Friday, 22nd November 2024

Gruha Lakshmi Scheme: 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ ಪಾವತಿ ಕಟ್

Gruha Lakshmi Scheme

ಬೆಂಗಳೂರು: ಸುಮಾರು 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ (Gruha Lakshmi Scheme) ಪಾವತಿಗೆ ರಾಜ್ಯ ಸರ್ಕಾರ (Karnataka Government) ತಡೆ ಹಾಕಿದೆ. ಕಾರಣ, ಇವರು ಆದಾಯ ತೆರಿಗೆ (Income Tax) ಪಾವತಿದಾರರು ಎಂಬುದು.

ಆದಾಯ ತೆರಿಗೆ ಪಾವತಿಸುತ್ತಿದ್ದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಲಕ್ಷ್ಮಿ’ (Gruha Lakshmi Scheme) ಯೋಜನೆಯಡಿ ಪ್ರತಿ ತಿಂಗಳೂ ಎರಡು ಸಾವಿರ ರು. ಪಡೆಯುತ್ತಿದ್ದಾರೆ ಎಂದು 1.78 ಲಕ್ಷ ಮಹಿಳೆಯರ ಹಣ ಪಾವತಿಗೆ ತಡೆ ಒಡ್ಡಿರುವ ಸರ್ಕಾರ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿದೆ.

ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಲ್ಲ. ಆದರೂ ಆದಾಯ ತೆರಿಗೆ ಪಾವತಿಸುವ ಸುಮಾರು 1.78 ಲಕ್ಷ ಮಹಿಳೆಯರು ಯೋಜನೆಯ ಫಲಾನುಭವಿಯಾಗಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಇಂತಹ ಮಹಿಳೆಯರಿಗೆ ಹಣ ಪಾವತಿಸುವುದನ್ನು ಸರ್ಕಾರ ನಿಲ್ಲಿಸಿದ್ದು, ನೈಜತೆ ಪರಿಶೀಲಿಸಲು ಮುಂದಾಗಿದೆ.

ಈ ಸಂಬಂಧ ಇ-ಗವರ್ನೆನ್ಸ್‌ ಇಲಾಖೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪಟ್ಟಿಯಲ್ಲಿರುವ 1.78 ಲಕ್ಷ ಮಹಿಳೆಯರು ನಿಜವಾಗಿಯೂ ಆದಾಯ ತೆರಿಗೆ ಪಾವತಿದಾರರೇ ಎಂದು ಪರಿಶೀಲಿಸಲು ಇ-ಗವರ್ನೆನ್ಸ್‌ ಇಲಾಖೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಡತ ರವಾನಿಸಿದೆ.

ಆದಾಯ ತೆರಿಗೆ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಸತತ ಸಂಪರ್ಕದಲ್ಲಿರುವ ಇ-ಗವರ್ನೆನ್ಸ್‌ ಇಲಾಖೆಯು, 1.78 ಲಕ್ಷ ಮಹಿಳೆಯರಲ್ಲಿ ಅರ್ಹರೂ ಇದ್ದಾರೆಯೇ? ತಪ್ಪು ಮಾಹಿತಿಯಿಂದಾಗಿ ಈ ರೀತಿ ಆಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಈ ಪಟ್ಟಿಯಲ್ಲಿ ಅರ್ಹರಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಅಂತಹವರಿಗೆ ಹಣ ಪಾವತಿಸಲಾಗುವುದು. ಅನರ್ಹರನ್ನು ಕೈಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: CM Siddaramaiah: ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ; ವೇದಿಕೆಗೆ ನುಗ್ಗಿದ ವ್ಯಕ್ತಿ