Thursday, 21st November 2024

Invest Karnataka: 4,071 ಕೋಟಿ ರೂಪಾಯಿಯ 88 ಯೋಜನೆಗಳಿಗೆ ಅನುಮೋದನೆ, 10,585 ಉದ್ಯೋಗಾವಕಾಶ ಸೃಷ್ಟಿ

MB Patil

‌ಬೆಂಗಳೂರು: 50 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳು ಸೇರಿದಂತೆ ಒಟ್ಟು 88 ಯೋಜನೆಗಳಿಂದ 4,071.11 ಕೋಟಿ ರೂ. ಬಂಡವಾಳ ಹೂಡಿಕೆಯ (Invest Karnataka) ಹಾಗೂ 10,585 ಜನರಿಗೆ ಉದ್ಯೋಗವಕಾಶ ಲಭಿಸುವ ಯೋಜನೆಗಳಿಗೆ ಗುರುವಾರ ಇಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಒಪ್ಪಿಗೆ ನೀಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (MB Patil) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆನೇಕಲ್‌ನ ವೀರಸಂದ್ರ ಗ್ರಾಮದಲ್ಲಿ 485 ಕೋಟಿ ರೂ. ಹೂಡಿಕೆಯೊಂದಿಗೆ 1,000 ಮಂದಿಗೆ ಐಟಿ ಮತ್ತು ಐಟಿಇಎಸ್‌ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಅರಾಟ್‌ ಒನ್‌ ವರ್ಲ್ಡ್‌ ಪ್ರೈ.ಲಿ., (ಈ ಹಿಂದಿನ ಆರ್‌ಜಿಆರ್‌ ಟೆಕ್‌ಪಾರ್ಕ್‌ ಪ್ರೈ.ಲಿ.) ಕಂಪನಿಗೆ ಅನುಮತಿ ನೀಡಿದೆ.

ಈ ಸುದ್ದಿಯನ್ನೂ ಓದಿ | Mysuru Dasara 2024: ದಸರಾ ವೇಳೆ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್‌ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ

ಐಸ್ ಕ್ರೀಂ ಘಟಕ ಸ್ಥಾಪನೆಗೆ ಒಪ್ಪಿಗೆ

ಡೇರಿ ಕ್ಲಾಸಿಕ್ ಐಸ್ ಕ್ರೀಂ ಸಂಸ್ಥೆಯು, ಕಲ್ಬುರ್ಗಿ ಜಿಲ್ಲೆಯ ನಂದೂರು ಕಾಸರಟಗಿ ಕೈಗಾರಿಕಾ ಪ್ರದೇಶದಲ್ಲಿ ₹285 ಕೋಟಿ ವೆಚ್ಚದಲ್ಲಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು ಇದರಿಂದ 900 ಜನರಿಗೆ ಉದ್ಯೋಗ ಸಿಗಲಿದೆ. ಫ್ರೋಜನ್ ಡೆಸರ್ಟ್, ಕುಲ್ಫಿ ಇತ್ಯಾದಿ ಕೋಲ್ಡ್ ಸ್ಟೋರೇಜ್ ಸಹಿತ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಪಾಟೀಲ ವಿವರಿಸಿದರು.

3,302 ಜನರಿಗೆ ಉದ್ಯೋಗಾವಕಾಶ

ರೂ. 50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 14 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ₹ 2,031.76 ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಹಾಗೂ 3,302 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. 15 ಕೋಟಿಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 68 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 1,355.07 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 5,049 ಜನರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಹೇಳಿದರು.

ಹೆಚ್ಚುವರಿ ಬಂಡವಾಳ ಹೂಡಿಕೆಯ 6 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 684.28 ಕೋಟಿ ರೂ. ಬಂಡವಾಳ ಹರಿದುಬರಲಿದೆ ಹಾಗೂ ಅಂದಾಜು 2,234 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ದ್ವೇಷದ ರಾಜಕಾರಣಕ್ಕೆ ಕೊನೆಹಾಡಲು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ: ಡಿ.ಕೆ. ಶಿವಕುಮಾರ್

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮಹೇಶ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.