Thursday, 24th October 2024

HD Kumaraswamy: ವರ್ಗಾವಣೆ ಬೆದರಿಕೆ, ಸುಳ್ಳು ಆರೋಪ; ಎಚ್‌ಡಿಕೆ ವಿರುದ್ಧ ದೂರು ನೀಡಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್

HD Kumaraswamy

ಬೆಂಗಳೂರು: ಸುಳ್ಳು ಆರೋಪ ಮಾಡಿ, ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಎಚ್‌ಡಿಕೆ ಆಪ್ತ ಸುರೇಶ್‌ ಬಾಬು ಅವರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ಸಂಜಯ್‌ ನಗರ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿಸುವುದಾಗಿ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದ ವಿರುದ್ಧವೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಲಂಚ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್‌ಡಿಕೆ ಆಪ್ತ ಸುರೇಶ್ ಬಾಬು ಕೂಡ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೋಳ್ಳಬೇಕು ಎಂದು ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

ನಿಯಮ ಉಲ್ಲಂಘಿಸಿ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಮೊ.ಸಂ. 16/2014 ರಲ್ಲಿ ತನಿಖೆ ಕೈಗೊಂಡಿದ್ದು, ಅವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮ ಕೈಗೊಳ್ಳಲು ಅನುಮತಿಗಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸೆ.28 ಮತ್ತು 29ರಂದು ಸುದ್ದಿಗೋಷ್ಠಿ ನಡೆಸಿ, ನನ್ನ ಬಗ್ಗೆ, ಸುಳ್ಳು, ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ಬೆದರಿಕೆಯನ್ನು ಹಾಕಿದ್ದಾರೆ. ನನ್ನನ್ನು ಕರ್ನಾಟಕ ರಾಜ್ಯ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬದವರ ವಿರುದ್ಧವೂ ಸುಳ್ಳು ಆಪಾದನೆಗಳನ್ನು ಮಾಡಿ ಅವರಿಗೂ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ.

ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು, ಮೆಡಿಕಲ್ ದಾಖಲಾತಿಗಳನ್ನು ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರಿಯುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೇ ಲ೦ಚ ತೆಗೆದುಕೊಂಡಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ. ಅದೇ ರೀತಿ ಎಚ್.ಡಿ.ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರ ಸ್ಯಾಮಿ ಅವರು ಕೂಡ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ನಂತರ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ರಮೇಶ್‌ ಬಾಬು ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಎಡಿಜಿಪಿ ಚಂದ್ರಶೇಖರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸುದ್ದಿಯನ್ನೂ ಓದಿ | Muzrai Temples: ಮುಜರಾಯಿ ದೇಗುಲಗಳ ಅಭಿವೃದ್ಧಿ, ಅರ್ಚಕರಿಗೆ ಸೌಲಭ್ಯ ನೀಡಲು ಕಾಯ್ದೆ ತಿದ್ದುಪಡಿ: ಸಚಿವ ರಾಮಲಿಂಗಾರೆಡ್ಡಿ

    ಎಚ್‌ಡಿಕೆ ಏನು ಹೇಳಿದ್ದರು?

    ಸರಣಿ ಅಪರಾಧಗಳನ್ನು ಮಾಡಿರುವ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬ ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾನೆ. ಈತನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದರು.

    ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ.ಚಂದ್ರಶೇಖರ್ ಆ ಭ್ರಷ್ಟ ಅಧಿಕಾರಿ ಆಗಿದ್ದು, ಇಂಥ ದರೋಡೆಕೋರ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

    ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅದಕ್ಕೆ ಚಂದ್ರಶೇಖರ್ ಅವರಂತಹ ಕಳಂಕಿತ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು.

    ಇನ್ನು ಈ ಚಂದ್ರಶೇಖರ್ ಮೂಲತಃ ಹಿಮಾಚಲ ಪ್ರದೇಶದ ಕೇಡರ್‌ನ ಐಪಿಎಸ್ ಅಧಿಕಾರಿ. 1998ರಲ್ಲಿ ಹಿಮಾಚಲ ಪ್ರದೇಶದ ಕೇಡರ್ ಆಗಿ ಆಯ್ಕೆಯಾಗಿದ್ದವರು. ಐದು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ಕರ್ನಾಟಕಕ್ಕೆ ಬಂದರು. ಈ ಅಧಿಕಾರಿ ಹಿಮಾಚಲ ಪ್ರದೇಶದಲ್ಲಿ ಹವಾಮಾನ ಸರಿಯಾಗಿಲ್ಲ ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಕರ್ನಾಟಕದಲ್ಲೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ನಿಯೋಜನೆ ಮೇಲೆ ಬಂದ ಈ ವ್ಯಕ್ತಿ ಆಮೇಲೆ ಕರ್ನಾಟಕ ಕೇಡರ್ ಅಧಿಕಾರಿ ಆಗುತ್ತಾರೆ ಎಂದು ಆರೋಪಿಸಿದ್ದರು.

    ಈ ಸುದ್ದಿಯನ್ನೂ ಓದಿ | Viral News : ಗರ್ಲ್‌ಫ್ರೆಂಡ್‌ ಸುತ್ತಾಡಿಸಲು ಶೋರೂಮ್‌ನಿಂದ ಕಾರು ಕದ್ದ ಯೂನಿವರ್ಸಿಟಿ ಬಾಯ್ಸ್‌!

    ಐಜಿಪಿ ಚಂದ್ರಶೇಖರ್ ವಿರುದ್ಧ ಹಲವಾರು ದೂರುಗಳು ದಾಖಲಾಗಿ, ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ. ಈ ವ್ಯಕ್ತಿ ಸರಣಿ ಅಪರಾಧಗಳನ್ನು ಮಾಡಿರುವ ಅಧಿಕಾರಿ, ತಮ್ಮ ಅಧೀನದಲ್ಲಿದ್ದ ಅಧಿಕಾರಿಯಿಂದ ಭೂಮಿ ವ್ಯವಹಾರಕ್ಕೆ ಸಂಬಂಧಿಸಿ 20 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಐಪಿಎಸ್‌ ಅಧಿಕಾರಿ ವಿರುದ್ಧ ಎಚ್‌ಡಿಕೆ ಆರೋಪಿಸಿದ್ದರು.