Sunday, 15th December 2024

ಓಶೋರನ್ನು ಬಳಸಿಕೊಳ್ಳುವಲ್ಲಿ ವಿಫಲವಾದ ಭಾರತ !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 23

‘ವಿಶ್ವವಾಣಿ ಕ್ಲಬ್‌ಹೌಸ್’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಧರ ವೇಣುಗೋಪಾಲ್ ಅಭಿಮತ

ಬೆಂಗಳೂರು: ಓಶೋ ಅವರ ವಿಚಾರಧಾರೆಗಳನ್ನು ದೇಶದ ಏಳಿಗೆಗೆ ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಯಿತು. ಅವರ ಜ್ಞಾನವನ್ನು ಒಪ್ಪಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದು ಸತ್ಯ ಎಂದು ಮೈಸೂರಿನ ’ಓಶೋ-ಅಲ್ಲಮ ರಿಸರ್ಚ್ ಫೌಂಡೇಷನ್ ಹಾಗೂ ಓಶೋ ಸನ್ನಿಧಿಯ ವಿದ್ಯಾಧರ ವೇಣುಗೋಪಾಲ್ ಅವರು
ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ನಡೆದ ನೀವು ನೋಡಿರದ ಓಶೋ: ಅರಿವಿನ, ಲಹರಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾರ್ಶನಿಕರು ವಿಫಲ ರಾದರಾ, ನಾವು ವಿಫಲವಾದರಾ ಎಂಬ ಚರ್ಚೆಯ ನಡುವೆ ’ನಾನು’ ವಿಫಲವಾದೆ ಎಂಬುದು ನನಗನಿಸಿದ್ದು. ಓಶೋ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳಲು
ನಾವು ಇನ್ನೂ ಐನೂರು ವರ್ಷ ಸಾಗಬೇಕಿದೆ ಎನಿಸುತ್ತದೆ. ಅವರನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ನಾವು ಸಾಗುತ್ತಿರುವ ದಾರಿ ಅಷ್ಟೊಂದು ವೇಗವಾಗಿಲ್ಲ ಎಂದರು.

ನನ್ನನ್ನು ನಾನು ಅರಿಯುವುದು ಗುರು ಸಾಕ್ಷಾತ್ಕಾರ. ನಾನು ಮಡದಿ ಇದ್ದರೂ ಗಂಡನಲ್ಲ, ಮಗಳಿ ದ್ದರೂ ತಂದೆಯಲ್ಲ, ಗೆಳೆಯರಿದ್ದರೂ ಸ್ನೇಹಿತನಲ್ಲ, ಹೀಗೆ, ನಾನಲ್ಲದೆ ಹೋಗಿದ್ದ ನನ್ನನ್ನು ಒಂದು ದಾರಿಗೆ ತಂದು ನಿಲ್ಲಿಸಿದ್ದು ಓಶೋ ಅವರ ಬರಹಗಳು. ಓಶೋ ಯಾವುದೇ ಧರ್ಮ ಸ್ಥಾಪನೆ ಮಾಡಲಿಲ್ಲ, ಸಿದ್ಧಾಂತ ಹೇಳಲಿಲ್ಲ, ಬುದ್ದ, ಕ್ರಿಸ್ತ, ಮಹಾವೀರ ಸೇರಿ ಎಲ್ಲ ಮಹಾ ಸಂತರನ್ನು ಕಟ್ಟಿಕೊಟ್ಟರು. ಓಶೋ ಅವರ ಪ್ರವಚನದಿಂದ ಕೇಳಿದರೆ ಎಲ್ಲ ಧರ್ಮವೂ ಅರ್ಥವಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛಂದ ಕಾಮದ ಬಗ್ಗೆ ಮಾತು: ಮಡಿವಂತಿಕೆ ಸಲ್ಲದು ಎಂಬುದನ್ನು ಮುಕ್ತವಾಗಿ ಹೇಳಿದ ವ್ಯಕ್ತಿ ಓಶೋ ರಜನೀಶ್. ಸೆಕ್ಸ್ ಎನ್ನುವುದು ಕೂಡ ಮನುಷ್ಯನಿಗೆ ಉಸಿರಿನಂತೆಯೇ ಸಹಜ ಕ್ರಿಯೆ ಎಂದರು. ಮೂಲತಃ ಅವರು ಜೈನರು. ಹೀಗಾಗಿ, ಅದಕ್ಕೆ ಧಾರ್ಮಿಕ ಬಣ್ಣ ಬಳಿಯಲಾಯಿತು. ಅದಕ್ಕೆ ಓಶೋ ಈ ಬಗ್ಗೆ ಆಗಾಗ ಸಮರ್ಥನೆ ಕೊಡತೊಡಗಿದರು. ಮಕ್ಕಳನ್ನು ಲೈಂಗಿಕ ಮಾಹಿತಿ ನೀಡದಂತೆ ಬೆಳೆಸುವ ಕ್ರಮವನ್ನು ವಿವರಿಸಿದರು. ಸೆಕ್ಸ್‌ನಿಂದ ಸಮಾಜದೆಡೆಗೆ ಎಂಬ ಪುಸ್ತಕದಲ್ಲಿ ಬಹಳ ಚೆಂದವಾಗಿ ಹೇಳಿದ್ದಾರೆ.

