ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 25
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ’ ಮಾತು
ರಾಷ್ಟ್ರೀಯ ಶಿಕ್ಷಣನೀತಿಯಿಂದ ಶಕ್ತ ಭಾರತದ ನಿರ್ಮಾಣ
೬೦ ವರ್ಷಗಳ ಕಾಲ ದೇಶದಲ್ಲಿ ಏನು ನಡೆದಿದೆ ?
ಬೆಂಗಳೂರು: ದೇಶದಲ್ಲಿ ಇತ್ತೀಚಿಗೆ ಕೆಲ ಬುದ್ಧಿಜೀವಿಗಳು ಭಾರತ ಹಾಗೂ ಭಾರತೀಯತೆಯ ಬಗ್ಗೆ ಕೀಳಾಗಿ ಮಾತನಾಡುವ ಮನೋರೋಗ ಶುರುವಾಗಿದೆ. ದೇಶದ ಅಭ್ಯುದಯಕ್ಕೆ ಯಾವುದೇ ವಿಷಯ ಪ್ರಸ್ತಾಪಿಸಿದರೂ ಅದನ್ನು ವಿರೋಧಿಸುವ ಗುಲಾಮಗಿರಿ ಹೆಚ್ಚುತ್ತಿರುವುದು ದೇಶದ ದುರ್ದೈವ ಎಂದು ತುಮಕೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಿಷಾದಿಸಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಭಾರತೀಯರೆಂಬ ಹೆಮ್ಮೆ ನಮ್ಮದು’ ಆಪ್ತ ಉಪನ್ಯಾಸದಲ್ಲಿ ಮಾತನಾಡಿದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು, ಭಾರತದ ಸಂಸ್ಕೃತಿ, ಇಂದಿನ ದಿನಮಾನದಲ್ಲಿ ಭಾರತದ ಹಿರಿಮೆಯನ್ನು ಯುವ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಆಗುತ್ತಿರುವ ಸಮಸ್ಯೆ, ಶಿಕ್ಷಣ ಪದ್ಧತಿ ಹಾಗೂ ಎಲ್ಲವನ್ನು ಪ್ರಶ್ನಿಸುವ ಕೆಲವರ ಮನೋಭಾವದ ಬಗ್ಗೆ ಉದಾಹರಣೆ ಸಮೇತ ಹೇಳಿದರು.
ವೇದ ಉಪನಿಷತ್ ಹೇಳುವ ‘ಮಾತೃ ದೇವೋಭವ.. ಪಿತೃ ದೇವೋಭವ, ಆಚಾರ್ಯ ದೇವೋ ಭವ’ ಎನ್ನುವುದನ್ನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಹೇಳಿದರೆ, ಸರಿಯಾಗಿ ಕಲಿಸಿದರೆ ದೇಶದ ಪೊಲೀಸರಿಗೆ ಕೆಲಸವಿರುವುದಿಲ್ಲ. ಪ್ರಾಚೀನ ಭಾರತ, ಹಿಂದುತ್ವ ನೀಡಿದ ಶಿಕ್ಷಣ ಎಲ್ಲಿದೆ? ನಮ್ಮ ಪಠ್ಯದಲ್ಲಿ ನಿಜವಾಗಿ ಭಾರತೀಯ ದಾರ್ಶನಿಕರು ನೀಡಿದ ಪಾಠವನ್ನು ನೀಡಲಾಗಿದೆಯೇನು? ನಮ್ಮ ಪಠ್ಯದಲ್ಲಿರುವ ವಿಷಯವನ್ನು ಮಕ್ಕಳಿಗೆ ಓದಿಸದಿದ್ದರೆ ದೇಶಕ್ಕೆ ಬಹುದೊಡ್ಡ ಸಮಸ್ಯೆ ಯಾಗುತ್ತದೆ.
