Sunday, 15th December 2024

ಕೊನೆಯ ಬಾರಿ ಕರೆದಾಗ ಹೋಗದೇ ತಪ್ಪು ಮಾಡಿದೆ

ಸಿದ್ಧಲಿಂಗಯ್ಯ ಅವರೊಂದಿಗೆ ಕಳೆದ ಆ ಕ್ಷಣಗಳೇ ಅವಿಸ್ಮರಣೀಯ

ಪುಸ್ತಕದ ಮಧ್ಯೆ ಕುಳಿತು ಗಂಟೆಗಟ್ಟಲೇ ಚರ್ಚೆ

ರಂಜಿತ್ ಎಚ್. ಅಶ್ವತ್ಥ

‘ಯಾರಿಗೆ ಬಂತೋ ಎಲ್ಲಿಗೆ ಬಂತೋ 47ರ ಸ್ವಾತಂತ್ರ್ಯ… ಇಕ್ಕುರ್ಲಾ, ಒದಿರ್ಲಾ’ ಅಂದೆಲ್ಲ ಬರೆದ ಸಿದ್ಧಲಿಂಗಯ್ಯ ಅವರನ್ನು
ಭೇಟಿಯಾಗುವ ಮೊದಲು ಅವರ ಬಗ್ಗೆ ನನಗಿದ್ದ ಕಲ್ಪನೆಯೇ ಬೇರೆ. ಆದರೆ ಕಳೆದ ಐದು ವರ್ಷದಲ್ಲಿ ಆಗ್ಗಾಗೆ ಭೇಟಿಯಾಗು ತ್ತಿದ್ದಾಗ, ಅವರ ಬಗ್ಗೆಯಿದ್ದ ಕಲ್ಪನೆಯೇ ಬದಲಾಯಿತು.

ಚಿಕ್ಕ ಮೂರ್ತಿಯಂತಿದ್ದ ಸಿದ್ದಲಿಂಗಯ್ಯ ಅವರ ಮಗು ಮನಸಿನ ಅನಾವರಣಗೊಳ್ಳುತ್ತ ಹೋಯಿತು. ದಲಿತ, ಬಂಡಾಯ ಸಾಹಿತಿ ಎನ್ನುವ ಮೂಲಕ ಚಿರಪರಿಚಿತರಾಗಿದ್ದ ಡಾ. ಸಿದ್ದಲಿಂಗಯ್ಯ ಅವರನ್ನು ನಾನು ಮೊದಲು ಭೇಟಿಯಾಗಿದ್ದ ಬಹುಶಃ ನಾಲ್ಕೈದು ವರ್ಷಗಳ ಹಿಂದೆ. ಅಚಾನಕ್ ಆಗಿ ಸಿಕ್ಕರು. ಮೊದಲಿಗೆ ಅವರನ್ನು ನಾನು ನೋಡಿದ್ದು ‘ವಿಶ್ವವಾಣಿ’ ಹಳೇ ಕಚೇರಿಯ ಕೆಳಗಿದ್ದ ಎಸ್‌ಬಿಐ ಎಟಿಎಂ ಹತ್ತಿರ. ಸಹೋದ್ಯೋಗಿ ವೆಂಕಟೇಶ್‌ಗೆ ಅವರ ಪರಿಚಯವಿತ್ತು.

ಅವರಿಂದ ನನಗೆ ಪರಿಚಯವಾಗಿದ್ದ ಸಿದ್ಧಲಿಂಗಯ್ಯ ಅವರನ್ನು ಅದಾದ ಬಳಿಕ ಕನಿಷ್ಠ ಏಳೆಂಟು ಬಾರಿಯಾದರೂ ಭೇಟಿ ಯಾದೆ. ಈ ಎಲ್ಲ ಭೇಟಿಯಲ್ಲಿಯೂ ಅವರಲ್ಲಿ ಕಿಂಚಿತ್ತು ಅಹಂ ಆಗಲಿ, ತನಗೆ ಎಲ್ಲ ತಿಳಿದಿದೆ ಎನ್ನುವ ಪ್ರತಿಷ್ಠೆಯಾಗಲಿ ಕಾಣಲೇ ಇಲ್ಲ. ನಮ್ಮ ಕಚೇರಿಗೆ ಹತ್ತಿರದಲ್ಲೇ ಅವರ ಮನೆಯಿದಿದ್ದರಿಂದ ಅನೇಕ ಬಾರಿ ಮನೆಯ ಮುಂದೆ ಹೋಗುವಾಗಲೆಲ್ಲ ಅವರ ಮನೆ ಹೊಕ್ಕು ಬರುತ್ತಿದ್ದೆವು.

