Sunday, 15th December 2024

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಪಾರ ಅವಕಾಶ: ಹರ್ಷಾನಂದ ಗುತ್ತೇದಾರ

ಕಸಾಪನಿಂದ 110 ವಿದ್ಯಾರ್ಥಿಗಳಿಗೆ ಗುಣಮಣಿ ಪ್ರಶಸ್ತಿ ಪ್ರದಾನ

ಆಳಂದ: ಮಾತೃಭಾಷಾ ಶಿಕ್ಷಣದಿಂದಲೇ ಜೀವನದಲ್ಲಿ ಸಾಧನೆಗೆ ಅವಕಾಶವಿದೆ ಕನ್ನಡ ಕಲಿಕೆಗೆ ಹಿಂಜರಿಯದೆ, ಆಂಗ್ಲಭಾಷೆಗೆ ಬೆನ್ನು ಬೀಳದೆ ಕನ್ನಡ ಶಿಕ್ಷಣದ ಕಲಿಕೆಗೆ ಒತ್ತು ನೀಡಿ ಉನ್ನತ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಗುಣಮಣಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ದರು.

ವಿದ್ಯಾರ್ಥಿಗಳು ಮತ್ತು ಪಾಲಕರು ಕೇವಲ ಇಂಗ್ಲಿಷ್‌ನಿಂದಲೇ ಸಾಧನೆ ಸಾಧ್ಯವೆಂಬ ಗೃಹಿಕೆಯಿಂದ ಹೊರಬಂದು ಕನ್ನಡ ಕಲಿಕೆಯಲ್ಲೂ ಇರುವ ಅತ್ಯುತ್ತಮ ಅವಕಾಶ ಗಳನ್ನು ಪಡೆದುಕೊಳ್ಳಬೇಕು. ಇಂದು ಕನ್ನಡ ಅಳಿವು ಮತ್ತು ಉಳಿವಿನ ದೊಡ್ಡ ಸವಾಲು ಮುಂದಿದೆ. ಕನ್ನಡ ಕಲಿಕೆಯಿಂದಲೂ ಏನೇಲ್ಲ ಸಾಧನೆ ಮಾಡಲು ಸಾಧ್ಯವಿದೆ, ಕನ್ನಡ ಉಳಿಸುವುದರ ಜೊತೆಗೆ ನಮ್ಮ ಸಾಧನೆ ಮೆರೆಯವಂತಾಗಬೇಕು ಎಂದು ಹೇಳಿದರು.