ಸೆಕ್ಸ್ ಅನ್ನು ಅಶ್ಲೀಲ ಎಂದು ಎಲ್ಲಿವರೆಗೆ ತೆಗೆದುಕೊಳ್ಳುತ್ತೇವೆಯೋ ಅಲ್ಲಿವರೆಗೆ ಸೆಕ್ಸ್ ಅರ್ಥವಾಗುವುದಿಲ್ಲ.’ರೈಟ್ ಟು ಎಜುಕೇಷನ್ ರೀತಿ, ರೈಟ್ ಟು ಸೆಕ್ಸ್’ ಕೂಡ ಬೇಕು ಎಂಬುದು ರಜನೀಶ್ ಅವರ ಅಭಿಪ್ರಾಯ. ಹಳ್ಳಿಯ ಹೆಣ್ಣುಮಗಳಿಗೆ ನಾಲ್ಕು ಮಕ್ಕಳನ್ನು ಹೆತ್ತರೂ ಸೆಕ್ಸ್‌ನ ಅನುಭವವೇ ಆಗುವುದಿಲ್ಲ. ಆದರೆ, ಪಟ್ಟಣದ ಹೆಣ್ಣುಮಗಳಿಗೆ ಮಗುವಾಗದೆ ಸೆಕ್ಸ್ ಬಗ್ಗೆ ಎಲ್ಲವೂ ಗೊತ್ತಿರುತ್ತದೆ ಎಂಬುದು ಓಶೋ ನುಡಿಗಳು. ಹೀಗಾಗಿ, ಸೆಕ್ಸ್ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಓಶೋ
ಹೊಂದಿದ್ದರು ಎಂದು ವಿಶ್ವೇಶ್ವರ ಭಟ್ ವಿವರಿಸಿದರು.

ಪತ್ರಕರ್ತನಾಗಬೇಡ !
ಓಶೋ ಅವರು ಪತ್ರಕರ್ತನಾಗಬೇಡ ಎಂಬ ಪುಸ್ತಕದಲ್ಲಿ ನೀವು ಎಂದಿಗೂ ಪತ್ರಕರ್ತರಾಗುವುದು ಬೇಡ ಎಂದು ಹೇಳುತ್ತಲೇ, ಒಬ್ಬ ಉತ್ತಮ ಪತ್ರಕರ್ತ ಆಗುವುದು ಹೇಗೆ ಎಂಬುದನ್ನು ಹೇಳಿದ್ದಾರೆ. ಮುಲ್ಲಾ ನಸ್ರುದ್ದೀನ್ ಎಂಬ ಪಾತ್ರ ಬಳಸಿ ಅವರು ಸಾವಿರಾರು ಕಥೆಗಳನ್ನು ಹೇಳುವ ಮೂಲಕ ಓದುಗರ, ಕೇಳುಗರ ಮನಮುಟ್ಟುತ್ತಾರೆ. ಓಶೋ ಪ್ರಭಾವ ನನ್ನ ಬರವಣಿಗೆ ಮತ್ತು ಬೆಳವಣಿಗೆ ಮೇಲೆ ಅಗಾಧ ಪರಿಣಾಮ ಬೀರಿದೆ. ನಾನು ಸ್ವಲ್ಪದರಲ್ಲೇ ಓಶೋ ಗಾಢ ಪ್ರಭಾವದಿಂದ ತಪ್ಪಿಸಿಕೊಂಡೆ, ಇಲ್ಲದಿದ್ದರೆ, ಬೆಂಗಳೂರಿನಲ್ಲಿ ನನ್ನದು ಒಂದು ಓಶೋ ಸೆಂಟರ್ ಇರುತ್ತಿತ್ತು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯ ಪಟ್ಟರು.

