Saturday, 28th September 2024

Gruha Lakshmi Scheme: ಗೃಹಲಕ್ಷ್ಮಿ ಹಣದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ

Gruha Lakshmi Scheme

ಬೆಂಗಳೂರು: ಗೃಹಲಕ್ಷ್ಮಿ (Gruha Lakshmi Scheme) ಹಣವನ್ನು ಕಾಯುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಈ ತಿಂಗಳು ಮುಗಿಯುವ ಮುನ್ನ ಸಿಹಿಸುದ್ದಿ ಇದೆ. ಮಹಿಳೆಯರ ಖಾತೆಗೆ ಕಳೆದೆರಡು ತಿಂಗಳ ಹಣ ಬರಬೇಕಿದ್ದು, ಇದರಲ್ಲಿ ಒಂದು ತಿಂಗಳ ಹಣ ಜಮಾವಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಜೂನ್‌ ತಿಂಗಳ ಹಣ ಬಂದಿತ್ತು. ಆದರೆ ಸೆಪ್ಟೆಂಬರ್‌ ಮುಗಿಯುತ್ತಾ ಬಂದರೂ ಜುಲೈ ಹಾಗೂ ಆಗಸ್ಟ್‌ ತಿಂಗಳ ಹಣ ಬಂದಿಲ್ಲ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದಾಗಿನಿಂದಲೂ ಒಂದಿಲ್ಲೊಂದು ಅಡೆತಡೆಗಳು ಉಂಟಾಗುತ್ತಿವೆ. ಸೆಪ್ಟೆಂಬರ್ ತಿಂಗಳು ಕೊನೆಗೆ ಬಂದರೂ ಜುಲೈ, ಆಗಸ್ಟ್ ತಿಂಗಳುಗಳ ಗೃಹಲಕ್ಷ್ಮಿ ಹಣ ಮಾತ್ರ ಮಹಿಳೆಯರ ಖಾತೆಯನ್ನು ಸೇರಿಲ್ಲ. ಇದೀಗ ಜುಲೈ ತಿಂಗಳ ಹಣ ಒದಗಿಸಲು ಸಚಿವರು ಹಣಕಾಸು ಇಲಾಖೆಗೆ ತಾಕೀತು ಮಾಡಿದ್ದಾರೆ.

ಹಣ ಜಮೆ ಆಗದಿರುವುದಕ್ಕೆ ಕಾರಣ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗದಿರುವುದು. ಸದ್ಯ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ‌ ಕೇಳಲಾಗಿದೆ. ಒಂದೊಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಜೂನ್‌ ತಿಂಗಳ ಹಣ ಬಿಡುಗಡೆ ಮಾಡಿತ್ತು. ಪ್ರತಿ ತಿಂಗಳು 1.21 ಕೋಟಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬರಬೇಕು. ಪ್ರತಿ ತಿಂಗಳೂ ಗೃಹಲಕ್ಷ್ಮಿ ಯೋಜನೆಗೆ 2500 ಕೋಟಿ ಹಣ ಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸೆಪ್ಟೆಂಬರ್‌ ಸೇರಿದಂತೆ ಮೂರು ತಿಂಗಳ ಅನುದಾನ ಅಂದರೆ ಒಟ್ಟು 7500 ಕೋಟಿ ಹಣ ಬಿಡುಗಡೆಗೆ ಪತ್ರ ಬರೆಯಲಾಗಿದೆ.

ಆದರೆ ಒಟ್ಟಿಗೇ ಅಷ್ಟು ಹಣವನ್ನು ಇಲಾಖೆ ಒದಗಿಸುವುದು ಕಷ್ಟ ಎನ್ನಲಾಗಿದೆ. ಹೀಗಾಗಿ ಇದೇ ತಿಂಗಳೇ ಗೃಹಲಕ್ಷ್ಮಿ ಹಣ ಬಂದರೂ ಅದು ಒಂದು ತಿಂಗಳಿನದ್ದು ಆಗಿರಬಹುದಷ್ಟೇ ಎಂದೂ ತರ್ಕಿಸಲಾಗುತ್ತಿದೆ.

ಈ ಬಗ್ಗೆ ಸಚಿವೆ ಹೇಳಿದ್ದೇನು?

ಸರಿಯಾಗಿ ಆಯಾ ಕಂತಿನ ಹಣವನ್ನು ನಮ್ಮ ಇಲಾಖೆಗೆ ನೀಡಿದರೆ, ನಮಗೂ ಕೂಡ ಜನರಿಗೆ ಹಣ ಹಾಕಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಹಣ ಕೊಡುವುದಾಗಿ ಹೇಳಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದಾರೆ. ಗೃಹಲಕ್ಷ್ಮಿ ಒಂದು ಮಹತ್ವಾಕಾಂಕ್ಷಿ ಯೋಜನೆ. ದುಡ್ಡಿನ ಸಮಸ್ಯೆ ಕಾಡುತ್ತಿಲ್ಲ. ವಿರೋಧ ಪಕ್ಷಗಳು ತಮ್ಮ ಅಧಿಕಾರದ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕೆಲಸಗಳಿಗೆ ಹಣ ಹಂಚಿದ್ದರಿಂದ, ಈಗ ಸಮಸ್ಯೆಯಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲ ಆಗಿದ್ದು ತುಂಬ ಖುಷಿ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಎಂದಿಗೂ ನಿತ್ಯ, ಸತ್ಯ, ನಿರಂತರ ಎಂದ ಲಕ್ಷ್ಮೀ ಹೆಬ್ಬಾಳಕರ್