ಬೆಂಗಳೂರು: ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾಗ ರಾಜ್ಯಪಾಲರನ್ನು ವಾಚಾಮಗೋಚರ ಹೊಗಳಿದ್ದ ಸಿದ್ದರಾಮಯ್ಯ ಅವರು, ಇದೀಗ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರನ್ನು ಹೀನಾಮಾನವಾಗಿ ತೆಗಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಗ್ಗೆ ಎರಡು ನಾಲಿಗೆಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರದ್ದು ಹಂಸರಾಜ್ ಭಾರಧ್ವಾಜ್ ಅವರು ರಾಜ್ಯಪಾಲರು ಆಗಿದ್ದ ವೇಳೆ ಒಂದು ವರಸೆ, ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯಪಾಲರಾಗಿರುವ ವೇಳೆ ಇನ್ನೊಂದು ವರಸೆ. ಅದಕ್ಕೆ ಇಲ್ಲಿದೆ ನೋಡಿ ಸಾಕ್ಷಿ ಎಂದು, ಈ ಹಿಂದೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಹೊಣೆಗಾರಿಕೆ ಬಗ್ಗೆ ನೀಡಿದ್ದ ಹೇಳಿಕೆಯ ವಿಡಿಯೊವನ್ನು ಪ್ರದರ್ಶಿಸಿದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅತ್ಯಂತ ಕೀಳಾಗಿ ವರ್ತಿಸಿದ್ದಾರೆ. ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದಾರೆ. ಪ್ರತಿಕೃತಿ ದಹನ ಮಾಡಿದ್ದಾರೆ. ಈಗ ಅವರು ಯಾರಿಗೆ ಚಪ್ಪಲಿ ಹಾರ ಹಾಕುತ್ತಾರೆ? ಯಾರ ಪ್ರತಿಕೃತಿ ದಹನ ಮಾಡುತ್ತಾರೆ ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.
ಈ ಸುದ್ದಿಯನ್ನೂ ಓದಿ | Electoral bonds: ನಿರ್ಮಲಾ ಸೀತಾರಾಮನ್, ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್
ಸರ್ಕಾರ ಮತ್ತು ಸಿಎಂ ತಪ್ಪು ಮಾಡಿದ್ದಾರೆ. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿದ್ದಾರೆ. ಸರ್ಕಾರದಿಂದ ಸಮಜಾಯಿಷಿ ಕೇಳುವುದು ರಾಜ್ಯಪಾಲರ ಹಕ್ಕು ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಪ್ರತಿಪಕ್ಷದನಾಯಕರಾಗಿದ್ದಾಗ ಹಾಗೆ ಹೇಳಿದ್ದ ಸಿದ್ದರಾಮಯ್ಯ ಅದನ್ನೀಗ ಮರೆತಿದ್ದಾರೆ. ನಾನು ತೋರಿಸುತ್ತಿರುವ ಹೇಳಿಕೆಯನ್ನು ಅವರು ಒಮ್ಮೆ ಕೇಳಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಹಲವಾರು ಪ್ರಕರಣ ದಾಖಲಾಗಿವೆ. ಅವರೇನು ಸಾಚಾ ಅಲ್ಲ. ಮುಡಾ ಹಗರಣದಲ್ಲಿ ಇವರ ಪಾತ್ರವೇ ಇಲ್ಲದಿದ್ದರೆ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ತರಾತುರಿಯಲ್ಲಿ ಏಕೆ ಮಾಡುತ್ತಿದ್ದರು? ನ್ಯಾಯಲಯ ಆದೇಶ ನೀಡಿದ 48 ಗಂಟೆಯಾದರೂ ಸಿಎಂ ವಿರುದ್ಧ ಎಫ್ಐಆರ್ ಯಾಕೆ ದಾಖಲು ಮಾಡಲಿಲ್ಲ? ಸರ್ಕಾರ, ಆಡಳಿತ ವ್ಯವಸ್ಥೆ ಕೆಲಸ ಮಾಡುವುದು ಹೀಗೆಯೇ? ಎಂದು ಅವರು ಕೇಳಿದರು.
ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಪೊಲೀಸರಿಗೆ ಸೂಚನೆ ಕೊಟ್ಟು ಕೆಲವರಿಗೆ ತೊಂದರೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವ ಪೈಕಿ ಅಲ್ಲ ಎಂದು ಅವರು, ನನಗೆ ಲೋಕಾಯುಕ್ತರಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನೇ ಸ್ವಯಂ ಪ್ರೇರಿತವಾಗಿ ಲೋಕಾಯುಕ್ತ ಕಚೇರಿಗೆ ಹೋಗಿದ್ದೆ. ಇದು ಬಿಟ್ಡರೆ ಅವರು ಒಂದು ಹೆಜ್ಜೆ ಏನು ಮಾಡಲು ಆಗಲ್ಲ. ನಾನು ಅರ್ಕಾವತಿಯಲ್ಲಿ ರೀಡೂ ಮಾಡಿದಂತೆ ಮಾಡಿಲ್ಲ. ಸರ್ಕಾರಿ ಜಮೀನು ಕಬಳಿಸಿಲ್ಲ. ಮಾಡುವ ಅಕ್ರಮ ಎಲ್ಲಾ ಮಾಡಿ, ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಬಗ್ಗೆ ಮಾತನಾಡುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಕಿಡಿಕಾರಿದರು.
ನನ್ನ ವಿರುದ್ಧದ ಪ್ರಕರಣಗಳು ನ್ಯಾಯಲಯದಲ್ಲಿ ತಿರ್ಮಾನ ಆಗಲಿ. ತೀರ್ಪು ಬರಲಿ, ತಲೆಬಾಗುತ್ತೇನೆ. ಇವರು ಕೇಳಿದ ಕೂಡಲೇ ನಾನು ಯಾಕೆ ರಾಜೀನಾಮೆ ಕೊಡಲಿ? ರಾಜೀನಾಮೆ ಕೊಡಲು ಏನಿದೆ? ಸಂವಿಧಾನ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲ್ಲ. ಅಂತಹ ಪರಿಸ್ಥಿತಿ ಬಂದರೆ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಕೊಡಬೇಕಾದಾಗ ನಾನೇ ಕೊಡುತ್ತೇನೆ. ಅದರ ಬಗ್ಗೆ ಸಿದ್ದರಾಮಯ್ಯ ಹೇಳುವುದು ಬೇಡ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.