Friday, 22nd November 2024

Hindu Temple: ʼದೇವಸ್ಥಾನದ ಹಣ ದೇವಾಲಯಕ್ಕೇ ಬಳಕೆʼ ಎಂದು ಮುಜರಾಯಿ ಬೋರ್ಡ್‌, ಭಕ್ತರ ಆಕ್ರೋಶಕ್ಕೆ ಮಣಿದ ಸರ್ಕಾರ

kukke

ಬೆಂಗಳೂರು: “ಈ ದೇವಸ್ಥಾನದ (Hindu Temple) ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೇ ಬಳಸುತ್ತೇವೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ದೇವಳಕ್ಕೆ ಬರುವ ಭಕ್ತರಿಗೆ ಎದ್ದು ಕಾಣುವಂತೆ ಬೋರ್ಡ್‌ ಹಾಕಲು ಮುಜರಾಯಿ ಇಲಾಖೆ (Muzrai Department) ಮುಂದಾಗಿದೆ.

ಮುಜರಾಯಿ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸುವ ಕಾಣಿಕೆಯ ಹಣವನ್ನು ಅನ್ಯ ಧರ್ಮದ ತಾಣಗಳಿಗೆ ನೀಡಲಾಗುತ್ತಿದೆ ಎಂಬ ಹಿಂದೂ ಭಕ್ತರ ಆಕ್ರೋಶ ಎದುರಿಸುತ್ತಿರುವ ಸರ್ಕಾರ, ಆ ಕಳಂಕದಿಂದ ಹೊರಬರಲು ರಾಜ್ಯದಲ್ಲಿರುವ ಎಲ್ಲ ಮುಜರಾಯಿ ದೇವಸ್ಥಾನದ ಮುಂದೆ ವಿಶೇಷ ಬೋರ್ಡ್ ಹಾಕಲು ಉದ್ದೇಶಿಸಿದೆ. ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ 34564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ 205, ಪ್ರವರ್ಗ ಬಿ ಅಡಿಯಲ್ಲಿ 193 ಹಾಗೂ ಪ್ರವರ್ಗ ಸಿ ಅಡಿಯಲ್ಲಿ 34166 ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಮುಂದೆ ಡಿಸೆಂಬರ್‌ ಬಳಿಕ ಹಂತಹಂತವಾಗಿ ಬೋರ್ಡ್ ಹಾಕಲಾಗುತ್ತದೆ.

ಈ ಮೂಲಕ ಭಕ್ತರಲ್ಲಿ ಮೂಡಿರುವ ಸಂಶಯ ದೂರ ಮಾಡುವುದು ಮುಜರಾಯಿ ಇಲಾಖೆ ಉದ್ದೇಶವಾಗಿದೆ. ಮುಜರಾಯಿ ದೇವಸ್ಥಾನದ ಹಣವನ್ನು ಅನ್ಯ ಧರ್ಮದ ಧಾರ್ಮಿಕ ಸಂಸ್ಥೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಅನುದಾನ ಬಿಡುಗಡೆ ಪಟ್ಟಿಯಲ್ಲಿ ಚರ್ಚ್, ಮಸೀದಿ ಹೆಸರೂ ಪ್ರಸ್ತಾಪವಾಗಿದ್ದನ್ನು ಇಟ್ಟುಕೊಂಡು ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪದೇಪದೆ ಚರ್ಚೆ ಮುನ್ನೆಲೆ ಬರುತ್ತಿದೆ. ಇದೇ ಕಾರಣಕ್ಕೆ ಬೋರ್ಡ್ ಹಾಕುವ ತೀರ್ಮಾನಕ್ಕೆ ಬರಲಾಗಿದೆ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಪರಿಷತ್ ಸಭೆಯಲ್ಲಿ ಈ ಕುರಿತು ನಿರ್ಣಯಕ್ಕೆ ಬರಲಾಗಿದೆ. ನಡಾವಳಿಯೂ ಸಿದ್ಧವಾಗಿದೆ.

