Sunday, 15th December 2024

ಹುಳಿಯಾರು ಪಪಂ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಹುಳಿಯಾರು: ಏ.29ರ ಗುರುವಾರ ನಡೆಯಬೇಕಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಕೊರೊನಾ ನೆಪವೊಡ್ಡಿ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಆದರೆ ರಾಜ್ಯದಲ್ಲಿ ನಗರಸಭೆಗಳ ಸಾರ್ವತ್ರಿಕ ಚುನಾವಣೆ ನಡೆಸಿರುವ ಸರ್ಕಾರ ಪಪಂ ಅಧ್ಯಕ್ಷರ ಚುನಾವಣೆ ಮುಂದೂಡಿರುವುದು ಸಾರ್ವಜನಿಕರ ಟೀಕೆ ಹಾಗೂ ಪಪಂ ನೂತನ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿದೆ.

ಹುಳಿಯಾರು ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ 3 ವರ್ಷಗಳ ನಂತರ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರವಾಗಿತ್ತು. ಪರಿಣಾಮ ಯಾವ ಯಾವ ಪಕ್ಷ ಕೂಡಿಕೆ ಮಾಡಿಕೊಂಡು ಅಧಿಕಾರ ಹಿಡಿಯುವುದೋ ಎನ್ನುವ ಕುತೂಹಲ ಪಟ್ಟಣ ನಿವಾಸಿ ಗಳಲ್ಲಿ ಮನೆಮಾಡಿತ್ತು.

ಮೊದಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯುವ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಒಲವು ತೋರಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರೊಂದಿಗಾಗಲೇ ಮೈತ್ರಿ ಪ್ರಸ್ತಾಪ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ನಂತರ ಪಕ್ಷೇತರ ಸದಸ್ಯರುಗಳಾದ ಜಹೀರ್ ಸಾಬ್ ಹಾಗೂ ಶೃತಿ ಸನತ್ ಅವರು ಬಿಜೆಪಿ ಸದಸ್ಯರನ್ನು ಬೆಂಬಲಿಸುವುದಾಗಿ ಹೇಳಿದಾಗ ಸ್ವಂತ ಬಲದಲ್ಲೇ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನಲಾಗಿತ್ತು.

ಇನ್ನೇನು ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಬಲವಾದ ಹಿನ್ನೆಲೆಯಲ್ಲಿ ಏ.29 ರಂದು ಅಧ್ಯಕ್ಷ ಉಪಾ ಧ್ಯಕ್ಷರ ಚುನಾವಣೆ ನಿಗಧಿ ಮಾಡಲಾಗಿತ್ತು. ಆದರೆ ಚುನಾವಣೆಯ ಹೊಸ್ತಿಲಿನಲ್ಲಿ ಮಾಜಿ ಸಚಿವ ಜೆ.ಸಿ.ಮಾಧು ಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ಪಕ್ಷೇತರ ಸದಸ್ಯ ಜಹೀರ್ ಸಾಬ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡು ಸಚಿವ ಜೆ.ಸಿ.ಮಾಧುಸ್ವಾಮಿಗೆ ರಾಜಕೀಯ ಆಘಾತ ನೀಡಿದರು.

ಬಿಜೆಪಿ ಅಧಿಕಾರ ಹಿಡಿಯಲು ಅಗತ್ಯವಾಗಿದ್ದ ಪಕ್ಷೇತರ ಸದಸ್ಯ ಜಹೀರ್ ಸಾಬ್ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಸೇರಿದ್ದ ಪರಿಣಾಮ ಎರಡೂ ಬಣದಲ್ಲೂ ಸಮಾವಾಗಿ ತಲಾ ೯ ಸಂಖ್ಯಾಬಲ ಆಯಿತು. ಹಾಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಲಾಟರಿ ಮೂಲಕ ಆಯ್ಕೆ ಮಾಡುವುದು ಅನಿವಾರ್ಯ ಸ್ಥಿತಿ ನಿರ್ಮಾಣ ವಾಯಿತು. ಲಾಟರಿಯಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಕುತೂಹಲ ಸೃಷ್ಟಿಯಾಗಿ ಚುನಾವಣೆಗೆ ಎಲ್ಲರೂ ಕಾಯುತ್ತಿರುವಾಗ ಸರ್ಕಾರ ಚುನಾವಣೆಯನ್ನು ಮುಂದೂಡಿ ನಿರಾಸೆ ಮೂಡಿಸಿದೆ.

3 ವರ್ಷ ಚುನಾಯಿತ ಪ್ರತಿನಿಧಿಗಳಿಲ್ಲದೆ ಅಭಿವೃದ್ದಿ ಕುಂಟಿತವಾಗಿತ್ತು. ಈಗಲಾದರೂ ಪಂಚಾಯ್ತಿಗೆ ಹಿಡಿದಿದ್ದ ಗ್ರಹಣ ಬಿಡುವುದೆಂದು ಸಾರ್ವಜನಿಕರು ಎದುರು ನೋಡುತ್ತಿದ್ದರು. ಆದರೆ   ಸರ್ಕಾರ ಏಕಾಏಕಿ ಚುನಾವಣೆ ಮುಂದೂಡಿರುವುದು ಟೀಕೆಗೆ ಕಾರಣವಾಗಿದೆ. ಅಧಿಕಾರ ಕೈ ತಪ್ಪುವ ಬೀತಿಯಿಂದ ಚುನಾವಣೆ ಮುಂದೂಡಿರುವ ಆರೋಪ ಕೇಳಿ ಬರತೊಡಗಿದೆ. ಜನರು ಬಂದು ಮತ ಚಲಾಯಿಸುವ ನಗರ ಸಭೆಯ ಚುನಾವಣೆಯನ್ನೇ ರಾಜ್ಯಾದ್ಯಂತ ಮಾಡಿರುವ ಸರ್ಕಾರ 16 ಮಂದಿ ಸದಸ್ಯರು ಬಂದು ಮತದಾನ ಮಾಡುವ ಅಧ್ಯಕ್ಷರ ಚುನಾವಣೆ ಮುಂದೂಡುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.

ಚುನಾವಣೆ ಮುಂದೂಡಿರುವುದು ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದಂತ್ತಾಗಿದೆ. ಯಾರು ಯಾರನ್ನು ಖರೀದಿಸುತ್ತಾರೋ, ಖರೀಧಿಸಿ ಅಧಿಕಾರ ಹಿಡಿಯುವವರು ಪ್ರಾಮಾಣಿಕವಾಗಿ ಅಧಿಕಾರ ನಡೆಸುವರೋ ಎನ್ನುವ ಆತಂಕ ಕಾಡುತ್ತಿದೆ. ಅಲ್ಲದೆ ಇನ್ನೂ ಐದಾರು ತಿಂಗಳು ಹಿಂದಿನಂತೆ ಪಂಚಾಯ್ತಿಯಲ್ಲಿ ಹೇಳೋರೋ ಕೇಳೋರೂ ಯಾರೂ ಇಲ್ಲದೆ ಸಾರ್ವಜನಿಕ ಕೆಲಸಕಾರ್ಯಗಳು ನೆನಗುದಿಗೆ ಬೀಳುವ ಚಿಂತೆ ಸಾರ್ವಜನಿಕ ವಲಯದಲ್ಲಿದೆ. ಒಟ್ಟಾರೆ ರಾಜಕೀಯ ಮೇಲಾಟಕ್ಕೆ ಹುಳಿಯಾರು ಪಂಚಾಯ್ತಿ ನಿವಾಸಿಗಳು ಮೂಕಪ್ರೇಕ್ಷಕರಾಗಿದ್ದಾರೆ.