Thursday, 21st November 2024

HD Kumaraswamy: ಬೆದರಿಕೆ, ಸುಳ್ಳು ಆರೋಪ; ಎಚ್‌ಡಿಕೆ, ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌

HD Kumaraswamy

ಬೆಂಗಳೂರು: ಐಪಿಎಸ್ ಅಧಿಕಾರಿಗೆ ಬೆದರಿಕೆ ಮತ್ತು ಸುಳ್ಳು ಆರೋಪ ಮಾಡಿದ ಆರೋಪದ ಮೇರೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಆಪ್ತ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಡಿಜಿಪಿ ಚಂದ್ರಶೇಖರ್​ ಅವರು ನೀಡಿದ ದೂರಿನ ಮೇರೆಗೆ ಎಚ್‌.​ಡಿ. ಕುಮಾರಸ್ವಾಮಿ (HD Kumaraswamy) ಸೇರಿ ಮೂವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬಿಎನ್​ಎಸ್​ ಸೆಕ್ಷನ್ 224ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಚ್​ಡಿ ಕುಮಾರಸ್ವಾಮಿ ಅವರನ್ನು ಎ​1 ಎಂದು ಉಲ್ಲೇಖಿಸಲಾಗಿದೆ. ಹಾಗೆಯೆ ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಎ 2 ಹಾಗೂ ಜೆಡಿಎಸ್​ ಮುಖಂಡ ಸುರೇಶ್ ಬಾಬು ಅವರನ್ನು ಎ3 ಎಂದು ನಮೂದಿಸಲಾಗಿದೆ.

ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದು, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಐಪಿಎಸ್ ಅಧಿಕಾರಿ ಚಂದ್ರಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್​ಡಿ ಕುಮಾರಸ್ವಾಮಿ ಸೇರಿ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಐಎಸ್‌ಡಿ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಎಸ್‌ಐಟಿಯಲ್ಲಿ ಎಡಿಜಿಪಿಯಾಗಿ ಕೆಲಸ ಮಾಡುತ್ತಿದ್ದೇನೆ. ಹೆಚ್ ಡಿ ಕುಮಾರಸ್ವಾಮಿ ಮೇಲೆ ಮೊಕದ್ದಮೆ ಸಂಖ್ಯೆ 16/2014ರಲ್ಲಿ ತನಿಖೆ ಕೈಗೊಂಡಿದ್ದು, ಇವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ, ಕಾನೂನು ಕ್ರಮ ಕೈಗೊಳ್ಳಲು ಅನುಮತಿಗಾಗಿ ರಾಜ್ಯಪಾಲರಿಗೆ ಕೋರಲಾಗಿದೆ. ತನಿಖೆಗೆ ರಾಜ್ಯಪಾಲರಿಗೆ ಅನುಮತಿ ಕೋರಿದ ನಂತರ, ಈ ಬಗ್ಗೆ ದಿನಾಂಕ 28-09-2024 ಮತ್ತು 29-09-2024ರಂದು ಪತ್ರಿಕಾಗೋಷ್ಠಿ ನಡೆಸಿ ನನ್ನ ಬಗ್ಗೆ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದೂರಿನಲ್ಲಿ ಎಡಿಜಿಪಿ ಉಲ್ಲೇಖಿಸಿದ್ದಾರೆ.

ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದವರ ವಿರುದ್ಧವೂ ಸಹ ಸುಳ್ಳು ಆಪಾದನೆಗಳನ್ನು ಮಾಡಿ ಅವರಿಗೂ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿರುತ್ತಾರೆ. ನಾನು ಬೌರಿಂಗ್‌ ಆಸ್ಪತ್ರೆಯಿಂದ ಸುಳ್ಳು ಮೆಡಿಕಲ್ ದಾಖಲೆಗಳನ್ನು ಪಡೆದು, ಕರ್ನಾಟಕ ಕೇಡರ್‌ನಲ್ಲೇ ಮುಂದುವರೆಯುತ್ತಿರುವುದಾಗಿ, ಲಂಚ ತೆಗೆದುಕೊಂಡಿರುವುದಾಗಿ ಸುಳ್ಳು ಆರೋಪ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

ದಿನಾಂಕ 29-09-2024ರಂದು ಎಚ್‌.ಡಿ. ಕುಮಾರಸ್ವಾಮಿ ಅವರ ಮಗನಾದ ನಿಖಿಲ್ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿರುತ್ತಾರೆ. ನಂತರ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತರಾದ ಸುರೇಶ್ ಬಾಬು ಅವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಮುಖ್ಯ ಕಾರ್ಯದರ್ಶಿಯವರಿಗೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಆರೋಪಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರು ಆಧರಿಸಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿಕೆ ಆಪ್ತ ಸುರೇಶ್ ಬಾಬು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.