Thursday, 21st November 2024

Crime News: ತಿರುಪತಿ ಪ್ರವಾಸ ಮಿಸ್ಟರಿ! 3 ಸ್ನೇಹಿತರಲ್ಲಿ ಒಬ್ಬ ನಾಪತ್ತೆ, ಒಬ್ಬ ಆತ್ಮಹತ್ಯೆ, ಏನಿದು ನಿಗೂಢ?

hubli crime news

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರಕರಣ (Hubli crime news) ವರದಿಯಾಗಿದೆ. ತಿರುಪತಿಗೆ ಪ್ರವಾಸ (Tirupati tour) ತೆರಳಿದ್ದ ಮೂವರು ಸ್ನೇಹಿತರಲ್ಲಿ ಒಬ್ಬಾತ ಅಲ್ಲೇ ನಾಪತ್ತೆಯಾಗಿದ್ದು (Missing Case), ಇನ್ನೊಬ್ಬ ಊರಿಗೆ ಬಂದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಮತ್ತೊಬ್ಬ ಇದೀಗ ಪೊಲೀಸರ ವಶದಲ್ಲಿದ್ದಾನೆ. ಇನ್ನಷ್ಟು ವಿಚಿತ್ರ ಎಂದರೆ ಈ ಮೂವರೂ ಮೊಬೈಲ್‌ ಬಳಸುವುದಿಲ್ಲ!

ಸದ್ಯ ಈ ಪ್ರಕರಣ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿವೆ. ಹುಬ್ಬಳ್ಳಿಯ ಬಾಣಂತಿಕಟ್ಟಿಯ ನಿವಾಸಿಗಳಾದ ಹನುಮಂತ, ಶಿವಾಜಿ ಹಾಗೂ ಗಣೇಶ ಒಟ್ಟಿಗೇ ಕೆಲಸ ಮಾಡುತ್ತಿದ್ದ, ಕಳೆದ ವಾರ ತಿರುಪತಿಗೆ ಹೋಗಿದ್ದರು. ಆದರೆ ಶಿವಾಜಿ ಮತ್ತು ಗಣೇಶ ಮಾತ್ರ ವಾಪಸ್ ಹುಬ್ಬಳ್ಳಿಗೆ ಬಂದಿದ್ದರು. ಇವರ ಜೊತೆಗೆ ತೆರಳಿದ್ದ ಹನುಮಂತ ವಾಪಸ್​ ಬಂದಿರಲಿಲ್ಲ. ಮನೆಯವರು ವಿಚಾರಿಸಿದಾಗ, ಹನುಮಂತನಿಗೆ ತಿರುಪತಿಯಲ್ಲಿ ಮೂರ್ಛೆ ಬಂದಿತ್ತು. ಆತನನ್ನು ಟಿಟಿಡಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋದ್ದರು. ನಾವು ದೇವರ ದರ್ಶನ ಪಡೆದು ಬಳಿಕ ಆಸ್ಪತ್ರೆಗೆ ಹೋದೆವು. ಆದರೆ ಅಲ್ಲಿ ಹನುಮಂತ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಹನುಮಂತ ಸಿಗಲಿಲ್ಲ. ಹೀಗಾಗಿ ವಾಪಸ್​ ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಶಿವಾಜಿ ಮತ್ತು ಗಣೇಶ ಹೇಳಿದ್ದಾರೆ.

​ಇದರಿಂದ ಸಿಟ್ಟಾದ ಹನುಮಂತನ ಕುಟುಂಬಸ್ಥರು, ಗೆಳೆಯರಿಗೆ ಬೈದಿದ್ದರು. ವಾಪಸ್​ ತಿರುಪತಿಗೆ ಹೋಗಿ ಹನುಮಂತನನ್ನು ಹುಡುಕಿಕೊಂಡು ಬರೋಣ ಎಂದು ಶಿವಾಜಿ ಮತ್ತು ಗಣೇಶನಿಗೆ ಹೇಳಿದ್ದರು. ಹನುಮಂತನ ಕುಟುಂಬಸ್ಥರಿಂದ ಈ ಒತ್ತಡ ಹೆಚ್ಚಿದಾಗ, ಶಿವಾಜಿ ತನ್ನ ಮನೆಯಲ್ಲೇ ಅದೂ ಹಾಡ ಹಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದರಿಂದ ಮತ್ತಷ್ಟು ಗಾಬರಿಯಾದ ಹನುಮಂತನ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದು, ಗಣೇಶನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಣೆಯಾಗಿರುವ ಹನುಮಂತನನ್ನು ಹುಡುಕಿಕೊಡಿ ಎಂದು ದೂರು ನೀಡಿದ್ದಾರೆ. ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡ ಶಿವಾಜಿ ಕುಟುಂಬಸ್ಥರೂ ದುಃಖಿತರಾಗಿದ್ದು, ಆತನ ಆತ್ಮಹತ್ಯೆಯ ಕಾರಣ ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ.

ನಾಪತ್ತೆಯಾದ ಹನುಮಂತನನ್ನು ಹುಡುಕಾಟಕ್ಕೆ ಪೊಲೀಸರ ಒಂದು ತಂಡ ತಿರುಪತಿಗೆ ತೆರಳಿದೆ. ಮೂವರೂ ಸ್ನೇಹಿತರು ಗಾರೆ ಕೆಲಸ ಮಾಡುವವರಾಗಿದ್ದು, ಯಾವುದೇ ರೀತಿಯ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ ಟ್ರ್ಯಾಕ್‌ ಮಾಡಲು ಈ ಕೇಸ್​ ಕಷ್ಟವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. ಹನುಮಂತನ ಅನಾರೋಗ್ಯ ಹಾಗೂ ಆಸ್ಪತ್ರೆಯವರು ಕರೆದೊಯ್ದ ಸ್ಟೋರಿ ನಿಜವೋ ಸುಳ್ಳೋ, ಮೂವರ ನಡುವೆ ಹಣ ಅಥವಾ ಇನ್ಯಾವುದಾದರೂ ವ್ಯವಹಾರ ಇತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: Kolkata murder Case : ಕೋಲ್ಕತಾ ಕೊಲೆ ಪ್ರಕರಣ; ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್