ಒಂದು ಉತ್ತಮ ಶಾಲೆಯನ್ನು ಆರಂಭಿಸಿದರೆ, ಸಾವಿರ ಜೈಲುಗಳನ್ನು ತಡೆಯಬಹುದು ಎನ್ನುವುದನ್ನು ಅರಿತುಕೊಳ್ಳಬೇಕಿದೆ ಎಂದು ಹೇಳಿದರು. ಇನ್ಫೋಸಿಸ್ ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಾಗ ವೇದಿಕೆ ಮೇಲಿದ್ದ ಅವರ ಗುರುಗಳಾದ ಚಿದಾನಂದಮೂರ್ತಿಗಳಿಗೆ ಕಾಲಿಗೆ ಎರಗಿ ನಮಸ್ಕರಿಸಿದರು. ವಿವೇಕಾನಂದರು ಹೇಳಿದಂತೆ, ಭಾರತ ಮಾತೆ ಬಂಜೆಯಲ್ಲ. ಆದರೆ ನಾವು ನೋಡಬೇಕಾದ ದೃಷ್ಟಿ ಬದಲಾಗಬೇಕಿದೆ. ಭಾರತದ
ಇತಿಹಾಸದ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲದೇ ನೋಡಿದರೆ, ಭಾರತೀಯನಾಗಲು ಹೆಮ್ಮೆ ಏಕೆ ಎಂದು ತಿಳಿಯುತ್ತದೆ’ ಎಂದರು.
ಮೂಢನಂಬಿಕೆ ಎನ್ನುವ ಬುದ್ಧಿಜೀವಿಗಳು: ಭಾರತದ ಕೆಲವು ಬುದ್ಧಿಜೀವಿಗಳು ಪ್ರಕೃತಿ ಆರಾಧನೆಯನ್ನು, ಮೂರ್ತಿಪೂಜೆಯನ್ನು ಮೂಢನಂಬಿಕೆ ಎಂದು ಅಣಕಿಸು ತ್ತಾರೆ. ಆದರೆ, ಭಾರತೀಯ ಸಂಸ್ಕೃತಿಯಲ್ಲಿರುವ ಈ ಶ್ರೇಷ್ಠ ಕ್ರಮವನ್ನು ಕೀಳಾಗಿ ಮಾತನಾಡುವ ಮನೋರೋಗದ ಸಮಸ್ಯೆ ಶುರುವಾಗಿದೆ. ವಿದೇಶದಲ್ಲಿರುವ ಅನೇಕ ದಾರ್ಶನಿಕರು ಮೂರ್ತಿ ಪೂಜೆಯನ್ನು ಒಪ್ಪಿದ್ದಾರೆ. ಅಧ್ಯಾತ್ಮದಲ್ಲಿ ಮುಂದಿನ ಹಂತ ತಲುಪಲು ಮೂರ್ತಿ ಪೂಜೆ ಅಗತ್ಯವೆಂದು ಅನೇಕರು ಹೇಳಿದ್ದಾರೆ. ನಮ್ಮಲ್ಲಿ ಎಲ್ಲವನ್ನು ವಿರೋಽಸುವ ಮನಸ್ಥಿತಿ ಭಾರತದ ಇಂದಿನ ಸಮಸ್ಯೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ನಾವು ನೋಡುತ್ತಿರುವ ಭಾರತ ನಿರಾಸೆ ಮೂಡಿಸಿದೆ. ಇದು ನಮ್ಮ ಮೂಲ ಭಾರತವಲ್ಲ. ಭಾರತಕ್ಕೆ ಬಂದ ಪರಕೀಯರು ತಮ್ಮ ಅನುಕೂಲಕ್ಕಾಗಿ, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ನಮಗೆ ಅಕ್ಷರಾಭ್ಯಾಸ, ವಿದ್ಯಾಭ್ಯಾಸ ಕೊಟ್ಟರು. ಆದರೆ, ನಿಜವಾದ ಶಿಕ್ಷಣವನ್ನು ನೀಡಲಿಲ್ಲ. ನಮ್ಮ ಮುಂದಿನ ಪೀಳಿಗೆಗೆ ನೈತಿಕ ವಾಗಿ ಉತ್ತಮವಾಗಿರುವ ಶಿಕ್ಷಣವನ್ನು ನೀಡಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿ ಇತ್ತು. ಆದರೆ, ಭಾರತ ಸ್ವಾತಂತ್ರ್ಯ ಬಳಿಕವೂ ಈ ಗುಲಾಮಗಿರಿ ಪದ್ಧತಿಯನ್ನು ೬೦ ವರ್ಷಗಳ ಕಾಲ ಮುಂದುವರಿಸಿದರು. ಆದರೀಗ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಭಾರತದ ನಿಜವಾದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಒಬ್ಬರಿಗೆ ಒಂದೊಂದು ಕಾನೂನು, ಒಂದೊಂದು ಶಿಕ್ಷೆ, ಒಂದೊಂದು ಸಿದ್ಧಾಂತ. ಎಲ್ಲಿಯಾದರೂ ಸಾಮೂಹಿಕವಾಗಿ ಭಾರತೀಯ ಎಂದು ಗುರುತಿಸಿ ಕೊಳ್ಳುವ ಕೆಲಸ ಆಗಬೇಕಿದೆ. ಸಾಮೂಹಿಕ ಶಿಕ್ಷಣವನ್ನು ಮಾಡಲು ಹೊರಟ ನಮ್ಮವರು, ಎಲ್ಲರನ್ನೂ ಶಿಕ್ಷಕಿತರನ್ನಾಗಿ ಮಾಡಲಿಲ್ಲ. ಶಿಕ್ಷಣದಲ್ಲಿ ಕಳಪೆ ವ್ಯವಸ್ಥೆ ಯಿದೆ. ಇಂದಿನ ವಿಶ್ವವಿದ್ಯಾಲಯಗಳು ಯೋಗ್ಯತಾ ಪತ್ರ ನೀಡುತ್ತಿವೆ ಹೊರತು, ಯೋಗ್ಯತೆಯನ್ನಲ್ಲ. ಇಡೀ ಸಮಾಜಕ್ಕೆ ಮಾನವ ಸಂಪನ್ಮೂಲವನ್ನು ನೀಡುವ ಶಿಕ್ಷಕರ ಆಯ್ಕೆ ವೇಳೆ ನಕಲಿ ಪದವಿ ಪತ್ರ ರಾರಾಜಿಸುತ್ತಿದೆ. ಇದು ಭಾರತದ ನಿಜವಾದ ಸವಾಲು. ಶಿಕ್ಷಕರಿಗೆ ಪ್ರಮಾಣಿಕ ಪತ್ರ ನೀಡುವ ಕೆಲಸವಾಗಬೇಕಿದೆ. ಭಾರತಕ್ಕೆ ನಿಜವಾದ ಸಮಸ್ಯೆ ವಿದೇಶಿಗಳಿಗಿಂತ ಹೆಚ್ಚಾಗಿ ದೇಶದೊಳಗೆ ಇರುವ ನಕಲಿ ಪ್ರಜೆಗಳಿಂದ ಎಂದು ಹೇಳಿದರು.
