Sunday, 15th December 2024

HD Kumaraswamy: ಕಾರ್ಮಿಕರು, ಜನರ ಭಾವನೆಗಳ ಜತೆ ಚೆಲ್ಲಾಟ ಬೇಡ- ಕೆ.ಸಿ. ವೇಣುಗೋಪಾಲ್‌ಗೆ HDK ಎಚ್ಚರಿಕೆ

HD Kumaraswamy

ನವದೆಹಲಿ: ವೈಜಾಗ್ ಸ್ಟೀಲ್ ಕಾರ್ಖಾನೆಯ ಬಗ್ಗೆ ಕಾಂಗ್ರೆಸ್ ಪಕ್ಷ (Congress Party) ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಎತ್ತಿರುವ ಪ್ರಶ್ನೆಗಳಿಗೆ ಹರಿತವಾದ ಉತ್ತರ ನೀಡಿದ್ದಾರೆ.

ಕೆ.ಸಿ. ವೇಣುಗೋಪಾಲ್ ಅವರು ವೈಜಾಗ್‌ ಉಕ್ಕು ಕಾರ್ಖಾನೆಯ ಬಗ್ಗೆ ಸುಳ್ಳುಗಳನ್ನೇ ಹಬ್ಬಿಸುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಹುರುಳಿಲ್ಲ. ರಾಜಕೀಯ, ಮತಬ್ಯಾಂಕ್ ರಾಜಕಾರಣಕ್ಕಾಗಿ ಅವರು ಕಾರ್ಖಾನೆಯ ಕಾರ್ಮಿಕರು, ಸಾರ್ವಜನಿಕರ ಭಾವನೆಗಳ ಜತೆ ಆಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | R Ashok: ನಾನು ರಾಜೀನಾಮೆ ಕೊಡಲು ಸಿದ್ಧ, ಸಿಎಂ ಸಚಿವ ಸಂಪುಟ ಕೊಡುತ್ತದೆಯೇ: ಆರ್‌. ಅಶೋಕ್‌

ವೈಜಾಗ್ ಉಕ್ಕು ಕಾರ್ಖಾನೆಯಲ್ಲಿ ಯಾವೊಬ್ಬ ಕಾರ್ಮಿಕನನ್ನು ಕೆಲಸದಿಂದ ತೆಗೆಯಲಾಗಿಲ್ಲ. ಎಲ್ಲಾ 4200 ಕಾರ್ಮಿಕರನ್ನು 48 ಗಂಟೆಗಳೊಳಗೆ ಮರು ನೇಮಕ ಮಾಡಲಾಗಿದೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಕೈಗಾರಿಕಾಭಿವೃದ್ಧಿ, ಅದರಲ್ಲಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳಿಗೆ ಶಕ್ತಿ ತುಂಬಲಾಗುತ್ತಿದೆ. ಆದರೆ, ಯುಪಿಎ ಸರ್ಕಾರದ ಕಾಲದಲ್ಲಿ ಇವುಗಳನ್ನು ಸಂಪೂರ್ಣ ಹಾಳು ಮಾಡಲಾಗಿತ್ತು ಎಂದು ಸಚಿವರು ದೂರಿದ್ದಾರೆ.

ಸೆಪ್ಟೆಂಬರ್ 27ರಂದು ಸೇವೆಯಿಂದ ತೆಗೆದು ಹಾಕಲ್ಪಟ್ಟ ಕಾರ್ಖಾನೆಯ 4,200 ಗುತ್ತಿಗೆ ಕಾರ್ಮಿಕರನ್ನು ಕೇವಲ 48 ಗಂಟೆಗಳ ಒಳಗಾಗಿ ಮರು ನೇಮಕ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್ 29ಕ್ಕೆಲ್ಲ ಎಲ್ಲಾ ನೌಕರರಿಗೂ ಮತ್ತೆ ಉದ್ಯೋಗ ಕಲ್ಪಿಸಲಾಗಿದೆ. ಇದರ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ವೇಣುಗೋಪಾಲ್ ಅವರು ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಿಮ್ಮ ಮಾಹಿತಿ ತಪ್ಪು, ಕೇವಲ ಇಂಥ ಮಾಹಿತಿಗಳನ್ನು ಹಬ್ಬಿಸಲು ಎಲ್ಲಿಲ್ಲದ ಆತುರಪಡುತ್ತಿದ್ದೀರಿ ಎಂದು ಕೇಂದ್ರ ಸಚಿವರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನೂ ಓದಿ | Union Cabinet: ರೈಲ್ವೆ ನೌಕರರಿಗೆ ಗುಡ್‌ನ್ಯೂಸ್‌; ಬೋನಸ್‌ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

ವೈಜಾಗ್ ಉಕ್ಕು ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಹಾಗೂ ನಾನು ಕೂಡ ವಿಶಾಖಪಟ್ಟಣಕ್ಕೆ ತೆರಳಿ ಕಾರ್ಖಾನೆಯನ್ನು ವೀಕ್ಷಿಸಿದ್ದೇನೆ. ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಚಿವಾಲಯದಲ್ಲಿ ಕೂಡ ಹಲವಾರು ಸಭೆಗಳನ್ನು ನಡೆಸಿದ್ದೇನೆ. ನನ್ನ ಸಹೋದ್ಯೋಗಿ ಸಚಿವರಾದ ಶ್ರೀನಿವಾಸ ಭೂಪತಿರಾಜು ವರ್ಮ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ, ಕಾರ್ಖಾನೆಯ ಭವಿಷ್ಯದ ಬಗ್ಗೆ ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ ಹಾಗೂ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.