ಬೆಳಗಾವಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 32,870 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಹೊರಗುತ್ತಿಗೆ ಆಧಾರದಲ್ಲೂ ನೇಮಕಾತಿ ಮಾಡಲಾಗಿದೆ. ಇನ್ನು 1,800 ಹುದ್ದೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಆದಷ್ಟು ಬೇಗ ನೇಮಕಾತಿ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಜಿ. ಮುಳೆ ಅವರು, ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ 32,870 ಹುದ್ದೆಗಳು ಖಾಲಿ ಇವೆ. ಇಲಾಖೆಯಲ್ಲಿ ಶೇ. 50 ಹುದ್ದೆ ಖಾಲಿ ಇವೆ. ಇದರಿಂದ ಆರೋಗ್ಯ ಇಲಾಖೆಯಲ್ಲಿ ಸಮಸ್ಯೆ ಆಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಖಾಲಿ ಹುದ್ದೆಗಳು ಜಾಸ್ತಿ ಇವೆ. ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಖಾಲಿ ಇರುವ 32 ಸಾವಿರ ಹುದ್ದೆಗಳಲ್ಲಿ ಹಲವು ರೀತಿ ಭರ್ತಿ ಮಾಡುವ ಕೆಲಸ ಆಗಿದೆ. ಔಟ್ ಸೋರ್ಸ್‌ನಲ್ಲಿ ಅನೇಕ ಹುದ್ದೆ ಭರ್ತಿ ಆಗಿವೆ. 500ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರನ್ನು ಔಟ್ ಸೋರ್ಸ್‌ನಲ್ಲಿ ಭರ್ತಿ ಮಾಡಾಗಿದೆ. ಒಟ್ಟಾರೆ 18,040 ಹುದ್ದೆಗಳನ್ನು ಹೊರಗುತ್ತಿಗೆಯಲ್ಲಿ ಭರ್ತಿ ಮಾಡಲಾಗಿದೆ ಎಂದರು.
1,800 ಹುದ್ದೆಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದಾರೆ. ಆದಷ್ಟು ಬೇಗ ನೇಮಕಾತಿ ಮಾಡುತ್ತೇವೆ. ತಜ್ಞ ವೈದ್ಯರ ನೇಮಕಾತಿಗಾಗಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರದ ನಿಯಮದ ಪ್ರಕಾರ ತಜ್ಞ ಡಾಕ್ಟರ್‌ಗಳ ಸಂಬಳ ಇದೆ. ಇದನ್ನು ಹೆಚ್ಚಳ ಮಾಡಲು ನಮಗೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದೇವೆ. ಕೇಂದ್ರ ಕೂಡ ಮೌಖಿಕವಾಗಿ ಒಪ್ಪಿಗೆ ಕೊಟ್ಟಿದೆ. ಅಧಿಕೃತವಾಗಿ ಅನುಮತಿ ಬಂದ ಮೇಲೆ ತಜ್ಞ ವೈದ್ಯರಿಗೆ ನಾವೇ ಸಂಬಳ ಜಾಸ್ತಿ ಮಾಡಿ ನೇಮಕಾತಿ ಮಾಡಿಕೊಳ್ಳುತ್ತೇವೆ. ನರ್ಸ್ ಮತ್ತು ಟೆಕ್ನಿಷಿಯನ್ಸ್ ನೇಮಕಕ್ಕೆ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ದೇವೆ. ಅವರು ಗುತ್ತಿಗೆ ಆಧಾರದಲ್ಲಿ ಅನುಮತಿ ಕೊಟ್ಟರೂ ನಾವು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | One Nation One Election: ಕೊನೆಗೂ ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಮಂಡನೆ; ವಿಪಕ್ಷಗಳಿಂದ ಭಾರೀ ವಿರೋಧ
ರಾಜ್ಯ ಪಠ್ಯಕ್ರಮದ 6-10ನೇ ತರಗತಿಗಳಿಗೆ ಗಣಿತ, ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್‌ಇ ಸಿಲಬಸ್ ಅಳವಡಿಕೆ
ಬೆಳಗಾವಿ: ರಾಜ್ಯ ಪಠ್ಯಕ್ರಮದ 6 ರಿಂದ 10ನೇ ತರಗತಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್‌ಇ (CBSE Syllabus) ಪಠ್ಯಕ್ರಮವನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ. ಆರ್‌ಟಿಇ ಕಾಯ್ದೆಯ ಅನುಷ್ಠಾನದಿಂದ ಈವರೆಗೆ 1 ರಿಂದ 8ನೇ ತರಗತಿಯವರೆಗೆ ಮಕ್ಕಳ ಶಾಲಾ ಪ್ರವೇಶ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲಕುಮಾರ ಅವರು, ಆರ್‌ಟಿಇ ಕಾಯ್ದೆಯ ಅನುಷ್ಠಾನದಿಂದ 1 ರಿಂದ 8ನೇ ತರಗತಿಯವರೆಗೆ ಪ್ರವೇಶ ಶುಲ್ಕವನ್ನು ಸರ್ಕಾರವೇ ನೀಡುತ್ತಿದ್ದು, 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗೂ ಯೋಜನೆಯನ್ನು ವಿಸ್ತರಿಸುವುದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಬಡ ಮಕ್ಕಳಿಗೆ ಅನುಕೂಲ ವಾಗಲಿದೆ. ಸರ್ಕಾರವು ಈ ಯೋಜನೆಯನ್ನು ವಿಸ್ತರಿಸುವ ಚಿಂತನೆ ಹೊಂದಿದೆಯೇ? ಇಲ್ಲದಿದ್ದಲ್ಲಿ ಯಾವ ಕಾಲಮಿತಿಯೊಳಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯನ್ನು ವಿಸ್ತರಿಸುವ ಪ್ರಸ್ತಾವನೆಯು ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.