ಎದೆತಟ್ಟಿ ಹೇಳುವ ಬಹುದೊಡ್ಡ ಇತಿಹಾಸ ಭಾರತಕ್ಕಿದೆ: ‘ಭಾರತೀಯ’ ಎಂದು ಎದೆತಟ್ಟಿ ಹೇಳುವ ಬಹುದೊಡ್ಡ ಇತಿಹಾಸ ಭಾರತಕ್ಕಿದೆ. ಯಾವುದೇ ಪೂರ್ವಾ ಗ್ರಹ ಇಲ್ಲದೇ ಅವಲೋಕಿಸಿದಾಗ ಮಾತ್ರ ಇದು ಅರ್ಥಮಾಡಿಕೊಳ್ಳುತ್ತದೆ. ವಿದೇಶಿಗರು, ಇತಿಹಾಸ ತಜ್ಞರು ಭಾರತದ ಬಗ್ಗೆ ಹೇಳಿದ ಮಾತುಗಳನ್ನು ನೋಡಿದರೆ
ಭಾರತಕ್ಕಿರುವ ಅಭ್ಯುದಯ ತಿಳಿಯುತ್ತದೆ. ಭಾರತೀಯನಾಗಿ ಹುಟ್ಟುವುದು ಕಷ್ಟ. ಭಾರತದ ಗಡಿಯಲ್ಲಿದ್ದ ಮಾತ್ರಕ್ಕೆ ಭಾರತದಲ್ಲಿ ಬದುಕಿದ್ದೇನೆ ಎನ್ನುವ ಬದಲು, ಭಾರತದಲ್ಲಿರುವ ಅಧ್ಯಾತ್ಮ ಹಾಗೂ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಆದರೆ, ಕೆಲವರು ಈ ಎಲ್ಲವನ್ನೂ ಮರೆಮಾಚಿರುವುದು, ಪಠ್ಯದ ಸಮಿತಿಯಲ್ಲಿ ಈ ಬಗ್ಗೆ ಹೇಳದಿರುವುದು ಇಂದಿನ ದುಸ್ಥಿತಿಗೆ ಕಾರಣ ಎಂದರು. ರಾಮಾಯಣದಲ್ಲಿ ರಾವಣನ ವಧೆಯಾದ ಬಳಿಕ ಲಕ್ಷ್ಮಣ, ರಾಮನಿಗೆ ಅಯೋಧ್ಯೆಗೆ ವಾಪಸ್ ಹೋಗುವ ಬದಲು, ಲಂಕೆಯಲ್ಲಿಯೇ ಇರೋಣ. ಅಯೋಧ್ಯೆಗಿಂತ ಹೆಚ್ಚು ವೈಭವ, ಶ್ರೀಮಂತಿಕೆಯಿದೆ ಎಂದು ಹೇಳಿದ. ಆದರೆ, ಅದಕ್ಕೆ ರಾಮ, ‘ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸಿ’ ಎಂದು ಹೇಳುತ್ತಾನೆ. ಈ ಮಾತು ನಮ್ಮ ಯಾವ ಪಠ್ಯದಲ್ಲಿದೆ? ನಮ್ಮ ಶಿಕ್ಷಣ ಪದ್ಧತಿ ಎಷ್ಟು ಜನರಿಗೆ ಇದನ್ನು ತಿಳಿಸಿದೆ? ಭಾರತೀಯ ಎನ್ನುವ ಹೆಮ್ಮೆಗೆ ಇದು ಮೊದಲ ಕಾರಣ ಎಂದು ಹೇಳಿದರು. ಭಾರತದ ಇತಿಹಾಸದಲ್ಲಿ ಹೇಳದಿರುವುದು ಏನಿಲ್ಲ.
