Thursday, 19th September 2024

HD Kumaraswamy: ಎಲೆಕ್ಟ್ರಿಕ್‌ ವಾಹನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಸಚಿವ ಎಚ್‌ಡಿ ಕುಮಾರಸ್ವಾಮಿ

hd kumaraswamy

ನವದೆಹಲಿ: ವಿದ್ಯುಚ್ಚಾಲಿತ ವಾಹನಗಳ (Electric Vehicles) ಚಾಲಕರಿಗೆ ಕೇಂದ್ರದ ಬೃಹತ್ ಉದ್ಯಮ‌ ಇಲಾಖೆ ಸಚಿವ ಎಚ್‌.ಡಿ.ಕುಮಾರಸ್ವಾಮಿ (Central Minister HD Kumaraswamy) ಸಿಹಿ ಸುದ್ದಿ (Good news) ನೀಡಿದ್ದಾರೆ. ಎಲೆಕ್ಟ್ರಿಕ್‌ ವಾಹನಗಳಿಗೆ ನೀಡಲಾಗುವ ಸಬ್ಸಿಡಿಯನ್ನು (EV Subsidy) ಇನ್ನೂ ಒಂದೆರಡು ತಿಂಗಳ ಕಾಲ ಮುಂದುವರೆಸುವುದಾಗಿ ಸಚಿವರು ತಿಳಿಸಿದ್ದಾರೆ. ಹೀಗಾಗಿ, ಈ ತಿಂಗಳು ಅಂತ್ಯಗೊಳ್ಳಬೇಕಿದ್ದ ಸಬ್ಸಿಡಿ ಯೋಜನೆ ಮುಂದುವರೆಯಲಿದ್ದು, ಎಲೆಕ್ಟ್ರಿಕ್‌ ವಾಹನಗಳ ಮಾರಾಟಗಾರರು ಹಾಗೂ ಗ್ರಾಹಕರು ನಿರಾಳರಾಗಿದ್ದಾರೆ.

ಎಲೆಕ್ಟ್ರಿಕ್‌ ಸ್ಕೂಟರ್‌, ಎಲೆಕ್ಟ್ರಿಕ್‌ ಆಟೋ ಹಾಗೂ ಎಲೆಕ್ಟ್ರಿಕ್‌ ವಾಣಿಜ್ಯ ಆಟೋಗಳಿಗೆ ಕೇಂದ್ರ ಸರ್ಕಾರ ಕ್ರಮವಾಗಿ 10,000 ರು., 25,000 ರು. ಹಾಗೂ 50,000 ರು. ಸಬ್ಸಿಡಿ ನೀಡುತ್ತಿದೆ. ಇದಕ್ಕಾಗಿ ಇಎಂಪಿಎಸ್‌ ಎಂಬ ಯೋಜನೆ ಜಾರಿಯಲ್ಲಿದೆ. ಅದು ಸೆ.30ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ ಅದನ್ನು ಫೇಮ್‌ 3 ಯೋಜನೆಯ ರೂಪರೇಷೆ ಅಂತಿಮಗೊಂಡು ಜಾರಿಗೆ ಬರುವವರೆಗೆ ಮುಂದುವರೆಸಲಾಗುವುದು. ಬಹುತೇಕ ಒಂದೆರಡು ತಿಂಗಳ ಕಾಲ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ವಾಹನಗಳ ಬಿಡಿಭಾಗಗಳ ಉತ್ಪಾದಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಎಲೆಕ್ಟ್ರಿಕ್‌ ವಾಹನಗಳ ಉದ್ದಿಮೆಯವರು ಆತಂಕಗೊಳ್ಳುವ ಅಗತ್ಯವಿಲ್ಲ. ಸಬ್ಸಿಡಿಯನ್ನು ಇನ್ನೂ 1-2 ತಿಂಗಳು ಮುಂದುವರೆಸಲಾಗುವುದು. ಫೇಮ್‌ 3 ಜಾರಿಗೊಳಿಸುವಾಗ ಫೇಮ್‌ 2ನಲ್ಲಿರುವ ಲೋಪಗಳನ್ನು ಸರಿಪಡಿಸಲಾಗುವುದು. ಫೇಮ್‌ 3 ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆʼ ಎಂದು ಮಾಹಿತಿ ನೀಡಿದರು.

ಎಲೆಕ್ಟ್ರಿಕ್‌ ವಾಹನಗಳಿಗೆ ನೀಡುವ ಸಬ್ಸಿಡಿಗೆ ವಿರೋಧವಿಲ್ಲ. ಇದನ್ನು ಹಣಕಾಸು ಇಲಾಖೆ ಮತ್ತು ಭಾರಿ ಕೈಗಾರಿಕೆ ಇಲಾಖೆಗಳು ನಿರ್ಧರಿಸುತ್ತವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಸ್ಪಷ್ಟಪಡಿಸಿದ್ದಾರೆ.

ಇ-ವಾಹನಗಳ ಬ್ಯಾಟರಿ ಬೆಲೆ ಇಳಿದಿರುವ ಕಾರಣ ಸಬ್ಸಿಡಿ ಅಗತ್ಯವಿಲ್ಲ ಎಂದು ಇತ್ತೀಚೆಗೆ ಗಡ್ಕರಿ ಹೇಳಿದ್ದರು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿದ ಅವರು, ‘ನಾನು ಸಬ್ಸಿಡಿಯನ್ನು ವಿರೋಧಿಸುವುದಿಲ್ಲ. ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ, ಸಬ್ಸಿಡಿ ಇಲ್ಲದೆ ಇವಿಗಳನ್ನು ನಿರ್ವಹಿಸಬಹುದು ಎನ್ನುವುದು ನನ್ನ ಭಾವನೆ ಆಗಿತ್ತು’ ಎಂದರು. ‘ಮುಂದಿನ 2 ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆಯು ಪೆಟ್ರೋಲ್, ಡೀಸೆಲ್ ವಾಹನಗಳ ಬೆಲೆಯಷ್ಟೇ ಆಗಲಿದೆ’ ಎಂದು ಗಡ್ಕರಿ ಹೇಳಿದರು.

ಈ ಸುದ್ದಿ ಓದಿ: Nikhil Kumaraswamy: ಚನ್ನಪಟ್ಟಣ ಟಿಕೆಟ್ ಯಾರಿಗೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?