Sunday, 24th November 2024

Health Tips: ದಿನಕ್ಕೆ ಎಷ್ಟು ತುಪ್ಪ ತಿಂದರೆ ಆರೋಗ್ಯವಾಗಿರಬಹುದು? ಇದರ ಪ್ರಯೋಜನಗಳು ಏನೇನು?

Health Tips

ಬೇಸಿಗೆ, ಚಳಿ, ಮಳೆ ಎಂದೆಲ್ಲ ಋತುಗಳಿದ್ದ ಹಾಗೆ ಭಾರತದಲ್ಲಿ ಹಬ್ಬಗಳದ್ದೂ ಒಂದು ಋತು. ಗೌರಮ್ಮ, ಗಣಪತಿಯನ್ನು ಕಳುಹಿಸಿಕೊಡುವಷ್ಟರಲ್ಲಿ ನವರಾತ್ರಿಗೆ ಸಿದ್ಧತೆ ಪ್ರಾರಂಭವಾಗುತ್ತದೆ. ದಶಮಿಯಂದು ಬನ್ನಿ ತಂದು ಎಷ್ಟು ದಿನಗಳೂ ಆಗಿಲ್ಲವೆನ್ನವಾಗಲೇ ದೀಪಾವಳಿ ಹೊಸಿಲಲ್ಲಿ ಇರುತ್ತದೆ. ಹಬ್ಬಗಳು ತರುವ ಸಂಭ್ರಮಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಈ ನೆವದಲ್ಲಿ ತರಹೇವಾರಿ ತಿಂಡಿಗಳನ್ನು ಮೆಲ್ಲುತ್ತಾ, ಏರಿಸಿಕೊಳ್ಳುವ ತೂಕದ ಬಗ್ಗೆ ಮಾತಾಡದಿರುವುದು ಹೇಗೆ? ಅದರಲ್ಲೂ ತುಪ್ಪದ ಭಕ್ಷ್ಯಗಳ ಭೂರಿ ಭೋಜನವನ್ನೇ ಸವಿಯುವ ಭಾರತೀಯರಿಗೆ, ಘೃತವೆಂಬುದು ಅಮೃತಕ್ಕೆ ಸಮಾನ. ಹೌದು, ಸಾವಿರಾರು ವರ್ಷಗಳಿಂದ ತುಪ್ಪ (Ghee) ಭಾರತೀಯ ಅಡುಗೆ ಮನೆಯ ಬೇರ್ಪಡಿಸಲಾಗದ ಭಾಗ. ರುಚಿಗೂ, ಆರೋಗ್ಯಕ್ಕೂ ಬೇಕಾದಂಥದ್ದು. ಆದರೆ ತೂಕ ಇಳಿಸುವವರಿಗೆ ತುಪ್ಪದ ಮೇಲೆ ಕೋಪ! ತೂಕ ಹೆಚ್ಚಾಗುತ್ತದೆ, ಕೊಲೆಸ್ಟ್ರಾಲ್‌ ಹೆಚ್ಚಾಗುತ್ತದೆ ಇತ್ಯಾದಿ ದೂರುಗಳು ಇದರ ಮೇಲಿವೆ. ನಿಜಕ್ಕೂ ತುಪ್ಪ ಅಷ್ಟೆಲ್ಲಾ ತೂಕ ಏರಿಸುತ್ತದೆಯೇ? ಇದರಿಂದ ಆರೋಗ್ಯಕ್ಕೆ (Health Tips) ಹಾನಿಯೇ?

ಅಧ್ಯಯನ ಏನು ಹೇಳುತ್ತದೆ?