ಆತ್ಮಹತ್ಯೆ ಮಹಾನ್ ಪಾಪ ಎನ್ನುವುದನ್ನು ಹನುಮಂತ ಹೇಳಿದ್ದಾರೆ. ಸೋತ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವುದನ್ನು ರಾಮಾಯಣದಲ್ಲಿಯೇ ಹೇಳಿದ್ದಾರೆ. ಆದರೆ, ಇದನ್ನು ನಮ್ಮ ಯುವಕರಿಗೆ ತಿಳಿಸುವ ಕೆಲಸವಾಗುತ್ತಿಲ್ಲ. ಸೀತಾರಾಮರನ್ನು ಹೃದಯದಲ್ಲಿ ಸ್ಥಾಪಿಸುವ ಮೂಲಕ, ದೈವವನ್ನು ಹೊಂದಿರುವ ಮಲ್ಲಿಗೆಯ ಬುಟ್ಟಿಯಾಗಬೇಕು ಹೊರತು, 70 ಎಂಎಂ ಚಿತ್ರಗಳ ಹೀರೋಗಳನ್ನು ಅಲ್ಲ ಎಂದು ತೋರಿಸಿದ್ದಾನೆ. ಇನ್ನು ವೈರತ್ವ ಎಲ್ಲಿಯ ತನಕ ಇರಬೇಕು ಎನ್ನುವುದನ್ನು ರಾವಣ ಸತ್ತಾಗ ವಿಭೀಷಣನಿಗೆ ರಾಮ ಹೇಳಿದ್ದಾನೆ. ‘ಗೆದ್ದವನು ಸತ್ತವನ ಅಂತ್ಯಸಂಸ್ಕಾರ ಮಾಡುವುದು ಯುದ್ಧದ ಧರ್ಮ’ ಎಂದು ತೋರಿಸಿ
ದ್ದಾರೆ. ಇಂತಹ ನೂರಾರು ಸನ್ನಿವೇಶ, ಪಾಠಗಳು ರಾಮಾಯಣದಲ್ಲಿದೆ.
ಆದರೆ, ಸ್ವಾತಂತ್ರ್ಯಪೂರ್ವದಲ್ಲಿ ನಮ್ಮನ್ನು ಆಳಿದವರಿಗೆ ಇದರ ಅಗತ್ಯವಿರಲಿಲ್ಲ. ಇನ್ನು ಸ್ವಾತಂತ್ರ್ಯದ ಬಳಿಕ 60 ವರ್ಷಗಳು ನಮ್ಮವರಿಗೆ ಇದನ್ನು ತಿಳಿಸುವುದು ಬೇಕಿರಲಿಲ್ಲ, ಇದು ಭಾರತದ ಸಮಸ್ಯೆ ಎಂದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ದೇಶದ ಬಗ್ಗೆ ಭಕ್ತಿ, ಬದ್ಧತೆಯನ್ನು ತಿಳಿಸುವ
ವಿಶೇಷ ಪ್ರಯತ್ನ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಹಾಭಾರತ ಹೇಳಿದ್ದನ್ನು ಎಂಬಿಎ ಹೇಳುತ್ತಿದೆ: ರಾಮಾಯಣದ ಮಾತು ಇದಾದರೆ, ಮಹಾಭಾರತದಲ್ಲಿ ಶ್ರೀ ಕೃಷ್ಣ, ಧರ್ಮರಾಯರ ಮಾರ್ಗವನ್ನು ನೋಡ ಬೇಕಿದೆ. ಕುರುಕ್ಷೇತ್ರ ಯುದ್ಧಕ್ಕೆ ಹೋದಾಗ ಅರ್ಜುನ ಒಂದು ಕ್ಷಣ ಹೆದರುತ್ತಾನೆ. ಆ ಸಮಯದಲ್ಲಿ ಕೃಷ್ಣ ಅರ್ಜುನನಿಗೆ ‘ನೀನೊಬ್ಬ ನಿರ್ವೀರ್ಯ, ನಪುಂಸಕ’ ಎಂದು ಟೀಕಿಸುತ್ತಾನೆ. ಯುದ್ಧದಲ್ಲಿ ಗೆದ್ದರೆ ಸಾಮ್ರಾಜ್ಯ, ಸತ್ತರೆ ವೀರ ಸ್ವರ್ಗ. ಆದರೆ, ಈ ಎರಡೂ ಅಲ್ಲದೇ ಓಡಿ ಹೋದರೆ ಅಪಕೀರ್ತಿ ಎಂದು ಹೇಳುತ್ತಾನೆ. ಓಡಿ ಹೋಗುವುದು, ಸಾವಿಗಿಂತ ಕೆಟ್ಟದ್ದು. ಈ ಪಾಠವನ್ನು ಯಾರು ಹೇಳಿದ್ದಾರೆ. ಮ್ಯಾನೇಜ್‌ಮೆಂಟ್ ತರಗತಿಗಳಲ್ಲಿ ಹೇಳುವುದು ಇದೇ ಅಲ್ಲವೇ ಎಂದರು.
