ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (Internal Reservation) ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ ಆಯೋಗ (Committee) ರಚನೆ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ (Justice Nagamohan Das) ಅಧ್ಯಕ್ಷತೆಯ ಏಕಸದಸ್ಯ ಆಯೋಗ ರಚನೆ ಮಾಡಿ ರಾಜ್ಯ ಸರ್ಕಾರ (Karnataka government) ಆದೇಶಿಸಿದ್ದು, ಎರಡು ತಿಂಗಳೊಳಗೆ ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಅಗತ್ಯ ದತ್ತಾಂಶವನ್ನು ಸಂಗ್ರಹಣೆಯನ್ನು ಎಲ್ಲಿಂದ ಮಾಡಬೇಕು ಎಂಬುವುದನ್ನು ಪರಿಶೀಲನೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಸಚಿವ ಸಂಪುಟ ನಿರ್ಧಾರದಂತೆ ನಿನ್ನೆ (ನವೆಂಬರ್ 13) ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಒಳ ಮೀಸಲಾತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ದಾಖಲೆಗಳು ಹಾಗೂ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದ್ದು, 2 ತಿಂಗಳಲ್ಲಿ ಆಯೋಗ ವರದಿ ನೀಡಲಿದೆ. ಬಳಿಕ ಮುಂದಿನ ಹೆಜ್ಜೆಯನ್ನು ಇಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುತ್ತೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಮೂಲಕ ಅಸ್ಪೃಶ್ಯ ಜಾತಿಗಳಿಗೆ ಸೇರಿದವರಿಗೆ ನ್ಯಾಯ ಒದಗಿಸಬೇಕೆಂದು ಮೂರು ದಶಕಗಳಿಂದ ಹೋರಾಟ ನಡೆಯುತ್ತಲೇ ಇತ್ತು. ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಒಳಮೀಸಲಾತಿ ಬಗ್ಗೆ ಬೇಡಿಕೆ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಆಯೋಗ ರಚಿಸುವ ಪ್ರಸ್ತಾವ ಸರ್ಕಾರದ ಮುಂದೆ ಇತ್ತು. ಬಳಿಕ ಅಸ್ತತ್ವಕ್ಕೆ ಬಂದ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, 2005ರಲ್ಲಿ ಅಧ್ಯಯನ ನಡೆಸಿ ಶಿಫಾರಸು ಮಾಡಲು ಎ.ಜಿ ಸದಾಶಿವ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಶೆ.15ರ ಮೀಸಲಾತಿಯನ್ನು ಎಡಗೈಗೆ ಶೆ.6, ಬಲಗೈಗೆ ಶೆ.5.5, ಅಸ್ಪೃಶ್ಯ ಉಪಜಾತಿಗಳಿಗೆ ಶೇ 3 ಹಾಗೂ ಈ ಮೂರು ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ 1ರಷ್ಟು ಮೀಸಲಾತಿ ನೀಡಬಹುದು ಎಂದು ಸದಾಶಿವ ಆಯೋಗವು 2012ರಲ್ಲೇ ಅಂದಿನ ಮುಖ್ಯಂತ್ರಿ ಡಿವಿ ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಿದ್ದ ಶಿಫಾರಸು ಮಾಡಿತ್ತು.