Monday, 28th October 2024

Honey Trap : ಮಾಲೀಕಯ್ಯರಿಂದ ಸುಲಿಗೆ ಪ್ರಕರಣ: ಆರೋಪಿ ಮಂಜುಳಾ ಮೊಬೈಲ್‌ನಲ್ಲಿತ್ತು 8 ರಾಜಕಾರಣಿಗಳ ಖಾಸಗಿ ವಿಡಿಯೊ

Honey Trap

ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಂದ ಹಣ ಸುಲಿಗೆಗೆ ಪ್ರಯತ್ನಿಸಿದ್ದ (Honey Trap) ಪ್ರಕರಣದ ಆರೋಪಿಗಳ ಬಳಿ ಎಂಟು ಮಂದಿಯ ಖಾಸಗಿ ಕ್ಷಣದ ವಿಡಿಯೊಗಳು ಪತ್ತೆಯಾಗಿವೆ. ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಹಲವಾರು ವಿಚಾರಗಳು ಹೊರ ಬಂದಿವೆ.

ಮಂಜುಳಾ ಫೋನ್‌ಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರಿಗೆ ಸೇರಿದ ಖಾಸಗಿ ವಿಡಿಯೊ ಪತ್ತೆಯಾಗಿವೆ. ಅವುಗಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅವುಗಳ ನೈಜತೆ ಪರಿಶೀಲನೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್ ಅವರು ನೀಡಿದ ದೂರು ಅಧರಿಸಿ ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳಾದ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ ಅವರನ್ನು ಪೊಲೀಸರು ಬಂಧಿಸಿದ್ದರು.

ಆಳಂದ ರಸ್ತೆಯ ನಿವಾಸಿಗಳಾದ ಮಂಜುಳಾ ಬಳಿಯಿಂದ ವಶಪಡಿಸಿಕೊಂಡ ಆರು ಮೊಬೈಲ್ ಫೋನ್‌ನಲ್ಲಿ ಹಲವಾರು ವಿಡಿಯೊ ತುಣುಕುಗಳು ಸಿಕ್ಕಿವೆ. ಪರಿಶೀಲನೆ ವೇಳೆ ರಾಜಕೀಯ ಮುಖಂಡರು, ಅಧಿಕಾರಿಗಳ ವಿಡಿಯೊ ತುಣುಕುಗಳು ಸಿಕ್ಕಿದ್ದು, ಹಲವರಿಂದ ಹಣ ಸುಲಿಗೆ ಮಾಡಿರುವುದು ಗೊತ್ತಾಗಿದೆ.

ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ನಿತ್ಯ ಸಂದೇಶ ಕಳುಹಿಸಿ, ವಿಡಿಯೊ ಕರೆ ಮಾಡುತ್ತಿದ್ದಳು. ಸನ್ಮಾನದ ಹೆಸರಿನಲ್ಲಿ ಮಾಜಿ ಸಚಿವರಿಗೆ ಮಂಜುಳಾ ಪಾಟೀಲ ಕರೆ ದಿನ ಸಲುಗೆಯಿಂದ ಮಾತನಾಡುತ್ತಿದ್ದರು. ಈ ನಡುವೆ ಮೊಬೈಲ್ ಹಾಗೂ ವಿಡಿಯೊ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಮಾಲೀಕಯ್ಯ ಗುತ್ತಿಗೆದಾರ್ ಅವರಿಂದ 20 ಲಕ್ಷ ಸುಲಿಗೆಗೆ ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Honey Trap Case: ಮಾಜಿ ಸಚಿವರ ಪುತ್ರನಿಗೆ ಹನಿಟ್ರ್ಯಾಪ್; 20 ಲಕ್ಷ ಪಡೆಯುತ್ತಿದ್ದ ಕಾಂಗ್ರೆಸ್ ನಾಯಕಿ ಅರೆಸ್ಟ್!

ತಾನು ಕಳುಹಿಸಿರುವ ಕೆಲವೊಂದು ಸಂದೇಶವನ್ನು ಮಂಜುಳಾ ಅಳಿಸಿ ಹಾಕಿದ್ದಾಳೆ. ಅದನ್ನು ಮರುಜಪ್ತಿ ಮಾಡುವ ಸಲುವಾಗಿ ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು. ಹಲವರ ಖಾಸಗಿ ವಿಡಿಯೊ ಪತ್ತೆಯಾಗಿದೆ. ಆರೋಪಿಗಳು ಬೇರೆ ಬೇರೆ ಮೊಬೈಲ್ ಸಂಖ್ಯೆಯಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಹಾಗೂ ಮೊಬೈಲ್ ಹಾಗೂ ವಿಡಿಯೊ ಕರೆಗಳನ್ನು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿಕೊಂಡು ಹಣ ಸುಲಿಗೆಗೆ ಪ್ರಯತ್ನಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.