ಹಿಂದೆ ನಮ್ಮಲ್ಲಿ ಪ್ರತಿಯೊಂದು ಮರಗಳಿಗೆ ದೈವತ್ವದ ಮಹತ್ವವನ್ನು ಕೊಟ್ಟಿದ್ದಕ್ಕೆ, ನಮ್ಮಲ್ಲಿ ಉಸಿರಾಟದ ತೊಂದರೆ, ಆಮ್ಲಜನಕ ಸಮಸ್ಯೆಯಿರಲಿಲ್ಲ. ಹೊಸ ನಾಗರಿಕತೆಗೆ ಮಾರು ಹೋಗಿ, ಅನಾರೋಗ್ಯ ಬೆಳವಣಿಗೆಯಿಂದ ಇಂದಿನ ಈ ದುಸ್ಥಿತಿಗೆ ನಾವೇ ಕಾರಣವಾಗಿದ್ದೇವೆ. ಅಂತರಂಗ-ಬಹಿರಂಗ ಎರಡನ್ನೂ
ಸಮತೋಲನ ಮಾಡುವ ಸಂಸ್ಕೃತಿಯನ್ನು ನಾವು ನಿರ್ಲಕ್ಷ್ಯ ಮಾಡಿದ್ದೇವೆ. ಕೈಗಾರಿಕಾ ಕ್ರಾಂತಿಯ ನೆಪದಲ್ಲಿ ಭಾರತೀಯರು ‘ಬೆಂಕಿಯ ಕಡೆ ಹಾರಿದ ಚಿಟ್ಟೆ’ ಅಂತೆ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಗಳ ಕಾರ್ಯ ಶ್ಲಾಘನೀಯ
ಮೂಲತಃ ಎಲೆಕ್ಟ್ರಾನಿಕ್ ಎಂಜಿನಿಯರ್ ಪದವಿ ಪಡೆದಿರುವ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ತುಮಕೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದಾರೆ.
ಕಳೆದ 25 ವರ್ಷಗಳಲ್ಲಿ 10 ಲಕ್ಷಕ್ಕೂ ಅಽಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರವಚನ ಮಾಡಿರುವ ಶ್ರೀಗಳು, ಸ್ವಾಮಿ ವಿವೇಕಾನಂದರ ಕುರಿತಾದ ಲಿಖಿತ
ಸ್ಪರ್ಧಾತ್ಮಕ ಪರೀಕ್ಷೆಯನ್ನು 1.45 ಲಕ್ಷ ವಿದ್ಯಾರ್ಥಿಗಳಿಗೆ ಮಾಡಿದ್ದಾರೆ. ಇನ್ನು ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಮಾಡುವ ಮೂಲಕ
ವಿವೇಕಾನಂದರ ವಾಣಿಯನ್ನು ಜನರಿಗೆ ಮುಟ್ಟಿಸುತ್ತಿದ್ದಾರೆ. ಇದರೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವ ಶ್ರೀಗಳು, ಕೊಳೆಗೇರಿಯಲ್ಲಿ ವಾಸಿಸುವುದು, ಬಡವರಿಗೆ ವಸ್ತ್ರ, ದವಸ ಧಾನ್ಯ ನೀಡುವುದು, 10 ಸಾವಿರಕ್ಕೂ ಹೆಚ್ಚು ಅಶಕ್ತ ತಾಯಂದಿರಿಗೆ ಸಹಾಯ ಮಾಡಿದ್ದಾರೆ. ಇನ್ನು ಶಾರದಾ ನಿನಾದದ ಕಾರ್ಯಕ್ರಮದ ಮೂಲಕ ೨೫ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಐವರಲ್ಲಿ 4 ಮಕ್ಕಳು ಸನ್ಯಾಸಿಗಳು
