Thursday, 31st October 2024

Gruha Lakshmi Scheme: ಶೀಘ್ರವೇ ಎರಡು ತಿಂಗಳ ಗೃಹಲಕ್ಷ್ಮಿ ಹಣ ಪಾವತಿ: ಲಕ್ಷ್ಮಿ ಹೆಬ್ಬಾಳ್ಕರ್

lakshmi hebbalkar

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.

ಇದು ನಿರಂತರ ಪ್ರಕ್ರಿಯೆ. ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ (Guarantee schemes) ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಗೃಹಲಕ್ಷ್ಮಿ (Gruha Lakshmi Scheme) ಹಣವನ್ನು ಕಾಯುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಈ ತಿಂಗಳು ಮುಗಿಯುವ ಮುನ್ನವೇ ಜುಲೈ ತಿಂಗಳ ಹಣ ದೊರೆಯಲಿದೆ. ಮಹಿಳೆಯರ ಖಾತೆಗೆ ಕಳೆದೆರಡು ತಿಂಗಳ ಹಣ ಬರಬೇಕಿದ್ದು, ಇದರಲ್ಲಿ ಒಂದು ತಿಂಗಳ ಹಣ ಜಮಾವಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಜೂನ್‌ ತಿಂಗಳ ಹಣ ಬಂದಿತ್ತು. ಆದರೆ ಸೆಪ್ಟೆಂಬರ್‌ ಮುಗಿಯುತ್ತಾ ಬಂದರೂ ಜುಲೈ ಹಾಗೂ ಆಗಸ್ಟ್‌ ತಿಂಗಳ ಹಣ ಬಂದಿಲ್ಲ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಲಕ್ಷ್ಮಿ ಒಂದಾಗಿದೆ.

ಹಣ ಜಮೆ ಆಗದಿರುವುದಕ್ಕೆ ಕಾರಣ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗದಿರುವುದು. ಸದ್ಯ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ‌ ಕೇಳಲಾಗಿದೆ. ಒಂದೊಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಜೂನ್‌ ತಿಂಗಳ ಹಣ ಬಿಡುಗಡೆ ಮಾಡಿತ್ತು. ಪ್ರತಿ ತಿಂಗಳು 1.21 ಕೋಟಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬರಬೇಕು. ಪ್ರತಿ ತಿಂಗಳೂ ಗೃಹಲಕ್ಷ್ಮಿ ಯೋಜನೆಗೆ 2500 ಕೋಟಿ ಹಣ ಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸೆಪ್ಟೆಂಬರ್‌ ಸೇರಿದಂತೆ ಮೂರು ತಿಂಗಳ ಅನುದಾನ ಅಂದರೆ ಒಟ್ಟು 7500 ಕೋಟಿ ಹಣ ಬಿಡುಗಡೆಗೆ ಪತ್ರ ಬರೆಯಲಾಗಿದೆ.

ನಿರಾಣಿ ಕೊಡುಗೆ ಏನು?

ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕೊಡುಗೆ ಏನು ಎಂದು ಸಚಿವೆ ಲಕ್ಷ್ಮಿ ಪ್ರಶ್ನಿಸಿದ್ದಾರೆ. ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರ, 2A ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಸಮುದಾಯದ ಬಗ್ಗೆ ಯೋಚಿಸಲಿಲ್ಲ. ಈಗ ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಮೀಸಲಾತಿ ನೀಡಲಿ ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ವಿಭಜನೆಯಾದರೆ ಬೆಂಬಲ

ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗಗಳನ್ನಾಗಿ ಮಾಡಬಹುದು. ಜಿಲ್ಲೆ ವಿಭಜನೆಗೊಂಡರೆ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬಹುದು. ದಸರಾ ಹಬ್ಬ ಮುಕ್ತಾಯಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದರು.

ಇದನ್ನೂ ಓದಿ: Laxmi Hebbalkar: ಮಾಡಿದ್ದುಣ್ಣೋ ಮಾರಾಯ; ಮುನಿರತ್ನ ಬಂಧನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