ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಅಂತರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿರುವ ಹಾನಗಲ್ ಸದಾಶಿವ ಸ್ವಾಮೀಜಿಯವರ ದೇವಸ್ಥಾನದಲ್ಲಿ ಶುಕ್ರವಾರ ಹಾನಗಲ್ ಸದಾಶಿವ ಸ್ವಾಮೀಜಿಯವರ ೩೯ ನೇ ಪುಣ್ಯಸ್ಮರಣೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಂದ ಆಚರಿಸಿದರು.
ಬೆಳಗ್ಗೆ ದೇವಸ್ಥಾನದಲ್ಲಿ ಹಾನಗಲ್ ಸದಾಶಿವ ಸ್ವಾಮೀಜಿಗಳ ಕರ್ತೃ ಗದ್ದುಗೆಗೆ ಹಾಗೂ ಅವರ ಪಾದುಕೆಗಳಿಗೆ ಬಸವೇಶ್ವರ ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ ಅವರು ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಈ ವರ್ಷದ ಪುಣ್ಯಸ್ಮರಣೆಯಲ್ಲಿ ಸ್ವಾಮೀಜಿಯವರ ಪಾದುಕೆಗಳಿಗೆ ವಿಶೇಷ ಪೂಜೆ ನೆರವೇರಿದ್ದು ಭಕ್ತರಿಗೆ ಧನ್ಯತಾಭಾವ ಮೂಡಿತು. ಭಕ್ತರು ಕಾಯಿ ಕರ್ಪೂರ ಅರ್ಪಿಸಿ ಸ್ವಾಮೀಜಿಯವರ ಕರ್ತೃ ಗದ್ದುಗೆ ಹಾಗೂ ಅವರ ಪಾದುಕೆಗಳ ದರ್ಶನ ಪಡೆದುಕೊಂಡರು. ಪೂಜೆ ನೆರವೇರಿದ ನಂತರ ಹಾನಗಲ್ ಸದಾಶಿವ ಸ್ವಾಮೀಜಿಯವರ ಭಾವಚಿತ್ರ ಮೆರವಣಿಗೆ ಎತ್ತಿನ ಬಂಡಿಯಲ್ಲಿ ಡೊಳ್ಳಿನ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡ ಲಾಗಿತ್ತು.
ದೇವಸ್ಥಾನಕ್ಕೆ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಸ್ಥಳೀಯ ಸಿದ್ದಲಿಂಗ ಸ್ವಾಮೀಜಿ, ಹುಣಶ್ಯಾಳ ಪಿಬಿಯ ಆನಂದ ದೇವರು ಭೇಟಿ ನೀಡಿ ದರ್ಶನ ಪಡೆದುಕೊಂಡರು.
ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರು, ಪಟ್ಟಣದಲ್ಲಿ ೧೯೮೩ ರ ನ.೧೮ ರಂದು ಕಳೆದ ಆರು ತಿಂಗಳಿಂದ ಸ್ಥಳೀಯ ವಿರಕ್ತಮಠದ ಮುರುಗೇಂದ್ರ ಸ್ವಾಮೀಜಿಯವರು ನಡೆಸಿಕೊಂಡು ಬಂದಿದ್ದ ಬಸವ ಪುರಾಣ ಮಂಗಲ ಹಾಗೂ ೬೩ ಪುರಾತನ ಶರಣರ ಮಂಟಪ ಮಹಾಪೂಜೆಗೆ ಹಾನಗಲ್ ಸದಾಶಿವ ಸ್ವಾಮೀಜಿಯವರು ಬಸವ ನೆಲ ಬಸವನಬಾಗೇವಾಡಿಗೆ ಆಗಮಿಸಿದ್ದರು. ಈ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜೆ, ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡುವ ಸಂದರ್ಭದಲ್ಲಿ ಅವರು ನಿಮಗೆಲ್ಲ ಆನಂದ ನಮಗೆ ಕೈಲಾಸ ಎನ್ನುತ್ತಾ ಲಿಂಗೈಕ್ಯರಾದರು.
