Sunday, 29th September 2024

HD Kumaraswamy: ಐಪಿಎಸ್ ಅಧಿಕಾರಿ ಚಂದ್ರಶೇಖರ್ ಒಬ್ಬ ಕ್ರಿಮಿನಲ್, ಬ್ಲ್ಯಾಕ್ ಮೇಲರ್; ಎಚ್‌ಡಿ ಕುಮಾರಸ್ವಾಮಿ ಕಿಡಿ

HD Kumaraswamy

ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ (ADGP Chandrashekhar) ಒಬ್ಬ ಬ್ಲ್ಯಾಕ್ ಮೇಲರ್, ಕ್ರಿಮಿನಲ್ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಗುಡುಗಿದರು.

ʼʼತನ್ನ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರವನ್ನು ಚೆನ್ನಾಗಿ ತಯಾರು ಮಾಡಿದ್ದಾರೆ. ಆ ಪತ್ರವನ್ನು ಯಾರು, ಎಲ್ಲಿ ತಯಾರು ಮಾಡಿಕೊಟ್ಟರು ಎನ್ನುವುದು ನನಗೂ ಚೆನ್ನಾಗಿ ಗೊತ್ತಿದೆ. ಉತ್ತರ ಕೊಡುವ ಜಾಗದಲ್ಲಿ, ಸಂದರ್ಭದಲ್ಲಿ ಇದಕ್ಕೆ ಉತ್ತರ ಕೊಡುತ್ತೇನೆʼʼ ಎಂದು ಎಚ್‌ಡಿಕೆ ಹೇಳಿದರು.

ಅಧಿಕಾರಿ ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರದ ಬಗ್ಗೆ ಭಾನುವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ʼʼಆತ ಹೇಳಿರುವಂತೆ ನಾನು ಪ್ರಕರಣದಲ್ಲಿ ಆರೋಪಿ ಇರಬಹುದು. ಆದರೆ ಆತ ಅಧಿಕಾರಿ ಸೋಗಿನಲ್ಲಿರುವ ಕ್ರಿಮಿನಲ್. ಆತನ ವಿರುದ್ಧ ಸರಣಿ ಅಪರಾಧ ಕೃತ್ಯಗಳನ್ನು ಎಸಗಿರುವ ಆರೋಪಗಳಿವೆʼʼ ಎಂದು ಕಿಡಿಕಾರಿದರು.

ʼʼಲೋಕಾಯುಕ್ತರಿಗೆ ರಾಜ್ಯಪಾಲರು ಬರೆದ ಪತ್ರವು ಸರ್ಕಾರಿ ಪ್ರಾಯೋಜಿತ ಒಂದು ನಿರ್ದಿಷ್ಟ ಸುದ್ದಿ ವಾಹಿನಿಗೆ ಸೋರಿಕೆ ಆಗಿತ್ತು. ಅದನ್ನು ಸೋರಿಕೆ ಮಾಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಅದು ರಾಜಭವನದಿಂದಲೇ ಸೋರಿಕೆ ಆಗಿರಬೇಕೆಂದು ಕಥೆ ಕಟ್ಟಿ, ರಾಜಭವನ ಸಿಬ್ಬಂದಿಯನ್ನೇ ತನಿಖೆ ಮಾಡಬೇಕು, ಅನುಮತಿ ಕೊಡಿ ಎಂದು ಅಧಿಕಾರಿ ಚಂದ್ರಶೇಖರ್ ತನ್ನ ಉನ್ನತ ಅಧಿಕಾರಿಗೆ ಪತ್ರ ಬರೆದಿದ್ದರು. ಹೀಗಾಗಿ ಆ ಅಧಿಕಾರಿಯ ದರ್ಪ ಹಾಗೂ ಆತನ ಹಿನ್ನೆಲೆಯ ಬಗ್ಗೆ ನಾನು ದಾಖಲೆಗಳ ಸಮೇತ ಮಾತನಾಡಿದ್ದೇನೆʼʼ ಎಂದು ಕುಮಾರಸ್ವಾಮಿ ತಿಳಿಸಿದರು.

