Thursday, 19th September 2024

HSRP Deadline: ಎಚ್‌ಎಸ್‌ಆರ್‌ಪಿ ಪ್ಲೇಟ್‌ ಗಡುವು ಮುಕ್ತಾಯ, 3 ದಿನ ವಾಹನ ಚಾಲಕರು ಸೇಫ್‌

hsrp deadline

ಬೆಂಗಳೂರು: ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates – ಎಚ್‌ಎಸ್‌ಆರ್‌‍ಪಿ) ಅಳವಡಿಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ವಿಧಿಸಿದ್ದ ಅಂತಿಮ ದಿನಾಂಕ ನಿನ್ನೆಗೆ ಮುಕ್ತಾಯವಾಗಿದೆ. ಅಳವಡಿಸದಿದ್ದವರಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಆದರೆ ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಬುಧವಾರ (ಸೆಪ್ಟೆಂಬರ್‌ 18) ನಡೆಯಲಿದ್ದು, ಅಲ್ಲಿಯವರೆಗೆ ದಂಡ (HSRP Deadline) ವಿಧಿಸದಿರಲು ಸಾರಿಗೆ ಇಲಾಖೆ (Transport Department) ನಿರ್ಧರಿಸಿದೆ.

ಎಚ್‌ಎಸ್‌ಆರ್‌‍ಪಿ ಅಳವಡಿಸಲು ಕಾಲಾವಕಾಶ ವಿಸ್ತರಿಸಬೇಕು ಎಂದು ಕೋರಿ ಬಿಎನ್‌ಡಿ ಎನರ್ಜಿ ಪ್ರೈವೇಟ್‌ ಲಿಮಿಟೆಡ್ ಕಂಪನಿಯು ಜೂನ್‌ನಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅವಧಿ ವಿಸ್ತರಿಸಲು ಸೂಚಿಸಿದ್ದ ಹೈಕೋರ್ಟ್‌ ವಿಚಾರಣೆಯನ್ನು ಮುಂದೂಡಿತ್ತು. ಅದರಂತೆ ಸೆ.15ರವರೆಗೆ ಅವಧಿ ವಿಸ್ತರಿಸಲಾಗಿತ್ತು.

ಈಗ ಮೂರು ತಿಂಗಳ ಗಡುವು ಮುಗಿದಿದೆ. ಸೆ.18ಕ್ಕೆ ಹೈಕೋರ್ಟ್ ನೀಡುವ ಆದೇಶವನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಬಲವಂತದ ಕ್ರಮ ಇರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಸ್ಪಷ್ಟಪಡಿಸಿದ್ದಾರೆ.

2019ರ ಏಪ್ರಿಲ್‌ 1ರ ನಂತರದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಇದೆ. ಅದಕ್ಕಿಂತ ಹಿಂದಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು. ಇಲ್ಲಿವರೆಗೆ ರಾಜ್ಯದಲ್ಲಿ 52 ಲಕ್ಷ ವಾಹನಗಳಿಗೆ ಅಳವಡಿಸಲಾಗಿದೆ. 1.48 ಕೋಟಿ ವಾಹನಗಳಿಗೆ ಇನ್ನೂ ಅಳವಡಿಕೆಯಾಗಿಲ್ಲ. ಒಮ್ಮೆ ತಪಾಸಣೆ ಆರಂಭಿಸಿದರೆ ಎಚ್‌ಎಸ್‌ಆರ್‌ಪಿ ಅಳವಡಿಸುವವರ ಪ್ರಮಾಣ ಹೆಚ್ಚಳವಾಗಲಿದೆ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬೆಂಗಳೂರು ನಗರಕ್ಕಿಂತಲೂ ಉಳಿದ ಜಿಲ್ಲೆಗಳಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸುವವರ ಪ್ರಮಾಣ ಬಹಳ ಕಡಿಮೆ ಇದೆ. ಹೈಕೋರ್ಟ್‌ನ ಆದೇಶದ ಬಳಿಕ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ನಾವು ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: HSRP Number Plate: ಈ ದಿನದೊಳಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಭಾರಿ ದಂಡ ಖಚಿತ!