ಓಶೋ ಒಂದು ಪರದೆ, ನಿತ್ಯ ಒಂದೊಂದು ಚಿತ್ರ
ಓಶೋ ರಜನೀಶ್ ಅವರು ಒಂದು ಪರದೆಯಿದ್ದಂತೆ, ಅದರಲ್ಲಿ ಪ್ರತಿನಿತ್ಯ ಒಂದೊಂದು ಚಿತ್ರಗಳು ಮೂಡುತ್ತಿರುತ್ತವೆ. ಒಮ್ಮೆ ಅಧ್ಯಾತ್ಮ ಇಣುಕಿದರೆ, ಮತ್ತೊಂದು ಬಾರಿ ಧರ್ಮ ಇರುತ್ತದೆ, ಒಮ್ಮೆ ಕ್ರಿಸ್ತ ಇದ್ದರೆ, ಮತ್ತೊಮ್ಮೆ ಮಹಾವೀರ ಇರುತ್ತಾನೆ, ಒಮ್ಮೆ ಸೆಕ್ಸ್ ಇದ್ದರೆ, ಮತ್ತೊಮ್ಮೆ ಕ್ರೈಂ ಇರುತ್ತದೆ. ಹೀಗೆ ವಿಭಿನ್ನವಾದ ಚಿತ್ರಣ ಸೃಷ್ಟಿಸುವ ಓಶೋ ಜೀವನ ಬಹಳ ಕುತೂಹಲಕಾರಿ. ಅವರು 1931 ರಿಂದ 1999ರವರೆಗೆ ಬದುಕಿದ್ದರು. ಅವರು ನಿಧನರಾಗಿ 31 ವರ್ಷ ಆಯ್ತು, ಆದರೆ, ಆನಂತರವೇ ಅತಿ ಹೆಚ್ಚು ಪುಸ್ತಕ ಮಾರಾಟವಾಗಿವೆ. ಸುಮಾರು 238 ಪುಸ್ತಕಗಳು ಪ್ರಕಟವಾಗಿವೆ. ಅವರು ಒಟ್ಟು 700 ಪುಸ್ತಕಗಳಾಗುವಷ್ಟು ವಿಚಾರ ಪ್ರಕಟ ಪಡಿಸಿದ್ದಾರೆ. ಅವರ, ಗ್ರಂಥಾಲಯದಲ್ಲಿ 60 ಸಾವಿರ ಪುಸ್ತಕಗಳಿವೆ. ಅದರಲ್ಲಿ ಎಲ್ಲ ಪುಸ್ತಕಗಳಲ್ಲಿ ಅವರ ಸಹಿ, ಗುರುತು, ಅಥವಾ ಯಾವುದಾದರೂ ನೋಟ್ಸ್ ಇದ್ದೆ ಇದೆ. ಇದು ಅವರು ಎಷ್ಟು ಅಧ್ಯಯನ ನಡೆಸಿದ್ದರು ಎಂಬುದನ್ನು ಹೇಳುತ್ತದೆ ಎಂದು ವಿಶ್ವೇಶ್ವರ ಭಟ್ ಹೇಳಿದರು.