Thursday, 21st November 2024

HD Deve Gowda: ಡಿ.ಕೆ. ಶಿವಕುಮಾರ್ ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ?; ಎಚ್‌.ಡಿ. ದೇವೇಗೌಡ ಪ್ರಶ್ನೆ

HD Deve Gowda

ಮಂಡ್ಯ: ಡಿ.ಕೆ. ಶಿವಕುಮಾರ್ (DK Shivakumar) ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ?ರೌಡಿ ಕೊತ್ವಾಲ್ ರಾಮಚಂದ್ರ‌ನ ಜತೆ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಈ ಡಿಕೆಶಿ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅಂತಹವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Deve Gowda) ಪ್ರಶ್ನೆ ಮಾಡಿದರು.

ಪಾಂಡವಪುರದ ಚಿನಕುರುಳಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಸುಳ್ಳು ಹೇಳೋದ್ರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು; ಪ್ರಲ್ಹಾದ್‌ ಜೋಶಿ

ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ

ಡಿಸಿಎಂ ಡಿಕೆಶಿ ಅವರು ಚನ್ನಪಟ್ಟಣದಲ್ಲಿ 6 ತಿಂಗಳು ಪ್ರವಾಸ ಮಾಡಿದರು. ಅವರೇ ಪಾರ್ಟಿ ಅಧ್ಯಕ್ಷರು, ಅವರೇ ಬಿ ಫಾರಂ ಕೊಡೋದು. ಕನಕಪುರದ ಎಂಎಲ್ಎ, ಮಂತ್ರಿಯಾದವರು ನಾನೇ ನಿಲ್ತೀನಿ ಎಂದಿದ್ದರು. ಅವರ ತಲೆಯಲ್ಲಿ ಏನೇನೂ ಇದ್ಯೋ. ಎಚ್‌ಡಿಕೆ ವರ್ಸಸ್ ಡಿಕೆ ಅಂತ ದಿನ ಚರ್ಚೆಯಾಗ್ತಿದೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ರಾಮನಗರವನ್ನು ಬೆಂಗಳೂರಿಗೆ ಸೇರಿಸ್ತೀನಿ, ಜನರಿಗೆ ಅನುಕೂಲ ಆಗುತ್ತೆ ಎನ್ನುತ್ತಿದ್ದಾರೆ. ಅವರು ರಾಮನಗರವನ್ನು ಉದ್ಧಾರ ಮಾಡುತ್ತಾರಂತೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವ್ಯಂಗ್ಯವಾಡಿದರು.

ಡಿಕೆಯನ್ನು ಎಚ್ಡಿಕೆಗೆ ಕಂಪೇರ್ ಮಾಡೋದು ಸರಿಯಲ್ಲ. ಮೋದಿ ಅವರು ಕರೆದು ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅಂತಹ ವ್ಯಕ್ತಿತ್ವವನ್ನು ಕುಮಾರಸ್ವಾಮಿ ಬೆಳೆಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಹಾಜನತೆ ಹಣ ಹಾಕಿ ಎಚ್‌ಡಿಕೆ ಗೆಲುವಿಗೆ ದುಡಿದರು. ಕುಮಾರಸ್ವಾಮಿ ಸೋಲಿಸಲು ಎದುರಾಳಿ ಕಂಟ್ರಾಕ್ಟರ್‌ಗೆ 120 ಕೋಟಿ ಹಣವನ್ನು ರಿಲೀಸ್ ಮಾಡ್ತಾರೆ ಎಂದು ಅವರು ಆರೋಪಿಸಿದರು.

62 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ‌

ವಾಲ್ಮೀಕಿ ಸಮಾಜದ ರೂ. 80 ಕೋಟಿ ತೆಗೆದುಕೊಂಡು ತೆಲಂಗಾಣ ಎಲೆಕ್ಷನ್‌ಗೆ ಖರ್ಚು ಮಾಡಿದರು. ಬಡಬಗ್ಗರ ಹಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನನಗೆ 92 ವರ್ಷ, ನಿಖಿಲ್ ಗೆದ್ದ ಬಳಿಕ ಮಲಗಲ್ಲ. ಈ ಸರ್ಕಾರವನ್ನು ತೆಗೆಯುವವರೆಗೂ ಮಲಗಲ್ಲ. 62 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ‌. ಈ ರಾಜ್ಯ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Sandur By Election: ಕಾಂಗ್ರೆಸ್ ಗೆದ್ದರೆ ದೇವಸ್ಥಾನ ಮಾತ್ರವಲ್ಲ, ನಮ್ಮ ಮನೆಗಳೂ ವಕ್ಫ್ ಆಸ್ತಿ ಆಗಲಿವೆ; ಜೋಶಿ ಆತಂಕ

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕ ಮಂಜುನಾಥ್, ಚಿಕ್ಕ ಸೋಮಣ್ಣ, ಇತರರು ಉಪಸ್ಥಿತರಿದ್ದರು.