10ನೇ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತಾಲೂಕು 3ನೇ ಸ್ಥಾನ ಪಡೆದುಕೊಂಡಿದೆ. ಕನ್ನಡದಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಕಸಾಪ ಸನ್ಮಾನಿಸುತ್ತಿರುವ ಕರ‍್ಯ ಶ್ಲಾಘನೀಯ ವಾಗಿದೆ. ಸ್ಪರ್ಧಾತ್ಮಕತೆಯಲ್ಲಿ ಕನ್ನಡದ ಜೊತೆ ಜೊತೆಗೆ ಅನ್ಯ ಭಾಷೆಗಳನ್ನು ಕರಗತಮಾಡಿಕೊಂಡು ಭವಿಷ್ಯದಲ್ಲಿ ಸಾಧಕ ರಾಗುವ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸಾಧಕರಾಗಿ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕೈಗೊಂಡು ಮಾತನಾಡಿ, ಕನ್ನಡ ಸಾಧಕರಿಗೆ ಗೌಣವಾಗಿ ಕಾಣುವ ಭಾವನೆ ಸಮಾಜ ದಲ್ಲಿದೆ. ಆದರೆ ಮಾತೃ ಭಾಷೆ ಪರಿಣಿತರಾಗಿ ಬೇರೆ ಭಾಷೆಗಳ ಮೇಲೆ ಪ್ರಭುದ್ಧತೆ ಸಾಧಿಸಿ ಗುರಿಸಾಧಿಸಬೇಕು. ಕನ್ನಡದಲ್ಲೇ ಕಲಿತು ಉನ್ನತ ಮಟ್ಟದ ಸಾಧನೆ ಮಾಡಿದವರಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ಗಡಿನಾಡು ಕಸಾಪ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಮಾತನಾಡಿ, ಬಡತನ ನಿರ್ಮೂಲನೆಗೆ ಗುಣಮಟ್ಟದ ಶಿಕ್ಷಣ ಪರಿಣಾಮಕಾರಿಯಾಗಿದೆ. ಕನ್ನಡ ಅಳಿವು ಉಳಿವಿಗಾಗಿ ಗಡಿನಾಡಿನಲ್ಲಿ ಕನ್ನಡದ ಕಂಪು ಹರಿಸಲು ಸರ್ವರ ಪ್ರಯತ್ನ ಅಗತ್ಯ ವಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ಮಾತನಾಡಿ, ವಿಶ್ವದ ಭಾಷೆ ಗಳಲ್ಲಿ ಕನ್ನಡಕ್ಕೆ ಏಂಟು ಜ್ಞಾನಪೀಠ ಪ್ರಶಸ್ತಿಗಳ ಲಭಿಸಿವೆ. ಕನ್ನಡ ಉಳಿಸಿ ಬೆಳೆಸಲು ಮಾದರಿಯ ಕಾರ್ಯಕ್ರಮವನ್ನಾಗಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗುಣಮಣಿ ಪ್ರಶಸ್ತಿ ಪ್ರದಾನ ಕರ‍್ಯಕ್ರಮದ ಮೂಲಕ ಕಸಾಪ ಜಿಲ್ಲೆಯ ಎಲ್ಲಡೆ ಮಾದರಿ ಹೆಜ್ಜೆಯನ್ನಿಟ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಅವರು ಪ್ರಾಸ್ತಾವಿಕ ಮಾತನಾಡಿ, ೧೦ನೇ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವ ನಿಟ್ಟಿ ನಲ್ಲಿ ಕರ‍್ಯಕ್ರಮ ಆಯೋಜಿಸಿದ್ದು, ಮುಂದೆಯೂ ಇಂಥ ಹಲವಾರ ಕನ್ನಡಪರ ಕರ‍್ಯ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಷಗಿ, ಮಲ್ಲಿಕಾರ್ಜುನ ಕಂದಗುಳೆ, ಶಿವುಕುಮಾರ ಹೀರಾ, ಚಂದ್ರಕಾಂತ ಘೋಡಕೆ ಉಪಸ್ಥಿತರಿದ್ದರು.

ಶರಣಬಸಪ್ಪ ವಡಗಾಂವ, ವಿಶ್ವನಾಥ ಘೋಡಕೆ, ಚಂದ್ರಶೇಖರ ಕಟ್ಟಿಮನಿ, ಸೇರಿದಂತೆ ಕಸಾಪ ಪದಾಧಿಕಾರಿಗಳು, ಗುಣಮಣಿ ಪ್ರಶಸ್ತಿ ಸ್ವೀಕರಿಸಿದ ೧೧೦ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತ್ತು ಪಾಲಕರು ಆಗಮಿಸಿದ್ದರು. ಕಲಾವಿದ ಕಾಶಿನಾಥ ಬಿರಾದಾರ ಕನ್ನಡ ಗೀತೆ ಹಾಡಿದರು. ಅಂಬಾರಾಯ ಕಾಂಬಳೆ ನಿರೂಪಿಸಿದರು. ಪ್ರಾಚಾರ್ಯ ಅಶೋಕ ರೆಡ್ಡಿ ಸ್ವಾಗತಿಸಿದರು. ಗೋವಿಂದ ಹುಸೇನಖಾನ್ ವಂದಿಸಿದರು.