Saturday, 14th December 2024

ರಾಜ್ಯದ ಪಾಲಿಗಿದು ಜಿಎಸ್‌ಟಿ ಬಾಕಿ ವಸೂಲಿ ಬಜೆಟ್

ಹೆಚ್ಚಿದ ತೆರಿಗೆ, ಸೆಸ್‌ಗಳಿಂದ ರಾಜ್ಯದ ಸಾಲದ ಹೊರೆ ಕಡಿಮೆ ಪರಿಹಾರ ಕೇಳಲು ರಾಜ್ಯ ಪ್ಲ್ಯಾನ್

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ಅನೇಕ ರೀತಿಯ ಸೆಸ್ ಮತ್ತು ತೆರಿಗೆ ಪ್ರಸ್ತಾಪಗಳಿರುವ ಕೇಂದ್ರ ಬಜೆಟ್ ರಾಜ್ಯದಲ್ಲಿ ಸರಕಾರದ ಸಾಲದ ಹೊರೆ
ಇಳಿಸಬಹುದು ಎಂದು ನಿರೀಕ್ಷೆ ಹೆಚ್ಚಾಗಿದೆ. ಅಷ್ಟೇ ಅಲ್ಲ. ಕೇಂದ್ರ ಸರಕಾರದಿಂದ ಸಿಗಬೇಕಿರುವ ಸುಮಾರು ₹9000 ಕೋಟಿ ಗಳಿಗೂ ಹೆಚ್ಚಿನ ಜಿಎಸ್‌ಟಿ ಬಾಕಿ ವಸೂಲಿಗೂ ನೆರವಾಗುವ ಸೂಚನೆ ಕಾಣುತ್ತಿದೆ.

2017ರಿಂದ ರಾಜ್ಯಕ್ಕೆ ಪ್ರತಿವರ್ಷ ಜಿಎಸ್‌ಟಿ ಪರಿಹಾರ ನೀಡುತ್ತಿರುವ ಕೇಂದ್ರ ಸರಕಾರ 2020-21ರಲ್ಲಿ ಕರೋನಾ ಸೋಂಕಿನ ವಿಪ್ಪತ್ತಿನಿಂದಾಗಿ ₹12000 ಕೋಟಿಗಳಿಗೂ ಹೆಚ್ಚಿನ ಪರಿಹಾರ ನೀಡಲಾಗಲಿಲ್ಲ. ಹೀಗಾಗಿ ರಾಜ್ಯ ಸರಕಾರ ಆರ್‌ಬಿಐನಿಂದ ಜಿಎಸ್‌ಟಿ ಸಾಲ ಪಡೆಯಿರಿ ಎಂದು ರಾಜ್ಯಕ್ಕೆ ಸೂಚಿಸಿತ್ತು. ಇದಕ್ಕೆ ಹಿಂದೇಟು ಹಾಕಿದ್ದ ರಾಜ್ಯ ಸರಕಾರ ಮತ್ತೆ ಪರಿಹಾರಕ್ಕೆ
ಕೇಂದ್ರದ ಮೊರೆ ಹೋಗಿತ್ತು.

ಹೀಗಾಗಿ, ಜಿಎಸ್‌ಟಿ ಪರಿಹಾರವಾಗಿ ರಾಜ್ಯಕ್ಕೆ ಇನ್ನೂ ₹9000ಕೋಟಿಗೂ ಹೆಚ್ಚಿನ ಪರಿಹಾರ ಸಿಗ ಬೇಕಿದ್ದು, ಈ ಬಾರಿ ಕೇಂದ್ರ ಬಜೆಟ್ ನೋಡಿದರೆ ಹಿಂದಿನ ಎಲ್ಲಾ ಬಾಕಿ ಪಾವತಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲ. ಇದರಿಂದ ರಾಜ್ಯ ಸರಕಾರ ಮುಂಬರುವ ಬಜೆಟ್ ಮಂಡಿಸಲು ಕೇಂದ್ರದಿಂದ ಕೊಂಚ ನೆರವು ನಿರೀಕ್ಷಿಸುವುದಕ್ಕೂ ಅವಕಾಶವಿದೆ. ಆದರ ಇದರ ಸ್ಪಷ್ಟ ಚಿತ್ರಣ ಜಿಎಸ್‌ಟಿ ಕೌನ್ಸಿಲ್ ಸಭೆ ನಂತರ ತಿಳಿಯುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ರಾಜಕ್ಕೆ ಜಿಎಸ್‌ಟಿ ಬಾಕಿ ಹೇಗೆ ಸಿಗುತ್ತೆ?
ಕೇಂದ್ರ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಅಭಿವೃದ್ಧಿಗೆ ₹14,188ಕೋಟಿ ಅನುದಾನ ಬಿಟ್ಟರೆ ಹೇಳಿಕೊಳ್ಳುವ ಲಾಭವೇನೂ ಇಲ್ಲ. ಆದರೂ ಈ ಬಜೆಟ್‌ನಲ್ಲಿ ಕೇಂದ್ರ ಸರಕಾರ ಕೃಷಿ ಸೆಸ್ ಸೇರಿದಂತೆ ಅನೇಕ ತೆರಿಗೆ ಪ್ರಸ್ತಾಪಗಳನ್ನು ಮಾಡಿದೆ. ಆದಾಯ ತೆರಿಗೆ ಮಿತಿ ಹೆಚ್ಚಿಸದೆ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ, ಆಹಾರ ಉತ್ಪನ್ನಗಳ ತೆರಿಗೆ ಹೆಚ್ಚಿಸಿದೆ. ಜತೆಗೆ ಬಡ್ಡಿ ಮತ್ತು
ಪಿಂಚಣಿ ರಹಿತ ಹಿರಿಯ ನಾಗರೀಕರಿಗೆ ತೆರಿಗೆ ವಿಧಿಸಲಾಗಿದೆ. ಇದರಿಂದ ಸರಕಾರ ಹೆಚ್ಚಿನ ಆದಾಯ ಹೆಚ್ಚಾಗುವ ಸಾಧ್ಯತೆಯಿದ್ದು, ಆದಾಯ ಮೂಲಗಳು ಚೇತರಿಸಿಕೊಳ್ಳುವ ಸಂಭವ ಇದೆ ಎಂದು ತಜ್ಞರು ಹೇಳಿದ್ದಾರೆ.

