Friday, 22nd November 2024

HC Judge Remarks: ಮುಸ್ಲಿಂ ಪ್ರಾಬಲ್ಯ ಏರಿಯಾವನ್ನು ಪಾಕಿಸ್ತಾನ ಎಂದ ಕರ್ನಾಟಕ ಹೈಕೋರ್ಟ್‌ ಜಡ್ಜ್‌- ಸುಪ್ರೀಂಕೋರ್ಟ್‌ ಗರಂ

HC Judge remarks

ನವದೆಹಲಿ: ಕೋರ್ಟ್‌ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ(HC Judge Remarks) ನೀಡಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಬೆನ್ನಲ್ಲೇ ಸುಪ್ರೀಂಕೋರ್ಟ್‌(Supreme Court) ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವನ್ನು ಪಾಕಿಸ್ತಾನವೆಂದು ಪ್ರಸ್ತಾಪಿಸಿ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ವಿವಾದದ ಸೃಷ್ಟಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ಇದು ಸುಪ್ರೀಂಕೋರ್ಟ್‌ ಗಮನ ಸೆಳೆದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಸ್‌.ಖನ್ನಾ, ಬಿ.ಆರ್‌. ಗವಾಯ್‌, ಎಸ್‌ ಕಾಂತ್‌ ಮತ್ತು ಹೆಚ್‌.ರಾಯ್‌ ಇದ್ದ ಪಂಚ ಸದಸ್ಯ ಪೀಠ, ನ್ಯಾ.ವೇದವ್ಯಾಸಾಚಾರ್‌ ಶ್ರೀಶಾನಂದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ತಾಕೀತು ಮಾಡಿದೆ.

ನ್ಯಾಯಾಲಯದ ಕಲಾಪಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸಾಮಾಜಿಕ ಜಾಲತಾಣಗಳು ಸಕ್ರಿಯ ಪಾತ್ರವನ್ನು ವಹಿಸಿದಾಗ ಇಂತಹ ಘಟನೆಗಳು ಬೆಳಕಿಗೆ ಬರುತ್ತದೆ ಎಂದ ಕೋರ್ಟ್‌, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ನಮಗೆ ಸಹಾಯ ಮಾಡಲು ಎಜಿ ಮತ್ತು ಎಸ್‌ಜಿಯನ್ನು ಕೇಳಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಕೋರಿ ಈ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವಂತೆ ನಾವು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚನೆ ನೀಡಿದ್ದೇವೆ. 2 ವಾರಗಳೊಳಗಾಗಿ ಈ ವರದಿ ಸಲ್ಲಿಸುವಂತೆ ಹೇಳಲಾಗಿದೆ ಎಂದು ತಿಳಿಸಿದೆ.

ಏನಿದು ವಿವಾದ?

ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಸ್ಲಿಂ ಧರ್ಮದ ಜನರು ಹೆಚ್ಚಾಗಿ ವಾಸಿಸುವ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ನ್ಯಾ. ಶ್ರೀಶಾನಂದ ಅವರು ವಿವಾದವನ್ನು ಹುಟ್ಟುಹಾಕಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಧೀಶರು, ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ, ಪ್ರತಿ ಆಟೋ ರಿಕ್ಷಾದಲ್ಲಿ 10 ಜನರು ಇರುತ್ತಾರೆ. ಇದು ಅನ್ವಯಿಸುವುದಿಲ್ಲ. ಏಕೆಂದರೆ ಗೋರಿ ಪಾಳ್ಯದಿಂದ ಮಾರುಕಟ್ಟೆಯವರೆಗಿನ ಮೈಸೂರು ರಸ್ತೆಯ ಮೇಲ್ಸೇತುವೆ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ಇರಿಸಿದರೂ ಅಷ್ಟೇ…ಎಂದು ಹೇಳಿದ್ದಾರೆ. ನ್ಯಾಯಾಧೀಶರು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ​ ವೈರಲ್​ ಆಗುತ್ತಿದ್ದು ಅನೇಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Supreme Court: ಟೆಲಿಕಾಂ ಕಂಪನಿಗಳಿಗೆ ಹಿನ್ನಡೆ; ಎಜಿಆರ್‌ ಮರು ಲೆಕ್ಕಾಚಾರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