ಅಧ್ಯಯನಗಳ ಪ್ರಕಾರ, ತುಪ್ಪ ದೇಹಕ್ಕೆ ಒಳ್ಳೆಯದು. ಹೆಚ್ಚು ತುಪ್ಪ ತಿಂದರೆ ದಪ್ಪ ಆಗುವುದು ಹೌದಾದರೂ, ಅಲ್ಪ ಪ್ರಮಾಣದಲ್ಲಿ ಅದನ್ನು ತಿನ್ನುವುದು ದೇಹಕ್ಕೆ ಅಗತ್ಯ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಚ್ಚನೆಯ ತುಪ್ಪವನ್ನು ಸೇವಿಸುವುದರಲ್ಲಿ ದೇಹಕ್ಕೆ ಹಲವು ರೀತಿಯ ಲಾಭಗಳಿವೆ ಎಂಬುದನ್ನು ಅಧ್ಯಯನಗಳು ಪುಷ್ಟೀಕರಿಸಿವೆ. ಹೊಟ್ಟೆ, ತೊಡೆ, ತೋಳು ಮುಂತಾದೆಡೆ ಜಮೆಯಾಗಿ, ಯಾವ ವ್ಯಾಯಾಮಕ್ಕೂ ಅಲ್ಲಾಡದೆ ನಿಲ್ಲುವ ಕೊಬ್ಬನ್ನು ಕರಗಿಸುವುದಕ್ಕೆ ಬೆಳಗ್ಗೆ ಮೊದಲಿಗೆ ದೇಹಕ್ಕೆ ಕೊಬ್ಬನ್ನೇ ನೀಡುವುದು ಪರಿಣಾಮಕಾರಿಯಾದ ಉಪಾಯಗಳಲ್ಲಿ ಒಂದು. ರುಚಿಗೆ, ಔಷಧಿಗೆ, ಆಹಾರದ ಪುಷ್ಟಿಯನ್ನು ಹೆಚ್ಚಿಸುವುದಕ್ಕೆ- ಹೀಗೆ ನಾನಾ ರೀತಿಯಲ್ಲಿ ಬಳಕೆಯಲ್ಲಿರುವ ತುಪ್ಪವನ್ನು ಒಂದು ಹದದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡಿದರೆ-

ತೂಕ ಏರುವುದೇ?:
ತುಪ್ಪಕ್ಕೂ ತೂಕಕ್ಕೂ ನೇರ ಸಂಬಂಧ ಕಲ್ಪಿಸುವುದು ಕಷ್ಟ. ಅಧ್ಯಯನಗಳ ಪ್ರಕಾರ, ತುಪ್ಪದಲ್ಲಿರುವುದು ಮಧ್ಯಮ-ಪ್ರಮಾಣದ ಫ್ಯಾಟಿ ಆಮ್ಲಗಳು. ಇವುಗಳನ್ನು ದೇಹ ಶಕ್ತಿಯಾಗಿ ಉಪಯೋಗಿಸಿಕೊಳ್ಳುತ್ತದೆಯೇ ಹೊರತು ಕೊಬ್ಬಾಗಿ ಶೇಖರಿಸಿಟ್ಟುಕೊಳ್ಳುವುದಿಲ್ಲ. ತುಪ್ಪದಲ್ಲಿ ಹೇರಳವಾಗಿರುವ ಬಟೈರಿಕ್‌ ಆಮ್ಲವು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ತಿನ್ನುವುದರಿಂದ ತೂಕ ಹೆಚ್ಚಲಾರದು.

ಕೊಲೆಸ್ಟ್ರಾಲ್‌ ಹೆಚ್ಚುವುದೇ?:
ಡಯಟರಿ ಕೊಲೆಸ್ಟ್ರಾಲ್‌ನಿಂದ ರಕ್ತದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ವ್ಯತ್ಯಾಸ ಆಗುವುದಿಲ್ಲ ಎನ್ನುತ್ತವೆ ಅಧ್ಯಯನಗಳು. ತುಪ್ಪ, ಕೊಬ್ಬರಿ ಎಣ್ಣೆಯಂಥ ಮೀಡಿಯಂ ಚೈನ್ ಟ್ರೈಗ್ಲಿಸರೈಡ್‌ (ಎಂಸಿಟಿ) ಹೊಂದಿರುವ ವಸ್ತುಗಳಿಂದ ಆರೋಗ್ಯಕ್ಕೆ ಲಾಭವೇ ಹೊರತು ಹಾನಿಯಲ್ಲ.

