಡಿ ವಿದ್ಯಾರ್ಥಿಯೊಬ್ಬ ತನ್ನ 4ನೇ ಸೆಮಿಸ್ಟರ್ ಪರೀಕ್ಷೆಯ ಶುಲ್ಕ ಕಟ್ಟಿರುವುದನ್ನು ಕೇಳಿ ನಿಜಕ್ಕೂ ಖುಷಿಯಾಯಿತು. ರಾಜ್ಯದಲ್ಲಿಂದು ಗೃಹಲಕ್ಷ್ಮಿ ಯೋಜನೆ ಬಡತನದ ಬವಣೆಯಿಂದ ಹೊರಬರಲು ಲಕ್ಷಾಂತರ ಜನರಿಗೆ ವರವಾಗಿ‌ ಪರಿಣಮಿಸಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಬಿ.ಇಡಿ ವಿದ್ಯಾರ್ಥಿಯೊಬ್ಬ ತಂದೆ ಬಳಿ ಹಣ ಕೇಳೋಕಾಗದೆ, ತಾಯಿ ಕೊಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣ ಪರೀಕ್ಷೆಯ ಶುಲ್ಕ ಕಟ್ಟಿಕೊಳ್ಳಲು ಬಳಕೆ ಮಾಡಿದ್ದಾನೆ, ಕಡು-ಬಡತನದಲ್ಲೂ ಜನರಿಂದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಅಲ್ಲವೇ ಗೃಹಲಕ್ಷ್ಮಿಯ ಸಾರ್ಥಕತೆ. ಈ ಸಂದರ್ಭದಲ್ಲಿ ಬಿ.ಇಡಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗೆ ಹಾಗೂ ಆತನ ತಾಯಿಗೆ ಹೃದಯ-ಪೂರ್ವಕ ಶುಭಾಶಯ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ರೈತರ ಬಾಳಿಗೆ ಬೆಳಗಾದ ಗೃಹಲಕ್ಷ್ಮಿ

ಗೋಕಾಕ್ ತಾಲೂಕಿನ ತವಗ ಗ್ರಾಮದ ಬಸವ್ವ ಬುಳ್ಳಿ ದಂಪತಿ ಗೃಹಲಕ್ಷ್ಮಿ ಹಣ ಕೂಡಿಟ್ಟು, ಎತ್ತು ಖರೀದಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 11 ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳಿಂದ 22 ಸಾವಿರ ಕೂಡಿಟ್ಟು ಒಂದು ಎತ್ತನ್ನು ಖರೀದಿ ಮಾಡಿದ್ದು, ಮಕ್ಕಳಿಲ್ಲದ ದಂಪತಿಗೆ ಗೃಹಲಕ್ಷ್ಮಿ ಆಸರೆಯಾಗಿದ್ದಾಳೆ ಎಂದು ರಾಜ್ಯ ಸರ್ಕಾರದ ಯೋಜನೆಯಿಂದ ಜನರಿಗೆ ಅನುಕೂಲವಾಗುತ್ತಿರುವುದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Jharkhand Assembly Election: ಬಿಜೆಪಿ ಮೊದಲ ಪಟ್ಟಿ ರಿಲೀಸ್‌; ಮಾಜಿ ಸಿಎಂಗಳಾದ ಬಾಬುಲಾಲ್ ಮರಾಂಡಿ, ಚಂಪೈ ಸೊರೆನ್‌ಗೆ ಕಣಕ್ಕೆ