Sunday, 10th November 2024

Gruha Lakshmi Scheme: ಗೃಹಲಕ್ಷ್ಮಿ ಎಂದಿಗೂ ನಿತ್ಯ, ಸತ್ಯ, ನಿರಂತರ ಎಂದ ಲಕ್ಷ್ಮೀ ಹೆಬ್ಬಾಳಕರ್

Gruha Lakshmi Scheme

ಬೆಂಗಳೂರು: ಕರ್ನಾಟಕದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಹೇಳಿದರು. ನಾನು ಈಗಾಗಲೆ ಹಲವು ಬಾರಿ ಗೃಹಲಕ್ಷ್ಮಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರ. ಕಳೆರಡು ತಿಂಗಳಿಂದ ಬರದಿರುವ ಹಣ ಒಂದೇ ಬಾರಿ ಅಕೌಂಟ್‌ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂರು ತಿಂಗಳ ಹಿಂದಷ್ಟೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಕೂಡ ಅಷ್ಟು ಬಾಕಿ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನೂ ಓದಿ | Job Guide: 250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ NTPC; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಮಹಿಳೆಯರ ರಕ್ಷಣೆಗೆ ಸಮಿತಿ ರಚನೆಯಾಗಲಿ

ಚಿತ್ರರಂಗದ ಕಲಾವಿದೆಯರ ಜತೆ ಮಹಿಳಾ ಆಯೋಗ ಸಭೆ ಆಯೋಜಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಖಂಡಿತಾ ಸಮಿತಿ ರಚನೆ ಆಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಅಂತ ಹೇಳುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ ಎಂದು ಅವರು ಹೇಳಿದರು.

ಅಂಗನವಾಡಿಗಳಲ್ಲಿ ಮುಂದಿನ ತಿಂಗಳಿಂದ ಗಟ್ಟಿಬೆಲ್ಲ ವಿತರಣೆ

ಪಾಲಕರು ನಿರಾಕರಿಸಿದ ಕಾರಣ ಆರ್ಗ್ಯಾನಿಕ್ ಬೆಲ್ಲದ ಬದಲಿಗೆ ಗಟ್ಟಿ ಬೆಲ್ಲವನ್ನೇ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಒಂದೂವರೆ ವರ್ಷದ ಹಿಂದಿ‌ನಿಂದಲೇ ಅಂಗನವಾಡಿ ಕೇಂದ್ರಗಳಲ್ಲಿ ಆರ್ಗ್ಯಾನಿಕ್ ಬೆಲ್ಲ ನೀಡಲಾಗುತ್ತಿತ್ತು. ಆದರೆ, ಪಾಲಕರು ವಿರೋಧಿಸಿದ ಕಾರಣ, ಅಕ್ಟೋಬರ್ 1 ರಿಂದಲೇ ಗಟ್ಟಿ ಬೆಲ್ಲ ನೀಡುವುದಾಗಿ ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಸೆ.17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಕರ್ನಾಟಕದಲ್ಲಿರುವ 139 ಎಂಎಸ್‌ಪಿಟಿಸಿಗಳನ್ನು ಉನ್ನತೀಕರಿಸಲು ಹೊರಟ್ಟಿದ್ದೇವೆ. ಉತ್ತಮ ಲ್ಯಾಬ್ ಸೌಲಭ್ಯಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸುಪ್ರೀಕೋರ್ಟ್ ನಿರ್ದೇಶನದ ಮೇರೆಗೆ ಚೆನ್ನೈ ಮೂಲದ ಸಂಸ್ಥೆಯಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆಯಾಗುತ್ತಿದೆ. 15 ವರ್ಷಗಳಿಂದಲೂ ಇದು ನಡೆದುಕೊಂಡು ಬರುತ್ತಿದೆ. ಇನ್ಮುಂದೆ ಜಿಲ್ಲಾ ಮಟ್ಟದಲ್ಲೇ ಪೌಡರ್ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ 200 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.