Saturday, 23rd November 2024

ಕುದುರೆ ರೇಸ್‌ ನಿಷೇಧಿಸಲು ಗಂಭೀರ ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಕುದುರೆ ರೇಸ್‌ನ್ನು ರಾಜ್ಯದಲ್ಲಿ ನಿಷೇಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ ಆನ್‌ಲೈನ್ ಜೂಜು ನಿಷೇಧ ಮಾಡುವ ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆ 2021ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರಕ್ಕಾಗಿ ಮಂಡನೆ ಮಾಡಿದಾಗ ದೊಡ್ಡ ಚರ್ಚೆಗೆ ನಾಂದಿ ಹಾಡಿತು. ಮಸೂದೆ 2021ಕ್ಕೆ ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿದೆ. ಎರಡು ಸದನದಲ್ಲಿ ಅಂಗೀಕಾರ ಪಡೆದಿದ್ದು, ರಾಜ್ಯ ಪಾಲರ ಸಹಿಯಾದ ಬಳಿಕ ರಾಜ್ಯದಲ್ಲಿ ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲಿದೆ.

ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ದೊರೆತ ಬಳಿಕ ಪ್ರಸ್ತಾಪಿಸಿದ ಗೃಹ ಸಚಿವರು, ಪ್ರಸ್ತುತ ಅದೃಷ್ಟದ ಮೂಲಕ ಹಣವನ್ನು ಗೆದ್ದುಕೊಳ್ಳಲು ಅವಕಾಶ ಕಲ್ಪಿಸುವ ಎಲ್ಲ ಆನ್‌ಲೈನ್ ಗೇಮ್‌ಗಳನ್ನು ಇನ್ನು ಮುಂದೆ ಕಾನೂನು ಬಾಹಿರವೆಂದು ಪರಿಗಣಿಸಿ, ಅದನ್ನು ನಿಯಂತ್ರಿಸಲು, ಪೊಲೀಸರಿಗೆ ಅಧಿಕಾರ ದೊರಕಲಿದೆ ಎಂದು ಹೇಳಿದರು.

ಬಹುತೇಕ ಸದಸ್ಯರ ಅಭಿಪ್ರಾಯದಂತೆ, ಮುಂದಿನ ದಿನಗಳಲ್ಲಿ, ಕುದುರೆ ಜೂಜನ್ನೂ ಸಹ ನಿಷೇಧಿಸುವ ಕುರಿತು ಚಿಂತಿಸಲಾಗುವುದು. ಪ್ರಸ್ತುತ ಮಸೂದೆ, ಟರ್ಫ್ ಕ್ಲಬ್ ಆವರಣದ ಹೊರಗೆ, ಕುದುರೆ ರೇಸಿನ ಮೇಲೆ ನಡೆಯುವ ಆನ್‌ಲೈನ್ ಬೆಟ್ಟಿಂಗ್ ಅನ್ನೂ ಸಹ ನಿಷೇಧಗೊಳಿಸಬಹುದು ಎಂದು ಅವರು ಹೇಳಿದರು.

ಸದನದಲ್ಲಿ ಪರ್ಯಾಲೋಚನೆಗೆ ಕೋರಿರುವ ಮಸೂದೆಯು ವ್ಯಕ್ತಿಯು ತನ್ನ ಕೌಶಲ್ಯ ಆಧಾರದಲ್ಲಿ ಹಣ ಗೆದ್ದು ಕೊಳ್ಳುವ ಆನ್‌ಲೈನ್ ಆಟಗಳನ್ನು ಇದು ನಿಷೇಧ ಮಾಡುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.