ನನ್ನ ಪ್ರಶ್ನೆಗಳಿಗೆ ಅಧಿಕಾರಿ ಉತ್ತರಿಸಲಿ

ʼʼನಾನು ಕೇಳಿರುವ ಪ್ರಶ್ನೆಗಳಿಗೆ ಆತ ಉತ್ತರ ನೀಡಿಲ್ಲ. ಬದಲಿಗೆ ಕ್ರಿಮಿನಲ್ ಮನಃಸ್ಥಿತಿಯ ಕೊಳಕು ಭಾಷೆಯನ್ನು ಬಳಸಿ, ಒಬ್ಬ ಕೇಂದ್ರ ಸಚಿವರ ಬಗ್ಗೆ ಕೆಟ್ಟದ್ದಾಗಿ ಪತ್ರದಲ್ಲಿ ಪದ ಬಳಕೆ ಮಾಡಿದ್ದಾರೆ. ಇದಕ್ಕೆ ಏನು ಮಾಡಬೇಕು, ಎಲ್ಲಿ ಉತ್ತರ ಕೊಡಬೇಕು ಎನ್ನುವುದು ನನಗೆ ಗೊತ್ತಿದೆʼʼ ಎಂದು ಅವರು ನುಡಿದರು.

ʼʼನಾನು ದಾಖಲೆ, ವಿಷಯ ಇಲ್ಲದೆ ಮಾತನಾಡುವುದಿಲ್ಲ. ಅಧಿಕಾರಿ ಬರೆದಿರುವ ಪತ್ರವನ್ನು ಚೆನ್ನಾಗಿ ಸಿದ್ಧ ಮಾಡಿಕೊಟ್ಟಿದ್ದಾರೆ. ನಾನು ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿ ಮಾಡಿದ ಮೇಲೆ, ಸಂಜೆ ಆ ಅಧಿಕಾರಿ ಎಲ್ಲಿ ಹೋಗಿದ್ದ ಎನ್ನುವುದು ಗೊತ್ತಿದೆ. ಅವರ ಪತ್ರವನ್ನು ಅಲ್ಲಿ ಯಾವ ಕಾನೂನು ಪಂಡಿತರು ರೆಡಿ ಮಾಡಿಕೊಟ್ಟರು, ಅವರೊಂದಿಗೆ ಇನ್ನೊಬ್ಬರು ಯಾರಿದ್ದರು ಎನ್ನುವುದು ನನಗೆ ಗೊತ್ತಿದೆʼʼ ಎಂದು ಎಚ್‌ಡಿಕೆ ಕಿಡಿ ಕಾರಿದರು.

ʼʼನಾನು ದಾಖಲೆ ಇಟ್ಕೊಂಡೇ ಶನಿವಾರ ಮಾತಾಡಿದ್ದೇನೆ. ಈತ ಆಂಧ್ರ ಪ್ರದೇಶ ಮೂಲದವನು, ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿ 25 ವರ್ಷಗಳಿಂದ ಇಲ್ಲಿದ್ದಾರೆ. ಯಾರು ಯಾರನ್ನು ಹಿಡಿದು ಇಲ್ಲಿಗೆ ಬಂದಿದ್ದೀರಿ? ಆತ ಬಳಕೆ ಮಾಡಿರುವ ಭಾಷೆ ಆತನ ಸಂಸ್ಕೃತಿಯನ್ನು ತೋರಿಸುತ್ತದೆ. ಯಾರು ಯಾರ ಜತೆ ಈತನ ಕ್ರಿಮಿನಲ್ ನಂಟಿದೆ ಎನ್ನುವುದನ್ನು ಶನಿವಾರವೇ ದಾಖಲೆ ಸಮೇತ ಹೇಳಿದ್ದೇನೆ. ಒಬ್ಬ ಕೇಂದ್ರ ಮಂತ್ರಿ ಬಗ್ಗೆ ಯಾವ ಭಾಷೆ ಬಳಸಿದ್ದಾನೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆʼʼ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ದೂರು ಕೊಟ್ಟಿದ್ದೀನಾ?

