Thursday, 21st November 2024

High Court: ಲೈಸೆನ್ಸ್, ಎಫ್‌ಸಿ ಇಲ್ಲದಿದ್ದರೂ ಸಂತ್ರಸ್ತರಿಗೆ ವಿಮಾ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್

Marakumbi case

ಬೆಂಗಳೂರು: ಅಪಘಾತಕ್ಕೆ ಕಾರಣವಾದ ವಾಹನ ಅಪಘಾತದ ಸಮಯದಲ್ಲಿ ಮಾನ್ಯವಾದ ಪರವಾನಗಿ (License) ಮತ್ತು ಫಿಟ್‌ನೆಸ್ ಪ್ರಮಾಣಪತ್ರವನ್ನು (Fitness certificate) ಹೊಂದಿರದಿದ್ದರೂ, ವಿಮಾ (Insurance) ಕಂಪನಿಯು ಹಕ್ಕುದಾರರಿಗೆ ಪಾವತಿಸಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲು ಮತ್ತು ಅದನ್ನು ವಾಹನದಿಂದ ವಸೂಲು ಮಾಡಲು ಬಾಧ್ಯನಾಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ (Karnataka High court) ಹೇಳಿದೆ.

ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವಾದವನ್ನುನ್ಯಾಯಮೂರ್ತಿ ಟಿ. ಜಿ ಶಿವಶಂಕರೇಗೌಡ ಅವರ ಏಕಸದಸ್ಯ ಪೀಠ ಮಾನ್ಯ ಮಾಡಲಿಲ್ಲ. ಅಪಘಾತದ ಸಮಯದಲ್ಲಿ, ವಾಹನವು ಮಾನ್ಯ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸಿತ್ತು. ವಾಹನದ ಮಾಲೀಕರ ಕಡೆಯಿಂದ “ಮೂಲಭೂತ ಉಲ್ಲಂಘನೆ” ಆಗಿದೆ ಎಂಬ ಕಂಪನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಆದ್ದರಿಂದ ವಿಮಾ ಕಂಪನಿಯು ತನ್ನ ಹೊಣೆಗಾರಿಕೆಯನ್ನು ತಪ್ಪಿಸಲಾಗದು, ಮತ್ತು ಅದರ ಮಾಲೀಕರು ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.

ವಾಹನದ ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 56 (ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ), 66 (ಪರವಾನಗಿಗಳ ಅಗತ್ಯತೆ) ಮತ್ತು ನಿಯಮ 52 (ನೋಂದಣಿ ಪ್ರಮಾಣಪತ್ರದ ನವೀಕರಣ) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕೇಂದ್ರ ಮೋಟಾರು ವಾಹನಗಳ (CMV) ನಿಯಮಗಳು, ನ್ಯಾಶನಲ್ ಇನ್ಶೂರೆನ್ಸ್ ಕಂ.ಲಿ., ವಿ. ಸ್ವರಣ್ ಸಿಂಗ್ ಮತ್ತು ಇತರರು (2004) ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ.ಲಿ., ಬಿಜಾಪುರ ವರ್ಸಸ್ ಯಲ್ಲವ್ವ ಮತ್ತು ಇನ್ನೊಬ್ಬ (2020) ಪ್ರಕರಣದಲ್ಲಿ ಹೈಕೋರ್ಟ್ ಪೂರ್ಣ ಪೀಠದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಶಿವಶಂಕರೇಗೌಡ ಆದೇಶ ಪ್ರಕಟಿಸಿದ್ದಾರೆ. ಅದರಂತೆ ಪರಿಹಾರವನ್ನು ಪಾವತಿಸಲು ವಾಹನದ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿತು. ಎಂಟು ವಾರಗಳಲ್ಲಿ ಮೊತ್ತವನ್ನು ಠೇವಣಿ ಮಾಡುವಂತೆ ಮತ್ತು ಅದೇ ಪ್ರಕ್ರಿಯೆಯಲ್ಲಿ ವಾಹನದ ಮಾಲೀಕರಿಂದ ಅದನ್ನು ವಸೂಲಿ ಮಾಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.

ಮೃತರ ಮರಣದ ಹೊಣೆಗಾರಿಕೆ ಮತ್ತು ಕಾರಣವನ್ನು ಪ್ರಶ್ನಿಸಿ ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ (MACT) ಮತ್ತು ವಿಮಾ ಕಂಪನಿ ನೀಡಿದ ಪರಿಹಾರವನ್ನು ಹೆಚ್ಚಿಸುವಂತೆ ಮೃತರ ಪತ್ನಿ ಸಲ್ಲಿಸಿದ ಅಡ್ಡ ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ : 2013ರ ಜೂನ್ 17 ರಂದು ಹೊಸಕೋಟೆ-ಚಿಕ್ಕತಿರುಪತಿ ಮಾರ್ಗದಲ್ಲಿ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದ ಸೈಕಲ್ ಸವಾರ ನಂದೀಶಪ್ಪ ಎಂಬುವರಿಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಕುಟುಂಬಸ್ಥರಿಗೆ 13.88 ಲಕ್ಷ ರೂ. ಪರಿಹಾರ ನೀಡಲು ಸರಕು ಸಾಗಣೆ ವಾಹನಕ್ಕೆ ವಿಮಾ ಪಾಲಿಸಿ ವಿತರಿಸಿದ್ದ ಶ್ರೀರಾಮ ಜನರಲ್ ವಿಮಾ ಕಂಪನಿ ಸೂಚಿಸಿತ್ತು.

ಇದನ್ನೂ ಓದಿ: Court News : ರಾಮ, ಹಿಂದೂಗಳಿಗೆ ಅಪಮಾನ : ಬಿಲಾಲ್ ಸಲ್ಲಿಸಿದ್ದ ಎಫ್‌ಐಆರ್‌ ರದ್ದುಅರ್ಜಿ ತಿರಸ್ಕರಿಸಿದ ಹೈಕೋರ್ಟ್‌