ಬೆಂಗಳೂರು: ಜೀವ ಬೆದರಿಕೆ, ಸುಳ್ಳು ಆರೋಪಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕು ಎಂದು ಕೋರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy), ನಿಖಿಲ್ ಕುಮಾರಸ್ವಾಮಿ ಹಾಗೂ ಆಪ್ತ ಸುರೇಶ್ ಬಾಬು ಅವರು ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಅವರ ದೂರಿನ ಮೇರೆಗೆ ಬೆಂಗಳೂರಿನ ಸಂಜಯ್‌ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ವಿಚಾರಣೆ ಇನ್ನಷ್ಟೇ ನಿಗದಿಯಾಗಬೇಕಿದೆ.
ಏನಿದು ಪ್ರಕರಣ?
ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಜೀವ ಬೆದರಿಕೆ, ಸುಳ್ಳು ಆರೋಪ ಮಾಡಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ಸಂಜಯ್‌ನಗರ ಠಾಣೆ ದೂರು ನೀಡಿದ್ದರು.
ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತನಿಖೆ ಕೈಗೊಂಡಿದ್ದು, ಅವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮ ಕೈಗೊಳ್ಳಲು ಅನುಮತಿಗಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸೆ.28 ಮತ್ತು 29ರಂದು ಸುದ್ದಿಗೋಷ್ಠಿ ನಡೆಸಿ, ನನ್ನ ಬಗ್ಗೆ, ಸುಳ್ಳು, ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದವರ ವಿರುದ್ಧವೂ ಸುಳ್ಳು ಆಪಾದನೆಗಳನ್ನು ಮಾಡಿ ಅವರಿಗೂ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು, ಮೆಡಿಕಲ್ ದಾಖಲಾತಿಗಳನ್ನು ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರಿಯುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೇ ಲ೦ಚ ತೆಗೆದುಕೊಂಡಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ.
ಅದೇ ರೀತಿ ಎಚ್.ಡಿ.ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರ ಸ್ಯಾಮಿ ಅವರು ಕೂಡ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ನಂತರ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ರಮೇಶ್ ಬಾಬು ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್‌ಡಿಕೆ ಸೇರಿ ಮೂವರ ವಿರುದ್ಧ ಸಂಜಯ್‌ನಗರ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಎಫ್‌ಐಆರ್ ರದ್ದುಪಡಿಸುವಂತೆ ಕುಮಾರಸ್ವಾಮಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Donald Trump: ಟ್ರಂಪ್ ಗೆಲುವಿಗೂ ಕೊಹ್ಲಿ ಸಾಧನೆಗೂ ಇದೆ ಅವಿನಾಭಾವ ಸಂಬಂಧ