ಸ್ವಾಮೀಜಿಯವರು ಲಿಂಗೈಕ್ಯರಾದ ಅವರ ಶರೀರವನ್ನು ಭಕ್ತರು ಹಾನಗಲ್ಗೆ ತೆಗೆದುಕೊಂಡು ಹೋಗಿ ಅಂತಿಮ ಧಾರ್ಮಿಕ ವಿಽವಿಧಾನ ನೆರವೇರಿಸಿ ಅಲ್ಲಿಯೇ ಸ್ವಾಮೀಜಿಯವರ ಕರ್ತೃ ಗದ್ದುಗೆ ನಿರ್ಮಿಸಿದರು. ಇಲ್ಲಿನ ಭಕ್ತರು ಸ್ವಾಮೀಜಿಯವರು ಇಲ್ಲಿಯೇ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ದೇವಸ್ಥಾನ ಕಟ್ಟಿಸಿ ಪ್ರತಿ ವರ್ಷ ಅವರ ಪುಣ್ಯಸ್ಮರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಹಾನಗಲ್ ಸದಾಶಿವ ಸ್ವಾಮೀಜಿಯವರು ಬಸವನಬಾಗೇವಾಡಿಗೆ ಬಂದ ಸಂದರ್ಭದಲ್ಲಿ ಅವರ ಪಾದುಕೆಗಳು ಇಲ್ಲಿಯೇ ಉಳಿದುಕೊಂಡಿದ್ದವು. ಅವುಗಳನ್ನು ವಿರಕ್ತಮಠದ ನಮ್ಮ ಹಿರಿಯ ಸ್ವಾಮೀಜಿಯವರಾದ ಮುರುಗೇಂದ್ರ ಸ್ವಾಮೀಜಿಯವರು ಜೋಪಾನವಾಗಿ ತೆಗೆದು ಇಟ್ಟಿದ್ದರು. ಕಳೆದ ಎರಡು ತಿಂಗಳ ಹಿಂದೆ ಮಠದಲ್ಲಿ ಹಿರಿಯ ಸ್ವಾಮೀಜಿಯವರು ಒಂದು ಪುಸ್ತಕ ತೆಗೆದುಕೊಡಲು ಹೇಳಿದ ಸಂದರ್ಭದಲ್ಲಿ ಶ್ರೀಗಳ ಪಾದುಕೆಗಳು ಸಿಕ್ಕವು. ಇವು ಯಾರ ಪಾದುಕೆ ಎಂದು ಹಿರಿಯ ಶ್ರೀಗಳನ್ನು ಕೇಳಿದಾಗ ಅವರು ಹಾನಗಲ್ ಸದಾಶಿವ ಸ್ವಾಮೀಜಿಯವರ ಪಾದುಕೆ ಎಂದು ಹೇಳಿದರು. ಇದನ್ನು ಕೇಳಿ ನಮಗೆ ಆನಂದ ಬಾಷ್ಪ ಬಂದವು. ಸ್ವಾಮೀಜಿಯವರ ಪಾದುಕೆಗಳು ೩೯ ವರ್ಷದ ನಂತರ ನಮಗೆ ಸಿಕ್ಕಿರುವುದು ಭಾಗ್ಯ. ಅವರ ಪುಣ್ಯಸ್ಮರಣೆಯಂದು ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಬೇಕೆಂದು ದೇವಸ್ಥಾನಕ್ಕೆ ತರಲಾಗಿದೆ. ಇಂದು ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇನ್ನು ಪ್ರತಿವರ್ಷ ಪುಣ್ಯಸ್ಮರಣೆಯಂದು ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಸನಗೌಡ ಚಿಕ್ಕೊಂಡ, ಚಂದ್ರಶೇಖರ ಮುರಾಳ, ಶಿವರುದ್ರಯ್ಯ ಹಿರೇಮಠ, ಶ್ರೀಶೈಲ ಜಾವರಮಠ, ಮಲ್ಲು ಇವಣಗಿ, ಚಂದ್ರಾಮ ಹಡಪದ, ಪರಶು ಇವಣಗಿ, ಈರಣ್ಣ ಚಿಕ್ಕೊಂಡ, ಸುರೇಶ ಮಿಣಜಗಿ, ಮುದುಕು ಕೊಟ್ರಶೆಟ್ಟಿ, ಮಲ್ಲಯ್ಯ ನರಸಲಗಿಮಠ, ಮಲ್ಲು ಬಿದರಿ, ಸಂಗು ಬಿದರಿ, ಯಲ್ಲಪ್ಪ ತೋಳಮಟ್ಟಿ, ಬಸವರಾಜ ನಾಗೂರ, ಪ್ರಕಾಶ ಪತ್ತಾರ ಇತರರು ಭಾಗವಹಿಸಿದ್ದರು.