Wednesday, 18th December 2024

High Court Circuit Bench: ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ; ಸಿಎಂಗೆ ಐವನ್ ಡಿಸೋಜಾ ನಿಯೋಗ ಮನವಿ

ಬೆಳಗಾವಿ: ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ (High Court Circuit Bench) ಸ್ಥಾಪಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದ ಸರ್ವ ಪಕ್ಷಗಳ ಶಾಸಕರು ಮತ್ತು ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿತು.

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ಕರಾವಳಿ ಜಿಲ್ಲೆಗಳು ಹಾಗೂ ಕೊಡಗು ಜಿಲ್ಲೆ ವ್ಯಾಪ್ತಿಗೆ ಪ್ರತ್ಯೇಕ ಹೈಕೋರ್ಟ್ ಪೀಠ ಸ್ಥಾಪಿಸುವ ವಿಚಾರ ಸದ್ಯಕ್ಕೆ ಸರಕಾರದ ಮುಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ ಎನ್.ಎಸ್. ಬೋಸರಾಜು ಇತ್ತೀಚೆಗೆ ತಿಳಿಸಿದ್ದರು.

ಐವನ್ ಡಿಸೋಜಾ ಅವರ ಗಮನ ಸೆಳೆಯುವ ಸೂಚನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ್ದ ಬೋಸರಾಜು ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ವ್ಯಾಪ್ತಿಗೆ ಬರುವ ಪ್ರದೇಶಗಳ ವ್ಯಾಜ್ಯಗಳನ್ನು ಈಗಿರುವ ಉಚ್ಚ ನ್ಯಾಯಾಲಯದಲ್ಲಿಯೇ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಆಯಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಾಜ್ಯಪಾಲರ ಅನುಮೋದನೆಯೊಂದಿಗೆ ಸಂಚಾರಿ ಪೀಠ ಸ್ಥಾಪಿಸುವ ಅಧಿಕಾರ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದರು. ಹೀಗಾಗಿ ಐವನ್ ಡಿಸೋಜಾ ನೇತೃತ್ವದ ನಿಯೋಗ ಸಿಎಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಸದ್ಯ ಬೆಂಗಳೂರಿನಲ್ಲಿ ಹೈಕೋರ್ಟ್ ಪ್ರಧಾನ ಪೀಠ ಇದ್ದು, ಧಾರವಾಡ ಮತ್ತು ಕಲಬುರಗಿಯಲ್ಲಿ ಸಂಚಾರಿ ಪೀಠ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಎರಡು ಹೆಚ್ಚುವರಿ ಕಾಯಂ ಪೀಠಗಳನ್ನು ಸ್ಥಾಪಿಸಿದ ಬಳಿಕವೂ ಬೆಂಗಳೂರಿನಲ್ಲಿರುವ ಪ್ರಧಾನ ಪೀಠದಲ್ಲಿ ತನಿಖೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಬಹಳಷ್ಟಿವೆ. ವಿಲೇವಾರಿ ಆಗುತ್ತಿರುವ ಪ್ರಕರಣಗಳಿಗಿಂತ ಹೊಸ ಪ್ರಕರಣಗಳ ದಾಖಲಾತಿ ಸಂಖ್ಯೆಯೂ ಜಾಸ್ತಿ ಇದೆ. ಇದರಿಂದ ಹೈಕೋರ್ಟಿನ ಬೆಂಗಳೂರು ಪೀಠದ ಮೇಲೆ ಹೊರೆ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಕಕ್ಷಿಗಾರರು ಪ್ರಕರಣ ವಿಲೇವಾರಿಗೆ ವರ್ಷಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಕರ್ನಾಟಕ ಹೈಕೋರ್ಟ್‌ ಬೆಂಗಳೂರು ಪ್ರಧಾನ ಪೀಠಕ್ಕೆ ಕರಾವಳಿ ಜಿಲ್ಲೆಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಸಲ್ಲಿಸಲಾಗುತ್ತಿರುವ ವ್ಯಾಜ್ಯಗಳ ಸಂಖ್ಯೆ ಅಗಾಧವಾಗಿದ್ದು, ಸ್ಥಳೀಯವಾಗಿ ಹೈಕೋರ್ಟ್ ಪೀಠ ಸ್ಥಾಪನೆಯಾದಲ್ಲಿ ಕಕ್ಷಿಗಾರರಿಗೆ ಬಹಳಷ್ಟು ಅನುಕೂಲವಾಗುವುದು ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಹೀಗಾಗಿ ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ | BBMP: ಮೇಲ್ಮನೆಯಲ್ಲೂ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