Tuesday, 24th September 2024

HC Verdict on CM Siddaramaiah: ಮುಂದುವರಿದ ಮುಡಾ ಸಂಕಷ್ಟ, ಸಿಎಂ ಸಿದ್ದರಾಮಯ್ಯ ಮುಂದಿನ ನಡೆ ಏನು?

cm-siddaramaiah-high-court ok

ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (HC Verdict on CM Siddaramaiah) ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ (Governor Thawar Chand Gehlot) ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸುತ್ತಿನ ಕೋಲಾಹಲ ಸೃಷ್ಟಿಸಲಿದೆ. ಸಿಎಂ ಮೇಲೆ ಪ್ರತಿಪಕ್ಷಗಳು ದಾಳಿ ಚುರುಕುಗೊಳಿಸಿವೆ. ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಎಂ ಪರ ವಕೀಲರು ಸಜ್ಜಾಗಿದ್ದಾರೆ.

ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡುವಲ್ಲಿ ರಾಜ್ಯಪಾಲರು ವಿವೇಚನಾಧಿಕಾರ ಬಳಸಿದ್ದಾರೆ. ಈ ಕುರಿತು ಸಚಿವ ಸಂಪುಟದ ತೀರ್ಮಾನ ಅಥವಾ ಸಲಹೆಯನ್ನು ರಾಜ್ಯಪಾಲರು ಅಂಗೀಕರಿಸಬೇಕಿಲ್ಲ. ಇದು ಸಂಪೂರ್ಣವಾಗಿ ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಪಟ್ಟಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ತೀರ್ಪಿನಲ್ಲಿ ಒತ್ತಿ ಹೇಳಿದರು. ಆದರೆ ಈ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶವಿದೆ ಎಂದು ನ್ಯಾಯಾಧೀಶರು ನುಡಿದರು. ತಾವು ಮೇಲ್ಮನವಿ ಸಲ್ಲಿಸುವುದಾಗಿ ಸಿಎಂ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಅವರು ನುಡಿದರು.

ತಮ್ಮ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ವಜಾಗೊಳಿಸಿದ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಆಪ್ತ ಸಚಿವರು ಹಾಗೂ ವಕೀಲರೊಂದಿಗೆ ಚರ್ಚೆ ನಡೆಸಿದರು. ಮೇಲ್ಮನವಿ ಸಲ್ಲಿಸಲು ಸಿಎಂ ನಿರ್ಧಾರ ಮಾಡಿದ್ದು, ತೀರ್ಪಿನ ವಿವರಗಳು ಬಂದ ಬಳಿಕ ಹೆಚ್ಚಿನ ಕಾನೂನು ಹೋರಾಟದ ಬಗ್ಗೆ ತಿರ್ಮಾನ ಮಾಡಲಿದ್ದಾರೆ. ಹೈಕೋರ್ಟ್‌ನಲ್ಲಿ ಸಿಎಂ ಪರ ಅಭಿಷೇಕ್‌ ಮನು ಸಿಂಘ್ವಿ ವಾದಿಸಿದ್ದು, ಮುಂದಿನ ಹಂತದಲ್ಲಿಲ್ಲಿಯೂ ಅವರೇ ಮುನ್ನಡೆಸಲಿದ್ದಾರೆ.

ಸಿಎಂ ಮುಂದಿನ ನಡೆ ಏನು?

ಈ ತೀರ್ಪು ಪ್ರಶ್ನಿಸಿ ಸಿಎಂ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ ರಾಜ್ಯಪಾಲರ ಪೂರ್ವಾನುಮತಿ ಮತ್ತು ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಕೋರಬಹುದು. ವಿಭಾಗೀಯ ಪೀಠ ರಾಜ್ಯಪಾಲರ ಪೂರ್ವಾನುಮತಿ ಮತ್ತು ಏಕ ಸದಸ್ಯ ನ್ಯಾಯಪೀಠದ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ರಿಲೀಫ್ ಸಿಗಲಿದೆ. ಒಂದು ವೇಳೆ ಸಿದ್ದರಾಮಯ್ಯ ಅವರ ಅರ್ಜಿ ಪುರಸ್ಕಾರವಾದರೆ, ರಾಜ್ಯಪಾಲರ ಕಚೇರಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು. ಜೊತೆಗೆ, ಏಕ ಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠದಲ್ಲಿ ರಾಜ್ಯಪಾಲರ ಕಚೇರಿ ತಡೆಯಾಜ್ಞೆ ಕೋರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಮುಖ್ಯಮಂತ್ರಿ ವಿರುದ್ದದ ಪ್ರಾಸಿಕ್ಯೂಷನ್‌ಗೆ ಮಂಜೂರಾಗಿರುವ ಅನುಮತಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿ, ಪುನಃ ಪ್ರಕರಣವನ್ನು ರಾಜ್ಯಪಾಲರ ಅಂಗಳಕ್ಕೆ ಮರಳಿಸಬಹುದು. ಜೊತೆಗೆ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಿ, ಎಲ್ಲ ದಾಖಲೆ ಪರಿಶೀಲನೆ ನಡೆಸಿದ‌ ನಂತರವೇ ಸೂಕ್ತ ಕಾರಣಗಳನ್ನು ನೀಡಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲರನ್ನು ಹೈಕೋರ್ಟ್ ಕೋರಬಹುದು. ಆಗ ಕೇಸ್ ಮತ್ತೆ ಮೊದಲಿನ ಹಂತಕ್ಕೆ ಬರಲಿದೆ. ಆಗ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರು ಮರು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಅಗತ್ಯ ಸೃಷ್ಟಿಯಾಗುತ್ತದೆ.

ಸಿಎಂಗೆ ಇನ್ನೊಂದು ಆಯ್ಕೆ ಕೂಡ ಇದೆ. ಅವರು ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸದೇ ನೇರವಾಗಿ ಸುಪ್ರೀಂಗೆ ವಿಶೇಷ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: HC Verdict on CM Siddaramaiah: ಸಿಎಂಗೆ ಶಾಕ್‌, ಮುಡಾ ತನಿಖೆಗೆ ಅವಕಾಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