ಕ್ಷಣ ಮಾತ್ರ ಮಾತನಾಡಿಸಲು ಹೋಗುತ್ತಿದ್ದ ನಮಗೆ ಹೊರಬಂದ ಬಳಿಕ ಎಷ್ಟು ಗಂಟೆ ಕಳೆದಿದ್ದೇವೆ ಎನ್ನುವುದು ತಿಳಿಯುತ್ತಿತ್ತು.
ಮಹಡಿಯಲ್ಲಿದ್ದ ಬೃಹತ್ ಗ್ರಂಥಾಲಯದಲ್ಲಿ ನಾನು ಅವರು ಹಾಗೂ ವೆಂಕಟೇಶ್ ಕುಳಿತು ಗಂಟೆಗಟ್ಟಲೇ ಹರಟಿದ್ದು ಈಗಲೂ
ನೆನಪಿದೆ. ದಲಿತ, ಬಂಡಾಯ ಸಾಹಿತ ಎಂದು ಸಿದ್ದಲಿಂಗಯ್ಯ ಅವರನ್ನು ಬ್ರ್ಯಾಂಡ್ ಮಾಡಿದ್ದರು. ಆದರೆ ಮೊದಲ ಬಾರಿಗೆ ಅವರ
ಗ್ರಂಥಾಲಯಕ್ಕೆ ಕಾಲಿಟ್ಟಾಗ ನನಗೆ ಕಾಣಿಸಿದ ಮೊದಲ ಪುಸ್ತಕ ವಿವೇಕಾನಂದರ ಪ್ರವಚನದ ಸರಣಿ ಮಾಲಿಕೆ.

ಅರೇ ನೀವು ವಿವೇಕಾನಂದ, ರಾಮಕೃಷ್ಣ ಪರಮಹಂಸರನ್ನು ಓದಿದ್ದೀರಾ? ಬಲಪಂಥೀಯ ಚಿಂತನೆಯನ್ನು ವಿರೋಧಿಸಿದ್ದು ನೀವೆ ಅಲ್ಲವೇ ಅಂತ ನೇರವಾಗಿ ಪ್ರಶ್ನಿಸಿದ್ದೆ. ಅದಕ್ಕೆ ಅವರು ಹೇಳಿದ್ದು, ಪುಸ್ತಕ ಓದುವವನಿಗೆ ಕೇವಲ ಒಂದು ಸಿದ್ಧಾಂತಕ್ಕೆ ಸೀಮಿತವಾಗಬಾರದು.

ಬಲಪಂಥವನ್ನು ನಾನು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ, ವಿವೇಕಾನಂದರ ಮಾತುಗಳು ಎಲ್ಲ ಸುಳ್ಳು ಎಂದಲ್ಲ. ಅಂಬೇಡ್ಕರ್ ಅವರನ್ನು ಓದಿದಾಗ ಸಿಗುವಷ್ಟೇ ಆನಂದ ವಿವೇಕಾನಂದರನ್ನು ಓದಿದಾಗಲು ಸಿಗುತ್ತದೆ. ಸಿದ್ಧಾಂತಗಳನೇ ಇರಲಿ ಅವರು ನಮ್ಮ ದೇಶದ ಆಸ್ತಿ ಎಂದಿದ್ದರು.

ವಿವೇಕಾನಂದರಿಂದ ಶುರುವಾದ ಮೇಸ್ಟ್ರ ಪಾಠ ಹಿಂದುತ್ವ, ಅಂಬೇಡ್ಕರ್, ಸಂವಿಧಾನ, ರಾಜಕೀಯ, ಸಾಹಿತ್ಯ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಸೇರಿ ಅವರ ಸಾಹಿತ್ಯ ಕೃಷಿ, ಬಂಡಾಯ ಸಾಹಿತ್ಯದ ಜತೆಗೆ ಅವರ ಪ್ರೇಮಗೀತೆಗಳು ಹೀಗೆ ಮಾತುಗಳು ಒಂದು ವಿಷಯದಿಂದ ಇನ್ನೊಂದು ವಿಷಯಗಳಿಗೆ ಹೊರಳುತ್ತಿತ್ತು. ಆ ವೇಳೆಗೆ ಎರಡನೇ ಬಾರಿಗೆ ಟೀ, ಬಾಳೆಹಣ್ಣು ನಾವಿರುವಲ್ಲಿಗೆ ಬಂತು. ಅದನ್ನು ತಿಂದು ಮುಗಿಸಿದರೂ, ಅವರೊಂದಿಗಿನ ಮಾತು ಮುಗಿಯಲಿಲ್ಲ.