ನಮ್ಮ ಪೋಷಕರಿಗೆ ಐವರಲ್ಲಿ ನಾಲ್ಕು ಮಕ್ಕಳು ಸನ್ಯಾಸಿಗಳು. ಆದರೂ ಮನೆಯಲ್ಲಿ ಅಳಲಿಲ್ಲ. ನನ್ನ ಮುತ್ತಜ್ಜ ಕೂಡ ಸನ್ಯಾಸಿ. 1890ರಲ್ಲಿ ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಪದವಿ ಪಡೆದು, ಒಂದು ವಿಭಾಗದ ಮುಖ್ಯಸ್ಥರಾಗಿದ್ದರು. ಬಳಿಕ ವಾಸುದೇವಾನಂದ ಸ್ವಾಮೀಜಿಗಳಾಗಿ ಸನ್ಯಾಸಿ ಯಾದರು. ದಲಿತ, ಹರಿಜನರ ಮಕ್ಕಳಿಗೆ ನೆರವಾದರು. ಮಹಿಳೆಯರಿಗೆ ಕ್ಯಾಂಡಲ್ ಮಾಡುವುದು, ಐಸ್‌ಕ್ಯಾಂಡಿ ಮಾಡುವುದು ಹೇಳಿಕೊಟ್ಟು ಸ್ವಾವಲಂಬನೆ ಪಾಠ ಹೇಳಿದರು. ಇನ್ನು ತಾಯಿಯ ಮುತ್ತಜ್ಜ, ಮುಳಬಾಗಿಲ ಹಳ್ಳಿಯಲ್ಲಿ ಶಾಲೆಗೆ ಜಾಗ ನೀಡಿದರು.
ತಂದೆ-ತಾಯಿಯ ಕುಟುಂಬದಲ್ಲಿ ವೇದ-ಉಪನಿಷತ್, ದೇಶ, ಅವತಾರ ಪುರುಷರನ್ನು ಒಂದು ಕ್ಷಣವೂ ಬೈದಿರುವುದನ್ನು ನಾನು ನೋಡಿಲ್ಲ. ಇನ್ನು ಶಾಲೆ,
ಕಾಲೇಜುಗಳಲ್ಲಿ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಶಿಕ್ಷಕರು ನನಗೆ ಸಿಕ್ಕರು. ಅವರಿಗೆ ಮಕ್ಕಳ ಜೀವನ ರೂಪಿಸುವುದೇ ಅವರ ಮುಂದಿದ್ದ ಏಕೈಕ ಕೆಲಸ. ಆದರೆ, ಈ ರೀತಿಯ ಶಿಕ್ಷಕರು ಈಗ ಎಲ್ಲಿದ್ದಾರೆ? ಎಂದು ತಮ್ಮ ಶಿಕ್ಷಕರು, ಮನೆಯ ಸದಸ್ಯರನ್ನು ನೆನಪಿಸಿಕೊಂಡರು.
ಜೂಜು, ಹೆಂಡ ಮಾರಿ, ಅದರಿಂದ ಬರುವ ಹಣದಿಂದ ಸರಕಾರ ನಡೆಸಬೇಕು ಎನ್ನುವುದು ಅನಿವಾರ್ಯವಾದರೆ, ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಭಾರತದಲ್ಲಿ ಜವಾಬ್ದಾರಿ ಯುತ ಸ್ಥಾನದಲ್ಲಿರುವವರು ನಿದ್ರೆಗೆ ಜಾರಿದ್ದಾರೆ. ಇದೇ ಇಂದಿನ ಸಮಸ್ಯೆ.
