Tuesday, 22nd October 2024

ಯಡಿಯೂರಪ್ಪನವರನ್ನು ಬದಲಿಸಿದರೆ ಬಿಜೆಪಿ ಸರ್ವನಾಶ: ದಿಂಗಾಲೇಶ್ವರ ಶ್ರೀ

ಬೆಂಗಳೂರು:  ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಮಠಾಧೀಶರ ನಿಯೋಗವು, ಒಂದು ವೇಳೆ ಯಡಿಯೂರಪ್ಪನವರನ್ನು ಬದಲಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ ಎಂದು ಬಿಜೆಪಿ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ನೀಡಿದೆ.

ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀ, ಸಮರ್ಥವಾಗಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನರನ್ನು ಬದಲಾವಣೆ ಮಾಡಬೇಕು ಎಂಬುದು ಒಂದು ಕೆಟ್ಟ ಉದ್ದೇಶ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತಂದ ಯಡಿಯೂರಪ್ಪನವರಿಗೆ ಹಿಂದೆಯೂ ಸರಿಯಾಗಿ ಆಡಳಿತ ನಡೆಸಲು ಬಿಡದೇ ಅಡ್ಡಿಮಾಡಲಾಗಿದೆ. ಈ ವಿಚಾರ ಸ್ವಾಮಿಜಿಗಳಿಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೂ ಗೊತ್ತು ಎಲ್ಲರ ಮನಸ್ಸಲ್ಲೂ ನೋವಿದೆ.

ಎಲ್ಲಾ ಸ್ವಾಮೀಜಿಗಳು ಒಟ್ಟಾಗಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಯಡಿಯೂರಪ್ಪ ಅವಧಿ ಪುರ್ಣಗೊಳಿಸಲಿ. ನಾವು ಕೇವಲ ಎಚ್ಚರಿಕೆ ನೀಡಿ ಹೊರಡುತ್ತಿದ್ದೇವೆ.

ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ 2-3 ದಿನಗಳಲ್ಲಿ 400-500 ಮಠಾಧೀಶರು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.