ʼʼಪತ್ರದಲ್ಲಿ ಸತ್ಯಮೇವ ಜಯತೆ ಎಂದು ಆತ ಬರೆದಿದ್ದಾರೆ. ನಾನು ಹೋರಾಟ ಮಾಡುತ್ತಿರುವುದು ಕೂಡ ಅದೇ ಉದ್ದೇಶಕ್ಕೆ. ಶನಿವಾರ ಅಷ್ಟು ದಾಖಲೆಗಳ ಸಮೇತ ಈ ವ್ಯಕ್ತಿ ಬಗ್ಗೆ ಹೇಳಿದ್ದು ಕೂಡ ಸತ್ಯಮೇವ ಜಯತೇ ಕಾರಣಕ್ಕಾಗಿಯೇʼʼ ಎಂದು ಕುಮಾರಸ್ವಾಮಿ ಹೇಳಿದರು.

ʼʼಪೊಲೀಸ್ ಠಾಣೆಗೆ ಈ ಅಧಿಕಾರಿ ವಿರುದ್ಧ ನಾನು ದೂರು ಕೊಟ್ಟಿದ್ದೀನಾ? ಅವರ ಕೈಕೆಳಗೆ ಕೆಲಸ ಮಾಡುವ ಇನ್ಸ್‌ಪೆಕ್ಟರ್‌ಗೆ 20 ಕೋಟಿ ರೂ. ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾನೆ. ಆ ಇನ್ಸ್‌ಪೆಕ್ಟರ್‌ ಈ ಅಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ 2 ಕೋಟಿ ರೂ. ತಂದು ಕೊಡಬೇಕು ಎಂದು ಬ್ಲ್ಯಾಕ್‌ ಮೇಲ್ ಮಾಡಿದ್ದು ಈತನೇ ಅಲ್ಲವೇ? ಎಫ್‌ಐಆರ್‌ ಹಾಕಿದ ನಂತರ ಕೇಸ್ ಕೋರ್ಟ್ ಮುಂದೆ ಇದೆಯಲ್ಲ. ಇದೇನಾ ಆತನ ಸತ್ಯಮೇವ ಜಯತೆ?ʼʼ ಎಂದು ಸಚಿವರು ಪ್ರಶ್ನಿಸಿದರು.

ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ

ʼʼಸಿಎಂ ಸಿದ್ದರಾಮಯ್ಯ ಹಾಗೂ ಅವರ ಪಟಾಲಂಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮೆಚ್ಚಿಸಲು ನಾನು ರಾಜೀನಾಮೆ ಕೊಡಬೇಕಾ? ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿಲ್ಲ ಅಂದಮೇಲೆ ರಾಜೀನಾಮೆ ಯಾಕೆ ಕೊಡಲಿ? ಸುಳ್ಳು ಹೇಳ್ತಿರೋದು ನಾನಲ್ಲʼʼ ಎಂದು ಎಚ್‌ಡಿಕೆ ತಿಳಿಸಿದರು.

ಈ ಸುದ್ದಿಯನ್ನೂ ಓದಿ: ADGP Chandrashekhar : ಹಂದಿಗಳೊಂದಿಗೆ ಗುದ್ದಾಡುವುದಿಲ್ಲ; ಕೇಂದ್ರ ಸಚಿವ ಎಚ್‌ಡಿಕೆಗೆ ತಿರುಗೇಟು ಕೊಟ್ಟ ಐಪಿಎಸ್‌ ಅಧಿಕಾರಿ