ಪೋಷಕಾಂಶಗಳಿವೆಯೇ?:
ಇವೆಯಲ್ಲ! ಕರಗಬಲ್ಲಂಥ‌ ಎ, ಡಿ, ಇ ಮತ್ತು ಕೆ2 ವಿಟಮಿನ್‌‌ಗಳ ಆಗರವಿದು. ಇದರಿಂದ ದೇಹದ ಚಯಾಪಚಯ ಹೆಚ್ಚಿ, ಜೀರ್ಣಾಂಗಗಳ ಕ್ಷಮತೆ ವೃದ್ಧಿಸಿ, ಕಣ್ಣು, ಹೃದಯದಂಥ ಅಂಗಗಳು ಚುರುಕುಗೊಂಡು, ರೋಗ ನಿರೋಧಕ ಶಕ್ತಿಯೂ ಸುಧಾರಿಸುತ್ತದೆ. ಜತೆಗೆ, ಬಹುಪಾಲು ಖಾದ್ಯ ತೈಲಗಳಿಗಿಂತ ಹೆಚ್ಚಿನ ಸುಡುವ ಬಿಂದು ಅಥವಾ ಸ್ಮೋಕ್‌ ಪಾಯಿಂಟ್‌ ತುಪ್ಪಕ್ಕಿದೆ. ಹಾಗಾಗಿ ಹುರಿಯುವ, ಕರಿಯುವಂಥ ಅಡುಗೆಗಳಲ್ಲೂ ತುಪ್ಪವನ್ನು ಬಳಸುವುದು ಸುರಕ್ಷಿತ. ಅಡುಗೆ ತೈಲಗಳು ಬೇಗ ಸುಟ್ಟು ಕರಕಲಾದರೆ ಅಥವಾ ಹೊಗೆ ಬಂದರೆ, ಅಂಥವು ಖಾದ್ಯಗಳಲ್ಲಿನ ಬಳಕೆಗೆ ಯೋಗ್ಯವಲ್ಲ.

ಬಿಪಿ, ಅಲರ್ಜಿ ಹೆಚ್ಚಿದರೆ?:
ಎಲ್ಲಾ ಜಿಡ್ಡುಗಳಿಂದಲೂ ರಕ್ತದೊತ್ತಡ ಹೆಚ್ಚುತ್ತದೆ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ. ಒಮೇಗಾ 3 ಮತ್ತು ಒಮೇಗಾ 6 ಫ್ಯಾಟಿ ಆಮ್ಲಗಳನ್ನು ಹೊಂದಿರುವ ತುಪ್ಪದಿಂದ ರಕ್ತದೊತ್ತಡ ಏರುವುದಿಲ್ಲ; ಹೃದಯದ ಆರೋಗ್ಯಕ್ಕೂ ತೊಂದರೆಯಿಲ್ಲ. ಅದರರ್ಥ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂದಲ್ಲ, ನಿಯಂತ್ರಣದಲ್ಲಿದ್ದರೆ ಸಾಕು. ಇನ್ನು, ತುಪ್ಪಕ್ಕೆ ಅಲರ್ಜಿ ಆಗುವಂಥ ಸಂಭವ ಅತಿ ಕಡಿಮೆ. ಲ್ಯಾಕ್ಟೋಸ್‌ (ಹಾಲಿನ) ಅಲರ್ಜಿ ಇರುವವರೂ ತಿನ್ನಬಹುದಾದಂಥ ವಸ್ತುವಿದು. ತುಪ್ಪದಲ್ಲಿ ಹಾಲಿನ ಅಂಶ ಏನೂ ಉಳಿಯದೆ ಹೋಗುವುದರಿಂದ ಅಲರ್ಜಿಯ ತಾಪತ್ರಯವೂ ಕಡಿಮೆ

ಈ ಸುದ್ದಿಯನ್ನೂ ಓದಿ | Health Tips: ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಬದನೆಕಾಯಿ ಸೇವಿಸಬೇಡಿ

ಎಷ್ಟು ಬೇಕು?:
ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸಬಹುದು. ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಆದರೆ ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಗಮನಿಸಿಕೊಳ್ಳಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.