ಬೆಂಗಳೂರು: 14 ತಿಂಗಳ ಕಂದಮ್ಮನಿಗೆ ನಾರಾಯಣ ಹೆಲ್ತ್ ಸಿಟಿಯ ವೈದ್ಯರ ತಂಡ ಯಶಸ್ವಿಯಾಗಿ ಹೃದಯ ಕಸಿ ಶಸ್ತ್ರ ಚಿಕಿತ್ಸೆಯನ್ನು (Heart Transplant Surgery) ನೆರವೇರಿಸಿದೆ. ನಿರ್ಬಂಧಿತ ಕಾರ್ಡಿಯೋ ಮಯೋಪತಿ (ಆರ್‌ಸಿಎಂ) ಯಿಂದ ಹೃದಯ ವೈಫಲ್ಯದ ಅಂತಿಮ ಹಂತಕ್ಕೆ ತಲುಪಿದ್ದ ಪುಟಾಣಿಗೆ ನಾರಾಯಣ ಹೆಲ್ತ್‌ನ ವಿಶೇಷ ಪರಿಣಿತ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ದೇಶದಲ್ಲೇ ಮೊಟ್ಟ ಮೊದಲ ಪ್ರಯೋಗವಾಗಿದೆ.
ಈಗ ಹೊಸ ಹೃದಯ ಪಡೆದಿರುವ ಕಂದಮ್ಮನಿಗೆ 10 ತಿಂಗಳಲ್ಲೇ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಕಾಮಾಲೆ, ತೂಕ ನಷ್ಟ, ಕಿಬ್ಬೊಟ್ಟೆಯ ದ್ರವ ಶೇಖರಣೆ (ಅಸೀಟಿಸ್) ಮತ್ತು ಬೇಕಾದಷ್ಟು ಆಹಾರ ತಿನ್ನಲು ತೊಂದರೆ ಕಾಣಿಸಿಕೊಂಡಿತು. ಇದರಿಂದ ಮಗುವಿನ ಪರಿಸ್ಥಿತಿ ದಿನೇದಿನೆ ಹದಗೆಡತೊಡಗಿದಾಗ ತಕ್ಷಣ ಕುಟುಂಬದವರು ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿದ್ದರು. ಪರಿಶೀಲನೆ ಹಾಗೂ ತಪಾಸಣೆ ನಡೆಸಿದ ಆಸ್ಪತ್ರೆಯ ಹೃದಯ ವೈಫಲ್ಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಮಕ್ಕಳ ಹೃದಯ ಕಸಿ ಹಾಗೂ ಹಿರಿಯರಲ್ಲಿ ಹುಟ್ಟಿನಿಂದಲೇ ಬರುವ ಹೃದ್ರೋಗ ವಿಭಾಗದಲ್ಲಿ ವಿಶೇಷ ಪರಿಣಿತಿ ಹೊಂದಿರುವ ವೈದ್ಯ ಶಶಿರಾಜ್ ಮತ್ತು ತಜ್ಞರ ತಂಡ, ‘ಮಗುವಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಆಯ್ಕೆಯಾಗಿದೆ’ ಎಂದು ತೀರ್ಮಾನಿಸಿ, ತಕ್ಷಣ ಕಾರ್ಯ ಪ್ರವೃತ್ತವಾಯಿತು.
ಈ ಸುದ್ದಿಯನ್ನೂ ಓದಿ | Vishwavani Global Achievers Award: ಕರುನಾಡ ಸಾಧಕರಿಗೆ ಜಪಾನ್ ರಾಜಧಾನಿಯಲ್ಲಿ ನಾಳೆ ಸನ್ಮಾನ!