ಈ ಮಾತಿಗೆ ಬ್ರೇಕ್ ಹಾಕಿ ಹೊರಬಂದಾಗ ಇನ್ನೊಮ್ಮೆ ಭೇಟಿಯಾಗೋಣ ಎಂದಿದ್ದರು. ಇದಾದ ಬಳಿಕ ಹಲವು ಬಾರಿ ಟೀಗೆಂದು ಅವರ ಮನೆಗೆ ಭೇಟಿ ನೀಡಿದ್ದೇವು. ಡಿನ್ನರ್‌ಗೆ ಸೇರೋಣ ಎಂದು ಅನೇಕ ಬಾರಿ ಆಹ್ವಾನ ನೀಡಿದರೂ, ಆಫೀಸ್ ಒತ್ತಡದಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ. 2019ರಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ವರದಿಗಾರಿಕೆಗೆಂದು ಪುನಃ ನಾನು
ವೆಂಕಟೇಶ್ ಹೋಗಿದ್ದಾಗ, ಕರೆ ಮಾಡಿ ಎಲ್ಲಿದ್ದೀರಾ ಎಂದೆವು. ಬನ್ನಿ ರಾತ್ರಿ ಊಟಕ್ಕೆ ಎಂದರು.

ಸಾಹಿತಿಗಳೊಂದಿಗೆ ರಾತ್ರಿಯ ಊಟಕ್ಕೆ ಕೂರುವ ಮಜವೇ ಬೇರೆ. ಸುಮಾರು ಎಂಟು ಗಂಟೆಗೆ ಅವರ ಹೋಟೆಲ್‌ಗೆ ಹೋದ ಅಲ್ಲಿಂದ ಹೊರ ಬರುವ ವೇಳೆ ರಾತ್ರಿ ಒಂದು ಕಳೆದಿತ್ತು. ರಾತ್ರಿ ಊಟಕ್ಕೆಂದು ಕುಳಿತಾಗ ಅವರು ಮಾತನಾಡಿದ್ದಕ್ಕಿಂತ ನಮ್ಮ ಬಳಿ ಮಾತನಾಡಿಸಿದ್ದೆ ಹೆಚ್ಚು. ಸಾಹಿತ್ಯ ಸಮ್ಮೇಳನವಾಗಿದ್ದರಿಂದ ಈ ಭೇಟಿಯಲ್ಲಿ ಸಾಹಿತ್ಯ, ಸಂಸ್ಕೃತಿಗೆ ಮೀಸಲಾಗಿತ್ತು. ಇದನ್ನು ಬಿಟ್ಟರೆ ಅಲ್ಲಿ ಕಾಣಿಸಿಕೊಂಡಿದ್ದು ಬುದ್ಧನ ತತ್ವ ಆದರ್ಶಗಳ ಬಗ್ಗೆ.

ಸಾಹಿತ್ಯ ವಿಮರ್ಶೆ, ಸಾಹಿತ್ಯ ಹಾಗೂ ಇಂದಿನ ಯುವ ಪೀಳಿಗೆ, ಎಡ-ಬಲ ಪಂಥದ ಅಮಲನ್ನು ಏರಿಸಿಕೊಂಡಿರುವ ಕೆಲವರು
ಸಮಾಜಕ್ಕೆ ಮಾಡುತ್ತಿರುವ ತೊಂದರೆ ಸೇರಿ ನಾನಾ ವಿಚಾರದ ಬಗ್ಗೆ ಹರಟೆ ಹೊಡೆದಿದ್ದವು. ಕೊನೆಗೆ ನಾವು ನಮ್ಮ ರೂಮಿಗೆ ಬರಬೇಕು ಎಂದು ಸಮಯ ನೋಡಿದಾಗ ಒಂದು ಗಂಟೆ ಕಳೆದಿದ್ದು. ಈ ಸರಿರಾತ್ರಿಯಲ್ಲಿ ಹೇಗೆ ಹೋಗೋದು ಎಂದು
ಯೋಚಿಸುತ್ತಿರುವಾಗ, ಅವರ ಶಿಷ್ಯರೊಬ್ಬರನ್ನು (ಊಟದಲ್ಲಿ ನಮ್ಮೊಂದಿಗೆ ಭಾಗಿಯಾಗಿದ್ದವರು) ಕರೆದು ನಮ್ಮ ಹೊಟೇಲ್‌ಗೆ
ಹೋಗುವ ವ್ಯವಸ್ಥೆ ಮಾಡಿದ್ದರು.