ಏನಿದು ಜಿಎಸ್‌ಟಿ ಸಾಲ?
ದೇಶಾದ್ಯಂತ 2017ರ ಜುಲೈನಿಂದ ಜಿಎಸ್‌ಟಿ ಜಾರಿಯಾಗಿತ್ತು. ಇದರ ಅಡಿಯಲ್ಲಿ ರಾಜ್ಯ ಸರಕಾರ (ಕೆಲವು ಬಿಟ್ಟು) ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡಿ ನಂತರ ಪಡೆಯಬೇಕಿತ್ತು. ಆಗ ತೆರಿಗೆ ಸಂಗ್ರಹದಲ್ಲಿ ಕೊರತೆಯಾದರೆ ರಾಜ್ಯಕ್ಕೆ ಕೇಂದ್ರವೇ ಪರಿಹಾರ ವಾಗಿ ನೀಡುತ್ತಿತ್ತು. ಅದರಂತೆ 2021ಕ್ಕೆ ₹18,663 ಕೋಟಿ ಪರಿಹಾರ ನೀಡಬೇಕಿತ್ತು.

ಇದೇ ರೀತಿ, 2022ರ ವರೆಗೂ ಕೇಂದ್ರ ಸರಕಾರ ವಾರ್ಷಿಕ ಸರಾಸರಿ ₹17000 ಕೋಟಿ ನೀಡುತ್ತಿತ್ತು. ಆದರೆ 2020-21ರಲ್ಲಿ ಕೋವಿಡ್ ಕಾರಣದಿಂದ ತೆರಿಗೆ ಸಂಗ್ರಹ ಕುಸಿದಿತ್ತು. ಆಗ ಕೇಂದ್ರ ಸರಕಾರ ದೇಶದ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲಾಗದು. ಬೇಕಾದರೆ ಸಾಲ ಪಡೆಯಿರಿ ಎಂದಿತ್ತು. ಇದನ್ನು ಅನೇಕ ರಾಜ್ಯಗಳು ತಿರಸ್ಕರಿಸಿದ್ದವು. ಆದರೆ ರಾಜ್ಯ ಸರಕಾರ ಮೌನವಾಗಿತ್ತು. ಹೀಗಾಗಿ ಕೇಂದ್ರ ಸರಕಾರವೇ ಜಿಎಸ್‌ಟಿ ಹೆಸರಿನಲ್ಲಿ ವಾರಕ್ಕೆ ₹6000 ಕೋಟಿ ಸಾಲ ಪಡೆದು ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದು, ರಾಜ್ಯಕ್ಕೂ ಪ್ರತಿವಾರ ₹100 ಕೋಟಿ ಪರಿಹಾರ ಸಿಗುತ್ತಿದೆ.

ಕೋಟ್‌

ಕೋವಿಡ್ ವಿಪತ್ತಿನ ನಡುವೆಯೂ ಕೇಂದ್ರ ಸರಕಾರ ಆದಾಯ ಕ್ರೂಢೀಕರಣಕ್ಕೆ ಕೈ ಹಾಕಿರುವ ಪರಿಶ್ರಮ ನೋಡಿದರೆ ರಾಜ್ಯ
ಸರಕಾರಗಳಿಗೆ ಕೇಂದ್ರ ಪಾವತಿಸಬೇಕಿರುವ ಜಿಎಸ್‌ಟಿ ಪರಿಹಾರದ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಇವೆ.
-ಬಿ.ಟಿ.ಮನೋಹರ್ ತೆರಿಗೆ ತಜ್ಞರು