ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ (Hasanamba temple) ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಗುರುವಾರ ತೆಗೆಯಲಾಗಿದ್ದು, ಭಕ್ತರಿಗೆ ದೇವಿ ದರ್ಶನ ನೀಡಿದ್ದಾಳೆ. ಮಧ್ಯಾಹ್ನ 12.10ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಬಾಳೆಗೊನೆ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದ ವೇಳೆ, ಕಳೆದ ವರ್ಷ ದೇಗುಲ ಮುಚ್ಚುವ ವೇಳೆ ಹಚ್ಚಿದ್ದ ದೀಪ ಹಾಗೆಯೇ ಉರಿಯುತ್ತಿದ್ದದ್ದು ಕಂಡುಬಂತು. ಇನ್ನು ದೇವಿ ಮುಂದೆ ಇಟ್ಟಿದ್ದ ಹೂವು ಬಾಡದೆ, ನೈವೇದ್ಯ ಹಳಸದೆ ಇರುವುದು ಕಂಡುಬಂದಿದೆ. ಇಂದಿನಿಂದ ನ.3ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದ್ದು, 9 ದಿನಗಳ ಕಾಲ ದೇವಿಯು ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಎಚ್.ಪಿ.ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲ ತೆಗೆಯಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಸಂಪ್ರದಾಯವಾಗಿದೆ. ಈ ವರ್ಷ 9 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ | Huligemma Temple : ಇತಿಹಾಸ ಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಹುಂಡಿ ಎಣಿಕೆ: ಭರ್ಜರಿ ಕಾಣಿಕೆ ಸಂಗ್ರಹ
ಇಂದಿನಿಂದ ನವೆಂಬರ್ 3ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಇಂದು ಮತ್ತು ನ.3ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿದೆ. ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶೇಷ ಹೂವಿನ ಅಲಂಕಾರದಿಂದ ದೇವಾಲಯ ಕಂಗೊಳಿಸುತ್ತಿದೆ.