ಕ್ಯಾಥೊಲಿಕ್ ಅನ್ನು ಪ್ರಶ್ನಿಸುತ್ತಿದ್ದ ಅನೇಕರಿಗೆ ಉತ್ತರಿಸುವುದು ಸವಾಲಾಗಿದ್ದ ವೇಳೆ, ವೈಜ್ಞಾನಿಕ ಸವಾಲಿನ ತಾಕತ್ತು ನೀಡಿದ್ದು ಸ್ವಾಮಿ ವಿವೇಕಾನಂದರು.
ದಾಸ್ಯ ರಾಷ್ಟ್ರದ ಪ್ರತಿನಿಧಿಯಾಗಿ, ಆಳುವ ರಾಷ್ಟ್ರದ ಮಿತ್ರ ಅಮೆರಿಕದ ವೇದಿಕೆಯಲ್ಲಿ ಮಾತನಾಡಲು ಹೋಗಿದ್ದ ವಿವೇಕಾನಂದರ ಮಾತನ್ನು ಆಲಿಸಲು,
ರಾಜಮನೆತನದವರು ತಲೆಮರೆಸಿಕೊಂಡು ಬಂದಿದ್ದರು. ಇದು ಭಾರತೀಯ ಶಕ್ತಿ.
ವಿವೇಕಾನಂದರ ಮಾತು ಕೇಳಲು ಬ್ರಿಟಿಷ್ ರಾಜಮನೆತನದವರು ತಲೆಮರೆಸಿಕೊಂಡು ಬಂದಿದ್ದರು. ಇದು ವಿವೇಕಾನಂದ ಶಕ್ತಿ ಒಂದು ಉತ್ತಮ ಶಾಲೆ ಆರಂಭಿಸಿದರೆ 1000 ಜೈಲುಗಳನ್ನು ತಡೆಯಬಹುದು. ಹಿಂದಿನ ಭಾರತ ನೀಡಿರುವ ಶಿಕ್ಷಣವನ್ನು ನಾನು ನಮ್ಮ ಪೀಳಿಗೆಗೆ ನೀಡುತ್ತಿದ್ದೇವೆಯೇ?
ಭಾರತೀಯತೆ, ಅದನ್ನು ಅಳವಡಿಸಿಕೊಂಡ ಜೀವನ ಕ್ರಮ ನಮ್ಮ ಮಕ್ಕಳಿಗೆ ಪರಿಚಯವಾಗುತ್ತಿದೆಯೇ? ಅರಣ್ಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಾಲುಮರ
ತಿಮ್ಮಕ್ಕ ಮಾದರಿಯಾಗಲಿಲ್ಲವೇ? ಹಲವು ವಿದೇಶಿ ಚಿಂತಕರಿಗೆ ಒಪ್ಪಿದ ವಾದ, ಭಾರತದ ಜೀವನ ಕ್ರಮವನ್ನು ವಿರೋಧಿಸುವ ಕೆಲವು ದೇಶದಲ್ಲಿದ್ದಾರಲ್ಲವೇ?
ಶಿಕ್ಷಣ ಪದ್ಧತಿಯಲ್ಲಿ ನಕಲು ಮಾಡಿಸಿ, ಯೋಗ್ಯತಾ ಪ್ರಮಾಣ ಪತ್ರ ನೀಡುವ ಕೆಲಸವಾಗುತ್ತಿದೆ. ಮೆರಿಟ್ ಅನ್ನು ಅವಮಾನಿಸಿದ್ದರಿಂದ ಅನೇಕ ಪ್ರತಿಭಾವಂತರು ದೇಶಬಿಟ್ಟು ಹೋಗುತ್ತಿದ್ದಾರೆ. ಎಲ್ಲಿಯಾದರೂ ಸಾಮೂಹಿಕವಾಗಿ ಭಾರತೀಯ ಎಂದು ಗುರುತಿಸಿಕೊಳ್ಳುವ ಕೆಲಸ ಆಗಬೇಕಿದೆ.
೦೦೦೦