Tuesday, 19th November 2024

Indira Gandhi Birth Anniversary: ಇಂದಿರಾ ಗಾಂಧಿ ಜಾರಿಗೆ ತಂದ ಯೋಜನೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ; ಡಿ.ಕೆ. ಶಿವಕುಮಾರ್

Indira Gandhi Birthday Anniversary

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಹಾಗೂ ಇಂದಿರಾ ಗಾಂಧಿ (Indira Gandhi Birth Anniversary) ಅವರು ಜಾರಿಗೆ ತಂದಿರುವ ಉಳುವವನೆ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ಹಾಗೂ ಯಾವುದೇ ಸರ್ಕಾರಗಳಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜವಹಾರ್ ಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದ ತನಕ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಒಂದೇ ಒಂದು ಯೋಜನೆಗಳನ್ನು ನಿಲ್ಲಿಸುವ ಶಕ್ತಿ, ಧೈರ್ಯ ಯಾರಿಗೂ ಬರಲಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Job News: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ 164 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲ

ಚನ್ನಪಟ್ಟಣದ ಉಪಚುನಾವಣಾ ಸಭೆಯಲ್ಲಿ ಮಾತನಾಡುವಾಗ ಹಿರಿಯ ಮಹಿಳೆಯೊಬ್ಬರು ಇಂದಿರಾಗಾಂಧಿ ಅವರ ಪಿಂಚಣಿ ಯೋಜನೆಯನ್ನು ನೆನಪಿಸಿಕೊಂಡು ʼಮೊದಲಿಗೆ 40 ರೂಪಾಯಿ ಕೊಡುತ್ತಿದ್ದರುʼ ಎಂದು ತುಂಬಿದ ಸಭೆಯಲ್ಲಿ ಹೇಳಿದರು. ಜನರು ಅವರನ್ನು ಅನೇಕ ಜನಪರ ಯೋಜನೆಗಳಿಗಾಗಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲವಾಯಿತು. ನೆಹರು ಅವರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗಟ್ಟಾಗಿ ಇಟ್ಟಿದೆ ಎಂದರು.

ಬಡವರಿಗೆ ಭೂಮಿ ನೀಡಿದ ಕಾಂಗ್ರೆಸ್

ಭಾರತ್ ಜೋಡೋ ಯಾತ್ರೆ ಸಂದರ್ಭ ಮೊಣಕಾಲ್ಮೂರು ಬಳಿ ಟೀ ಕುಡಿಯಲು ಬಿಡುವು ತೆಗೆದುಕೊಂಡಾಗ ಅಜ್ಜಿಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ನಿಂತಿದ್ದರು. ಆಗ ರಾಹುಲ್ ಗಾಂಧಿ ಅವರು ಗಮನಿಸಿ ಕೇಳಿದಾಗ, ʼನಿಮ್ಮ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಇದನ್ನು ಬೆಳೆದಿದ್ದೇವೆʼ ಎಂದು ಅದನ್ನು ರಾಹುಲ್ ಗಾಂಧಿ ಅವರಿಗೆ ನೀಡಿದರು. ಇದು ಉಳುವವನಿಗೆ ಭೂಮಿ ಕಾರ್ಯಕ್ರಮದ ಫಲ’ ಎಂದು ಅವರು ತಿಳಿಸಿದರು.

ಇಂದಿರಾ ಗಾಂಧಿ ಅವರ ಯುಗದಲ್ಲಿ ಬದುಕಿರುವುದು ಪುಣ್ಯ

ಇಂದಿರಾ ಗಾಂಧಿ ಅವರ ಯುಗದಲ್ಲಿ ನಾವು ಬದುಕಿದ್ದೇವೆ ಎಂಬುದೇ ನಮ್ಮ ಪುಣ್ಯ. ಈ ದೇಶದ ಉಕ್ಕಿನ ಮಹಿಳೆಯನ್ನು ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಅವರ ಪ್ರತಿಯೊಂದು ಕಾರ್ಯಕ್ರಮ, ದಿಟ್ಟ ಹೆಜ್ಜೆ, ಹೋರಾಟ, ಧೈರ್ಯ, ನಾಯಕತ್ವ ಹಾಗೂ ತ್ಯಾಗ ಹಾಗೂ ಈ ದೇಶ ಭವಿಷ್ಯಕ್ಕೆ ನೆಹರು ಅವರ ಕುಟುಂಬ ನೀಡಿದ ಮಾರ್ಗದರ್ಶನವನ್ನು ದೇಶದ ಜನರು ಮರೆಯಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಈ ಸುದ್ದಿಯನ್ನೂ ಓದಿ | BPL Ration Card: ಲಕ್ಷಾಂತರ ಬಿಪಿಎಲ್‌ ರೇಷನ್‌ ಕಾರ್ಡ್‌ ರದ್ದು, ಅನರ್ಹರು ಯಾರು?

ರಾಜ್ಯದ ಜನರಿಗೆ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ನೀಡುತ್ತದೆ. ಮತ್ತೆ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಬಳಿ ತಂತ್ರ, ಮಂತ್ರ, ಒಗ್ಗಟ್ಟು, ನಾಯಕತ್ವ ಹಾಗೂ ಶಕ್ತಿಯಿದೆ. ಕಾರ್ಯಕರ್ತರು ಆಶಾಭಾವನೆ ಮತ್ತು ಒಗ್ಗಟ್ಟಿನಿಂದ ನಮ್ಮ ಜತೆ ಇದ್ದರೆ ಸಾಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.