ಕೊನೆಯದಾಗಿ ಅವರು ಯುವಕರಿಗೆ ನೀಡುತ್ತಿದ್ದ ಪ್ರೋತ್ಸಾಹವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಒಮ್ಮೆ ನನ್ನ ಅಣ್ಣ ಒಂದು ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿ ಅವರಿಗೆ ಕೇಳಿಸಬೇಕು ಎಂದು ಅವರ ಮನೆಗೆ ಹೋಗಿದ್ದೇವು. ಆ ಹಾಡನ್ನು
ಕೇಳಿ, ‘ಎಷ್ಟು ಚೆನ್ನಾಗಿದೆ..’ ಎಂದು ನಾಲ್ಕೈದು ಬಾರಿ ಕೇಳಿ, ನನ್ನ ಯಾವ ಹಾಡನ್ನಾದರೂ ನೀವು ಬಳಸಿಕೊಳ್ಳಿ. ಅದಕ್ಕೆ ನನ್ನ
ಅನುಮತಿಯ ಅಗತ್ಯವಿಲ್ಲ ಎಂದಿದ್ದರು. ಇದು ಅವರ ದೊಡ್ಡತನಕ್ಕೆ ಸಾಕ್ಷಿ.

ಇತ್ತೀಚಿಗೆ ಒಮ್ಮೆ ಕರೆ ಮಾಡಿದಾಗಲೂ ಆರೋಗ್ಯ ವಿಚಾರಿಸಿದ್ದಾಗ ಅವರು, ‘ಬನ್ನಿ ಒಮ್ಮೆ ಭೇಟಿಯಾಗೋಣ ತುಂಬಾ
ದಿನವಾಯಿತು ಎಂದಿದ್ದರು’. ಅವರ ಆ ಆಹ್ವಾನವನ್ನು ಕರೋನಾ ಕಾರಣಕ್ಕೆ ತಿರಸ್ಕರಿಸಿ, ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಅದಾದ ಕೆಲವೇ ದಿನದಲ್ಲಿ ಕರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಬೆಡ್‌ಗಾಗಿ ಸಮಸ್ಯೆಯಾಗಿತ್ತು. ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಹುಷಾರಾಗುತ್ತಿದ್ದಾರೆ.

ಕೆಲವೇ ದಿನದಲ್ಲಿ ಗುಣಮುಖರಾಗಿ ಮನೆಗೆ ಬರುತ್ತಾರಂತೆ ಎಂದು ವೆಂಕಟೇಶ್  ಅವರು ಹೇಳಿದಾಗ ‘ಸದ್ಯ.. ಕರೋನಾದಿಂದ ಅವರು ಗುಣಮುಖರಾದ ಕೂಡಲೇ ಭೇಟಿಯಾಗೋಣ’ ಎಂದುಕೊಂಡಿದ್ದೆ. ಆದರೆ ಆ ಭೇಟಿಗೆ ಕೊನೆಗೂ ಸಮಯ ಕೂಡಿ
ಬರಲೇ ಇಲ್ಲ. ದಲಿತರ ಶೋಷಣೆಯ ವಿರುದ್ಧದ ಧ್ವನಿಯಾಗಿ, ದಮನಿತರ ಪರ ಹೋರಾಡಿದ್ದ ನೀವು ಇನ್ನಷ್ಟು ವರ್ಷ
ಇರಬೇಕಿತ್ತು. ಮುಂದಿನ ಪೀಳಿಗೆಗೆ ದಲಿತ ಸಾಹಿತ್ಯದ ಕೊಂಡಿ ಕಳಚಿದೆ. ಒಲ್ಲದ ಮನಸಿನಿಂದಲೇ ನಿಮಗೆ ವಿದಾಯ
ಹೇಳುತ್ತಿದ್ದೇನೆ. ಓಂ ಶಾಂತಿ.

೦೦೦