ಸದ್ಯಕ್ಕೆ ಸರ್ಕಾರದ ನಿಲುವನ್ನು ಬೋರ್ಡ್‌ನಲ್ಲಿ ಹಾಕುವುದು. ಮುಂದಿನ ದಿನಗಳಲ್ಲಿ ಪ್ರತಿ ದೇವಸ್ಥಾನದ ವಾರ್ಷಿಕ ಲೆಕ್ಕಚಾರವನ್ನು ಜನರ ಮುಂದಿಡುವ ಆಲೋಚನೆಯೂ ಇದೆ. ಇದಕ್ಕೊಂದು ವ್ಯವಸ್ಥೆ ರೂಪಿಸಿದ ಬಳಿಕ ಈ ಕ್ರಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ಆಯಾ ದೇವಸ್ಥಾನಕ್ಕೆ ಬರುವ ಆದಾಯ ಎಷ್ಟು, ಯಾವದಕ್ಕೆಲ್ಲ ಖರ್ಚು ಮಾಡಲಾಗಿದೆ, ಉಳಿದ ಠೇವಣಿ ಹಣ ಎಷ್ಟು ಎಂದು ಬಹಿರಂಗ ಮಾಡುವ ಇರಾದೆ ಇದೆ.

ದೇವಸ್ಥಾನಗಳೆಷ್ಟು?

  1. ವಾರ್ಷಿಕ 25 ಲಕ್ಷ ರೂ. ವರಮಾನ ಹೊಂದಿರುವ ದೇವಸ್ಥಾನ- 205 (ಪ್ರವರ್ಗ ಎ)
  2. ವಾರ್ಷಿಕ 5 ಲಕ್ಷ ರೂ.ನಿಂದ 25 ಲಕ್ಷ ವರೆಗೆ ವರಮಾನ ಇರುವ ದೇವಳ- 193 (ಪ್ರವರ್ಗ ಬಿ)
  3. ವಾರ್ಷಿಕ 5 ಲಕ್ಷ ರೂ.ಮೀರದ ವರಮಾನ ಇರುವ ಸಂಸ್ಥೆಗಳು- 34166 (ಪ್ರವರ್ಗ ಸಿ)
    ಪ್ರವರ್ಗ ಎ ಮತ್ತು ಬಿ ಅಧಿಸೂಚಿತ ಸಂಸ್ಥೆಗಳಲ್ಲಿ 2020-21ರಿಂದ 2023ರ ನವೆಂಬರ್ ವರೆಗೆ ವಿವಿಧ ಸೇವೆಗಳಿಂದ ಮತ್ತು ಹುಂಡಿಗಳಿಂದ 1975.88 ಕೋಟಿ ರೂ. ಸಂಗ್ರಹವಾಗಿತ್ತು.

ವೆಚ್ಚ ಹೇಗೆ?

ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಂದ ಬರುವ ಆದಾಯಗಳನ್ನು ಆಯಾಯ ದೇವಾಲಯದ ಖಾತೆಯಲ್ಲೇ ನಿರ್ವಹಿಸಿ, ಆಯಾಯ ದೇವಾಲಯಗಳ ದೈನಂದಿನ ಪೂಜಾ ಕೈಂಕರ್ಯ, ನಿತ್ಯ ಕಟ್ಲೆ, ಹೆಚ್ಚು ಕಟ್ಲೆ, ಸಿಬ್ಬಂದಿ ವೆಚ್ಚ, ಭಕ್ತಾದಿಗಳಿಗೆ ಮೂಲಸೌಕರ್ತ ಕಲ್ಪಿಸುವ, ಜೀರ್ಣೋದ್ಧಾರ ಮುಂತಾದ ವೆಚ್ಚಗಳಿಗೆ ಕರ್ನಾಟಕ ಹಿಂದೂ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ 1997ರ ಕಲಂ 36ರಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ಆಯವ್ಯಯದಂತೆ ವೆಚ್ಚ ಭರಿಸಲಾಗುತ್ತಿದೆ ಎಂಬುದು ಮುಜರಾಯಿ ಇಲಾಖೆ ವಿವರಣೆ.

ಇದನ್ನೂ ಓದಿ: Muzrai Temples: ಮುಜರಾಯಿ ದೇಗುಲಗಳ ಅಭಿವೃದ್ಧಿ, ಅರ್ಚಕರಿಗೆ ಸೌಲಭ್ಯ ನೀಡಲು ಕಾಯ್ದೆ ತಿದ್ದುಪಡಿ: ಸಚಿವ ರಾಮಲಿಂಗಾರೆಡ್ಡಿ