ಮಕ್ಕಳಲ್ಲಿ ಹೃದಯ ವೈಫಲ್ಯ ದೊಡ್ಡ ಸವಾಲು. ಬೇರೆ ಬೇರೆ ಸಮಸ್ಯೆಗಳಿಂದ ಹೃದಯ ದಾನ ತೀರ ವಿರಳ. ವಿಶೇಷವಾಗಿ ಶಿಶುಗಳಿಗೆ ಹೃದಯವನ್ನೇ ಕಸಿ ಮಾಡುವ ಪರಿಸ್ಥಿತಿ ಬಂದಾಗ ಅದು ಸಂಕೀರ್ಣವಾದ ಹಾಗೂ ತುಂಬ ತೊಡಕಿನ ಪ್ರಕ್ರಿಯೆಯಾಗಿರುತ್ತದೆ. ಈ ಮಗುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಸಮಯ ಕೈ ಮೀರಿ ಹೋಗುತ್ತಿದೆ ಎಂಬುದು ನಮಗೆ ಸವಾಲಿನ ಕೆಲಸವಾಗಿತ್ತು ಎಂದು ಕಸಿ ಪೂರ್ವ ಸನ್ನಿವೇಶವನ್ನು ಡಾ.ಶಶಿರಾಜ್ ವಿವರಿಸಿದರು.
ಮಗುವಿಗೆ ಅಗತ್ಯವಿರುವ ಹೃದಯ 72 ಗಂಟೆಗಳ ಅವಧಿಯಲ್ಲಿ ಲಭ್ಯವಾಗಿತ್ತು. ನ್ಯೂರಾಲಾಜಿಕಲ್ ಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಾಧ್ಯವೇ ಇಲ್ಲ ಎನ್ನುವಂತಿದ್ದ ಎರಡೂವರೆ ವರ್ಷದ ಮಗುವೊಂದರ ಹೃದಯವನ್ನು ದಾನ ಮಾಡಲಾಗಿತ್ತು. ಹೃದಯ ಶಸ್ತ್ರಚಿಕಿತ್ಸಕ ಡಾ. ಸುದೇಶ್ ಪ್ರಭು, ಹಿರಿಯ ಶಸ್ತ್ರ ಚಿಕಿತ್ಸಕ ಮತ್ತು ಕಸಿ ತಜ್ಞ ಡಾ. ಟಿ. ಕುಮಾರನ್, ಅರವಳಿಕೆ ತಜ್ಞ ಡಾ. ಶ್ರೀಧರ್ ಜೋಶಿ, ತೀವ್ರ ನಿಗಾ ತಜ್ಞರಾದ ಡಾ.ರಿಯಾನ್ ಶೆಟ್ಟಿ, ಡಾ.ರಾಜೇಶ್ ಹೆಗ್ಡೆ, ಡಾ. ಗಣೇಶ್ ಸಂಬಂಧಮೂರ್ತಿ ಅವರನ್ನೊಳಗೊಂಡ ವೈದ್ಯಕೀಯ ತಂಡ ಆಗಸ್ಟ್ 18, 2024 ರಂದು ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳ ಚೇತರಿಕೆಯ ನಂತರ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಈಗ ಮಗು ಲವಲವಿಕೆಯಿಂದಿದೆ ಹಾಗೂ ಆಹಾರ ಸೇವನೆ ಮತ್ತು ತೂಕ ವೃದ್ಧಿಯಲ್ಲಿ ಚೇತರಿಸಿಕೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Exercise Tips: ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೇ?
ಖ್ಯಾತ ಹೃದಯ ಶಸ್ತ್ರಚಿಕಿತ್ಸಕ, ನಾರಾಯಣ ಹೆಲ್ತ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ದೇವಿ ಶೆಟ್ಟಿ, “ಇದು ನಮಗೆ ಬಹಳ ಹೆಮ್ಮೆಯ ಕ್ಷಣ. ವೈದ್ಯರು, ನರ್ಸ್, ಚಿಕಿತ್ಸಕರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ನಾರಾಯಣ ಹೆಲ್ತ್ ನ ತಂಡವು ಈ ಮೈಲಿಗಲ್ಲನ್ನು ಸಾಧಿಸಿದೆ, ಇದು ಉನ್ನತ ಶ್ರೇಣಿಯ ಆರೋಗ್ಯ ರಕ್ಷಣೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದ್ದಾರೆ.