Friday, 15th November 2024

Harassment: ರಾಮೇಶ್ವರಂ ಕೆಫೆ ಕ್ಯೂನಲ್ಲಿ ಲೈಂಗಿಕ ಕಿರುಕುಳ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯ ಅಳಲು

harassment

ಬೆಂಗಳೂರು: ಬಾಂಬ್‌ ಸ್ಫೋಟ ಸಂಭವಿಸಿದ್ದ ಬೆಂಗಳೂರು ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಪುಣೆಯ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳದ (Harassment) ಅನುಭವ ಆಗಿದ್ದು, ಇದರಿಂದ ನೊಂದ ಆಕೆ ʼಐ ಹೇಟ್‌ ಬೆಂಗಳೂರುʼ ಎಂದು (Bengaluru crime news) ಸೋಶಿಯಲ್‌ ಮೀಡಿಯಾದಲ್ಲಿ (Social media) ಪೋಸ್ಟ್‌ ಹಾಕಿದ್ದಾರೆ.

ಪುಣೆಯ ಯುವತಿ ರಾಮೇಶ್ವರಂ ಕೆಫೆ ಸೇರಿದಂತೆ ಬೆಂಗಳೂರಿನ ಹಲವು ಕಡೆ ತನಗೆ ಸಂಭವಿಸಿದ ಕೆಟ್ಟ ಘಟನೆಗಳ ಬಗ್ಗೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಕ್ಯೂನಲ್ಲಿ ನಿಂತಿರುವಾಗ ನಡೆದ ಕಿರುಕುಳದಿಂದ ಆಕೆಯ ಸಹನೆ ಕಟ್ಟೆ ಒಡೆದಿದ್ದು, ಬೆಂಗಳೂರಿನಲ್ಲಿ ತನಗಾಗುತ್ತಿರುವ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯ ಕ್ಯೂನಲ್ಲಿ ಈಕೆ ನಿಂತಿರುವಾಗ ಹಿಂಬದಿಯಿಂದ ಯಾರೋ ಒಬ್ಬ ವ್ಯಕ್ತಿ ಕಿರುಕುಳ ನೀಡಿದ್ದಾನೆ. ತಕ್ಷಣವೆ ಕಿರುಚಾಡಿ ಕಿರುಕುಳ ನೀಡಿದವನ ವಿರುದ್ಧ ಕೂಗಾಡಿದಾಗ, ತನ್ನದೇನೂ ತಪ್ಪೇ ಇಲ್ಲ ಎಂದು ನಟಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಮೊದಲಲ್ಲ. ಪುಣೆಯಿಂದ ಬೆಂಗಳೂರಿಗೆ ಬಂದಾಗಿನಿಂದ ಪ್ರತಿ ಬಾರಿ ಇಂತಹ ಘಟನೆಗಳು ಎದುರಾಗುತ್ತಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಬೆಂಗಳೂರಿನ ಹೆಚ್ಎಸ್‌ಆರ್ ರಸ್ತೆಯಲ್ಲಿ ನಡೆದುಕೊಂಡು ಹೋಗುುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಶ್ಲೀಲ ಪದ ಬಳಸಿ ಕೂಗಿದ್ದಾರೆ. ಇದಕ್ಕೂ ಮೊದಲು ಕಚೇರಿಯಲ್ಲಿ ಕೆಲವರು ನಡೆದುಕೊಂಡ ರೀತಿ, ಖಾಸಗಿ ಮೆಸೇಜ್ ಮಾಡುವುದು ಸೇರಿದಂತೆ ಹಲವು ಘಟನೆಗಳು ಪದೇ ಪದೆ ನಡೆಯುತ್ತಿದೆ.ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ತಾಣವಾಗಿ ಕಾಣುತ್ತಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಇದೀಗ ನನಗೆ ಬೆಂಗಳೂರು ಎಂದರೆ ಭಯವಾಗುತ್ತಿದೆ. ಯಾವಾಗ ನನ್ನ ಮೇಲೆ ದಾಳಿಯಾಗುತ್ತೋ ಎಂಬ ಭಯ ಕಾಡುತ್ತಿದೆ. ಈ ರೀತಿ ಘಟನೆ ಎಲ್ಲೆಡೆ ನಡೆಯುತ್ತಿದೆ. ಇದೀಗ ನನಗೆ ಬೇರೆಡೆ ಕೆಲಸ ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಾದರೆ ಇಂದಿರಾನಗರ ಅಥವಾ ಮಹಿಳೆಯರ ಸುರಕ್ಷತೆ ಇರುವ ಕಡೆ ನೋಡಬೇಕು. ಪುಣೆ ಅಥವಾ ಮುಂಬೈ ಆದರೆ ಉತ್ತಮ ಎಂದು ಮಹಿಳೆ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಘಟನೆಗಳ ಬಳಿಕ ನಾನು ಬೆಂಗಳೂರನ್ನು ದ್ವೇಷಿಸುತ್ತಿದ್ದೇನೆ. ನಾನು ಸ್ವತಂತ್ರವಾಗಿ ಇರಲು ಬಯಸುತ್ತೇನೆ. ಪುಣೆಯಲ್ಲಿ ಹುಟ್ಟಿ ಬೆಳೆದ ನನಗೆ ಬೆಂಗಳೂರು ಆತಂಕದ ಗೂಡಾಗುತ್ತಿದೆ. ಕಚೇರಿ, ಮನೆ, ಶಾಪಿಂಗ್, ಹೀಗೆ ಒಬ್ಬಂಟಿಯಾಗಿ ತಿರುಗಾಡಲು ಬಯಸುತ್ತೇನೆ. ನನ್ನ ಸ್ವಾತಂತ್ರ್ಯವನ್ನು ಆನಂದಿಸುತ್ತೇನೆ. ಆದರೆ ಇಲ್ಲಿ ತಿರುಗಾಡಲು ಆಗುತ್ತಿಲ್ಲ, ಕಚೇರಿಗೆ ತೆರಳಿದರೂ ಸಮಸ್ಯೆ, ರಸ್ತೆಯಲ್ಲಿ ನನ್ನ ಪಾಡಿಗೆ ತೆರಳಿದರೂ ಸಂಕಷ್ಟ ತಪ್ಪುತ್ತಿಲ್ಲ ಎಂದು ಪುಣೆ ಯುವತಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಮಹಿಳೆಯೊಬ್ಬರು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್ ಹತ್ತಿ ಸಂಕಷ್ಟ ಅನುಭವಿಸಿದ ಘಟನೆ ಬೆಳಕಿಗೆ ಬಂದಿತ್ತು. ಓಲಾ ಕ್ಯಾಬ್ ಡ್ರೈವರ್ ಹೆಸರಿನಲ್ಲಿ ನಕಲಿ ಡ್ರೈವರ್ ಮಹಿಳೆ ಹತ್ತಿಸಿಕೊಂಡು ಹೊರಟು ಹಣ ವಸೂಲಿ ಮಾಡಲು ಮುಂದಾಗಿದ್ದ. ಆದರೆ ಪೊಲೀಸರು ನೆರವು ಕೇಳಿದ ಯುವತಿ ಅಪಾಯದಿಂದ ಪಾರಾಗಿದ್ದಳು.

ಇದನ್ನೂ ಓದಿ: Self Harming: ಕೈಗಾ ಅಣುಸ್ಥಾವರದ ಅಧಿಕಾರಿ ಪಿಸ್ತೂಲ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